Bengal CM Walked Out: ನೀತಿ ಆಯೋಗದ ಸಭೆಯನ್ನು ಅರ್ಧಕ್ಕೆ ಬಿಟ್ಟು ಹೊರನಡೆದ ಮಮತಾ ಬ್ಯಾನರ್ಜಿ !

ಆರೋಪ ನಿರಾಕರಿಸಿದ ಸರಕಾರ

ನವ ದೆಹಲಿ – ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನವದೆಹಲಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯನ್ನು ಅರ್ಧಕ್ಕೆ ಬಿಟ್ಟು ಹೊರನಡೆದರು. ಪ್ರಧಾನಿ ನರೇಂದ್ರ ಮೋದಿ ನೀತಿ ಆಯೋಗದ 9 ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಬಿಜೆಪಿ ಸಹಿತ ಇತರ ರಾಜ್ಯಗಳ ಮುಖ್ಯಮಂತ್ರಿಗಳೂ ಭಾಗವಹಿಸಿದ್ದರು.

ಸಭೆಯಿಂದ ಹೊರನಡೆಯಲು ಕಾರಣ ತಿಳಿಸಿದ ಮಮತಾ ಬ್ಯಾನರ್ಜಿಯವರು, ‘ಬಿಜೆಪಿಯ ಮುಖ್ಯಮಂತ್ರಿಗಳಿಗೆ ಮಾತನಾಡಲು 10 ರಿಂದ 20 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು, ಆದರೆ ನನಗೆ ಕೇವಲ 5 ನಿಮಿಷ ಮಾತ್ರ ಸಿಕ್ಕಿತು. ನಾನು ಬಂಗಾಳದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾಗ ನನ್ನ ಮೈಕ್ ಬಂದ್ ಮಾಡಲಾಗಿತ್ತು. ನನಗೆ ನನ್ನ ಸಂಪೂರ್ಣ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ನೀಡಲಿಲ್ಲ. ಇಲ್ಲಿ ನನ್ನ ಮತ್ತು ಬಂಗಾಳದ ಜನರಿಗೆ ಅವಮಾನ ಮಾಡಲಾಗಿದೆ’ ಎಂದಿದ್ದಾರೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಮತಾ ಬ್ಯಾನರ್ಜಿ ಅವರ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದಾರೆ.

‘ಇಂಡಿ’ ಮೈತ್ರಿಕೂಟದ 7 ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಹಾಜರಾಗಿಲ್ಲ. ಇವರಲ್ಲಿ ಎಂ.ಕೆ .ಸ್ಟಾಲಿನ್ (ತಮಿಳುನಾಡು), ಸಿದ್ದರಾಮಯ್ಯ (ಕರ್ನಾಟಕ), ರೇವಂತ್ ರೆಡ್ಡಿ (ತೆಲಂಗಾಣ), ಸುಖವಿಂದರ್ ಸಿಂಗ್ ಸುಖು (ಹಿಮಾಚಲ ಪ್ರದೇಶ), ಪಿ. ವಿಜಯನ್ (ಕೇರಳ), ಹೇಮಂತ್ ಸೊರೆನ್ (ಜಾರ್ಖಂಡ್), ಭಗವಂತ್ ಮಾನ್ (ಪಂಜಾಬ್) ಮತ್ತು ಅರವಿಂದ್ ಕೇಜ್ರಿವಾಲ್ (ದೆಹಲಿ) ಇವರುಗಳು ಸೇರಿದ್ದಾರೆ.

ನೀತಿ ಆಯೋಗವನ್ನು ರದ್ದುಪಡಿಸಿ ಯೋಜನಾ ಆಯೋಗವನ್ನು ಮರಳಿ ತರಬೇಕು ಎಂದು ಮಮತಾ ಬ್ಯಾನರ್ಜಿ ಸಭೆಯ ಮೊದಲು ಹೇಳಿದ್ದರು. ಯೋಜನಾ ಆಯೋಗವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಲ್ಪನೆಯಾಗಿತ್ತು.