ತೆಲಂಗಾಣ: ಆಟವಾಡುತ್ತಿದ್ದ ಚಿಕ್ಕ ಮಕ್ಕಳ ಮೇಲೆ ಬೀದಿ ನಾಯಿಗಳಿಂದ ಮಾರಣಾಂತಿಕ ದಾಳಿ

ಇಂತಹ ಘಟನೆಗಳ ಬಗ್ಗೆ ವರದಿ ಸಲ್ಲಿಸಲು ತೆಲಂಗಾಣ ಉಚ್ಚನ್ಯಾಯಾಲಯದ ಆದೇಶ

ಸಂಗಾರೆಡ್ಡಿ (ತೆಲಂಗಾಣ) – ಶ್ರೀನಗರ ವಸತಿ ಪ್ರದೇಶದಲ್ಲಿ ಒಂದು ಪುಟ್ಟ ಮಗುವನ್ನು ನಾಯಿ ಕಚ್ಚಿ ಎಳೆದುಕೊಂಡು ಹೋಗುತ್ತಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ ಮಗು ಮನೆಯ ಹೊರಗಿನ ರಸ್ತೆಯ ಮೇಲೆ ಬಂದಾಗ ನಾಯಿಗಳ ಗುಂಪು ಏಕಾಏಕಿ ಆ ಮಗುವಿನ ಮೇಲೆ ದಾಳಿ ಮಾಡಿದೆ. ಆ ಮಗು ತಪ್ಪಿಸಿಕೊಳ್ಳಲು ಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಆ ನಾಯಿಗಳು ಮಗುವನ್ನು ಕೆಳಗೆ ಬೀಳಿಸಿ ಕಚ್ಚಿದವು. ಒಂದು ಕಡೆಯಿಂದ ಮತ್ತೊಂದೆಡೆಗೆ ಎಳೆದುಕೊಂಡು ಹೋದವು. ತಲೆ, ಕೈ, ಕಾಲು ಹೀಗೆ ಸಿಕ್ಕ ಕಡೆಯಲ್ಲೆಲ್ಲ ನಾಯಿಗಳು ಕಚ್ಚುತ್ತಿದ್ದವು. ಅದೃಷ್ಟವಶಾತ್ ಅದೇ ಸಮಯದಲ್ಲಿ ಪಕ್ಕದ ಮನೆಯವರೊಬ್ಬರು ಅಲ್ಲಿಗೆ ಓಡಿ ಬಂದು, ಆ ಮಗುವನ್ನು ರಕ್ಷಿಸಿದರು. ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದಲ್ಲಿ ಚಿಕ್ಕ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಹೆಚ್ಚುತ್ತಿರುವ ಘಟನೆಗಳನ್ನು ತೆಲಂಗಾಣ ಉಚ್ಚನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ. ನ್ಯಾಯಾಲಯವು ಮಹಾನಗರಪಾಲಿಕೆ, ಕಂದಾಯ ಹಾಗೂ ಪಶುವೈದ್ಯಾಧಿಕಾರಿಗಳಿಗೆ ವಾರದೊಳಗೆ ಹಾಜರು ಪಡಿಸಲು ನಿರ್ದೇಶನ ನೀಡಿದೆ. ಈ ವರದಿಯಲ್ಲಿ `ಬೀದಿ ನಾಯಿಗಳ ಸಂಖ್ಯೆಯ ಮೇಲೆ ನಿಯಂತ್ರಿಸಲು ಮತ್ತು ಅಂತಹ ದಾಳಿಗಳನ್ನು ತಡೆಯಲು ಕೈಗೊಂಡ ಉಪಾಯಯೋಜನೆಗಳ ವಿವರಗಳನ್ನು ಒಳಗೊಂಡಿರಬೇಕು’ ಎಂದು ನ್ಯಾಯಾಲಯ ಆದೇಶಿಸಿದೆ.

ಸಂಪಾದಕೀಯ ನಿಲುವು

ಬೀದಿ ನಾಯಿಗಳ ಸಮಸ್ಯೆ ಸಂಪೂರ್ಣ ದೇಶದಲ್ಲಿದೆ; ಆದರೆ ಈ ಸಮಸ್ಯೆ ರಾಷ್ಟ್ರೀಯ ಸಮಸ್ಯೆಯಾಗಿದೆಯೆಂದು, ಕೇಂದ್ರ ಸರಕಾರಕ್ಕಾಗಲಿ, ರಾಜ್ಯ ಸರಕಾರಕ್ಕಾಗಲಿ ಅನಿಸುವುದಿಲ್ಲ! ಇದರಿಂದಾಗಿ ಈ ಸಮಸ್ಯೆಗೆ ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಜನತೆಗೆ ಬೀದಿ ನಾಯಿಗಳ ದಾಳಿಯನ್ನು ಪದೇ-ಪದೇ ಎದುರಿಸಬೇಕಾಗುತ್ತಿದೆ, ಇದು ನಾಚಿಕೆಗೇಡಿನ ಸಂಗತಿ!