Public Examination Act 2024 : ಪ್ರಶ್ನೆ ಪತ್ರಿಕೆ ಲೀಕ್ ಮಾಡಿದರೆ 10 ವರ್ಷಗಳವರೆಗೆ ಕಾರಾಗೃಹ ವಾಸ ಮತ್ತು 1 ಕೋಟಿ ರೂಪಾಯಿ ದಂಡ !

`ಸಾರ್ವಜನಿಕ ಪರೀಕ್ಷಾ ನಿಯಮ 2024′ ರ ನಿಬಂಧನೆ ದೇಶಾದ್ಯಂತ ಜಾರಿ !

ನವದೆಹಲಿ – ಕೇಂದ್ರ ಸರ್ಕಾರವು ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣಗಳ ನಂತರ ಈಗ ‘ಸಾರ್ವಜನಿಕ ಪರೀಕ್ಷಾ ನಿಯಮಗಳು 2024’ ರ ನಿಬಂಧನೆಗಳನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಪರೀಕ್ಷೆಯಲ್ಲಿ ಆಗುವ ವಂಚನೆಯನ್ನು ತಹಬಂದಿಗೆ ತರಲು ಕನಿಷ್ಠ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಈ ನಿಬಂಧನೆಯಲ್ಲಿ ಹೇಳಲಾಗಿದೆ. ಇದರೊಂದಿಗೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದರೆ 5ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ಕನಿಷ್ಠ 1 ಕೋಟಿ ರೂ. ದಂಡ ವಿಧಿಸುವ ನಿಯಮ ಜಾರಿಗೊಳಿಸಲಾಗಿದೆ. ‘ಸಾರ್ವಜನಿಕ ಪರೀಕ್ಷಾ ಕಾಯ್ದೆ 2024’ ಅನ್ನು ಫೆಬ್ರವರಿ ತಿಂಗಳಲ್ಲಿ ಸಂಸತ್ತು ಅನುಮೋದನೆ ನೀಡಿತ್ತು.

1. ಪರೀಕ್ಷೆಗಳನ್ನು ಆಯೋಜಿಸುವ ಸಂಸ್ಥೆ ಅಥವಾ ಯಾವುದೇ ಇತರ ಸಂಸ್ಥೆಯು ಯಾವುದೇ ಸಂಘಟಿತ ಅಪರಾಧವನ್ನು ಮಾಡಿದರೆ, ಅವರಿಗೆ ಕನಿಷ್ಠ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಮತ್ತು ಈ ಶಿಕ್ಷಾ ಅವಧಿಯನ್ನು 10 ವರ್ಷಗಳವರೆಗೆ ವಿಸ್ತರಿಸಬಹುದು. ಅಥವಾ 1 ಕೋಟಿ ರೂ. ದಂಡ ವಿಧಿಸಲಾಗುವುದು.

2. ಯಾವುದೇ ಸಂಸ್ಥೆಯು ಸಂಘಟಿತ ಪ್ರಶ್ನೆಪತ್ರಿಕೆ ಲೀಕ್ ಮಾಡುವ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅದರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನ ಅಡಿಯಲ್ಲಿ ಅವಕಾಶವಿದೆ ಮತ್ತು ಪರೀಕ್ಷೆಯ ವೆಚ್ಚವನ್ನು ಆ ಸಂಸ್ಥೆಯಿಂದ ವಸೂಲು ಮಾಡಬಹುದು. ಈ ಕಾನೂನು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ದಂಡಾತ್ಮಕ ನಿಬಂಧನೆ ಕ್ರಮಗಳಿಂದ ರಕ್ಷಿಸುತ್ತದೆ.

3. ಪರೀಕ್ಷೆಯ ಸಮಯದಲ್ಲಿ ಯಾವುದೇ ಅಭ್ಯರ್ಥಿಯು ತಪ್ಪು ಮಾರ್ಗವನ್ನು ಬಳಸುವಾಗ ಸಿಕ್ಕಿಬಿದ್ದರೆ, ಪರೀಕ್ಷೆಯನ್ನು ನಡೆಸುವ ಸಂಸ್ಥೆಯ ನಿಬಂಧನೆಗಳ ಪ್ರಕಾರ ಅವರೊಂದಿಗೆ ವ್ಯವಹರಿಸಲಾಗುವುದು.

4. ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಅಥವಾ ಉತ್ತರ ಪತ್ರಿಕೆಗಳನ್ನು ಲೀಕ್ ಮಾಡುವುದು, ಅಭ್ಯರ್ಥಿಗಳಿಗೆ ಅನಧಿಕೃತ ಮಾಧ್ಯಮಗಳ ಮೂಲಕ ಪರೀಕ್ಷೆಯಲ್ಲಿ ಸಹಾಯ ಮಾಡುವುದು, ಕಂಪ್ಯೂಟರ್ ಅಥವಾ ಇತರ ಉಪಕರಣಗಳೊಂದಿಗೆ ಅವ್ಯವಹಾರ ಮಾಡುವುದು, ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜರುಪಡಿಸುವುದು ಮುಂತಾದ `ಅಯೋಗ್ಯ ವಿಧಾನ’ ಗಳನ್ನು ಕಾನೂನಿನಡಿಯಲ್ಲಿ ನಿಷೇಧಿಸಲಾಗಿದೆ.