40% Decrease in Cattles: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2007 ರಿಂದ 2019 ರ ಅವಧಿಯಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಗೋವುಗಳ ನಾಶ !

ಮಂಗಳೂರು (ಕರ್ನಾಟಕ)- 2007 ಮತ್ತು 2019 ರ ಕಾಲಾವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋವುಗಳ ಸಂಖ್ಯೆ ಶೇಕಡಾ 40 ಕ್ಕಿಂತ ಹೆಚ್ಚು ಕಡಿಮೆಯಾಗಿವೆ. ಪ್ರತಿ 5 ವರ್ಷಗಳಿಗೊಮ್ಮೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಜಾನುವಾರುಗಳ ಗಣತಿ ನಡೆಸುತ್ತದೆ. ಈ ಗಣತಿಯ ಪ್ರಕಾರ 2007ಕ್ಕೆ ಹೋಲಿಸಿದರೆ 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋವುಗಳ ಸಂಖ್ಯೆ ಶೇ.40 ರಷ್ಟು ಕಡಿಮೆಯಾಗಿದೆ. 2019 ರಿಂದ ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಗೋವುಗಳು ಎಷ್ಟಿದ್ದವು ಮತ್ತು ಈಗ ಎಷ್ಟಿವೆ?

1. 2007ರ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ ದೇಶಿ(ಸ್ಥಳೀಯ) ಮತ್ತು ಮಿಶ್ರತಳಿ (ಜೆರ್ಸಿ) ಗೋವುಗಳ ಸಂಖ್ಯೆ 4 ಲಕ್ಷ 11 ಸಾವಿರದ 728 ಇತ್ತು. 2012ರಲ್ಲಿ ಈ ಸಂಖ್ಯೆ 2 ಲಕ್ಷದ 57 ಸಾವಿರದ 415ಕ್ಕೆ ಏರಿಕೆಯಾಯಿತು. 2019ರಲ್ಲಿ ಈ ಸಂಖ್ಯೆ 2 ಲಕ್ಷದ 52 ಸಾವಿರದ 401ಕ್ಕೆ ಇಳಿದಿದೆ. ಈ ವರ್ಷ ಹೊಸ ಗಣತಿ ನಡೆಯಲಿದ್ದು, ಸದ್ಯದ ಪರಿಸ್ಥಿತಿ ಇನ್ನೂ ತಿಳಿಯಬೇಕಾಗಿದೆ.

2. 2007ರಲ್ಲಿ ದೇಶೀ ಹಸುಗಳ ಸಂಖ್ಯೆ 2 ಲಕ್ಷ 29 ಸಾವಿರದ 838 ಇತ್ತು. 2012ರಲ್ಲಿ 1 ಲಕ್ಷ 13 ಸಾವಿರದ 747 ಆಯಿತು. 2019 ರಲ್ಲಿ ಇದು 65 ಸಾವಿರದ 997ಕ್ಕೆ ಇಳಿಕೆಯಾಯಿತು. ಈಗಿನ ಸಂಖ್ಯೆ ಇನ್ನೂ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ.

3. ದೇಶಿ ಹಸುಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಇನ್ನೊಂದೆಡೆ (ಹೈಬ್ರಿಡ್) ಮಿಶ್ರತಳಿ ಹಸುಗಳ ಸಂಖ್ಯೆ ಹೆಚ್ಚಿದೆ. 2007ರಲ್ಲಿ 1 ಲಕ್ಷದ 66 ಸಾವಿರದ 771 ಮಿಶ್ರತಳಿ ಹಸುಗಳಿದ್ದವು. 2019ರಲ್ಲಿ ಇದು 1 ಲಕ್ಷ 84 ಸಾವಿರದ 572ಕ್ಕೆ ಏರಿಕೆಯಾಗಿದೆ.

4. 2007ರಲ್ಲಿ ಎಮ್ಮೆಗಳ ಸಂಖ್ಯೆ15 ಸಾವಿರದ 119, 2012ರಲ್ಲಿ 3 ಸಾವಿರದ 700 ಹಾಗೂ 2019ರಲ್ಲಿ 1 ಸಾವಿರದ 832ಕ್ಕೆ ಇಳಿದಿದೆ.

ಯುವಕರಿಗೆ ಗೋವುಗಳ ಸಾಕಣೆ ಇಷ್ಟವಿಲ್ಲ!

ಜಿಲ್ಲಾ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಗೋವುಗಳ ಸಂಖ್ಯೆಯಲ್ಲಿ ಶೀಘ್ರಗತಿಯಲ್ಲಿ ಇಳಿಕೆಯಾಗಲು ಕಾರಣವೆಂದರೆ ಹಿಂದಿನ ತಲೆಮಾರಿನವರು ಹಸುಗಳನ್ನು ಸಾಕುತ್ತಿದ್ದರು; ಆದರೆ ಇಂದಿನ ಯುವ ಪೀಳಿಗೆಗೆ ಪಶುಪಾಲನೆಯತ್ತ ಆಸಕ್ತಿ ಇಲ್ಲ. ಸಿಬ್ಬಂದಿಯ ಕೊರತೆಯೂ ಇದೆ. ಗ್ರಾಮದಲ್ಲಿ ಪಶುಪಾಲನೆ ಲಾಭದಾಯಕವಾಗಿಲ್ಲ, ಹಾಗೆಯೇ ಪಶುಪಾಲನೆಗೆ ದೊಡ್ಡ ಭೂಭಾಗ ಇಲ್ಲದ ಕಾರಣ ಸ್ಥಳೀಯ ಗೋಪಾಲಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ಒಂದೇ ಜಿಲ್ಲೆಯಲ್ಲಿ ಹೀಗಾದರೆ ಇಡೀ ದೇಶದ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಬಹುದು! ಎಲ್ಲಾ ಪಕ್ಷಗಳ ಸರಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಗೋವಿನ ಜೀವ ಉಳಿಸಿ ಬೆಳಸಲು ಸಮರೋಪಾದಿಯಲ್ಲಿ ಪ್ರಯತ್ನ ಮಾಡಬೇಕು, ಇಲ್ಲವಾದಲ್ಲಿ ಮುಂದೆ ಗೋವುಗಳನ್ನು ಕೇವಲ ಚಿತ್ರದಲ್ಲಿ ಮಾತ್ರ ನೋಡಬೇಕಾಗುತ್ತದೆ!