ಹಿಂದೂ ವಿವಾಹದಲ್ಲಿ ಅವಶ್ಯಕ ವಿಧಿಗಳು (ಆಚರಣೆಗಳು)ನಡೆಯದಿದ್ದರೆ, ಅದನ್ನು ಮದುವೆಯೆಂದು ಒಪ್ಪಿಕೊಳ್ಳಲಾಗುವುದಿಲ್ಲ!

ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪು

ನವದೆಹಲಿ – ಹಿಂದೂ ವಿವಾಹದಲ್ಲಿ ಒಂದು ವೇಳೆ ಆವಶ್ಯಕ ಆಚರಣೆಗಳನ್ನು ಮಾಡದಿದ್ದರೆ, ಆ ಮದುವೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅಂತಹ ಮದುವೆಗಳನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ. ನೋಂದಣಿಯಾದರೂ, ಈ ಮದುವೆಗಳು ಮಾನ್ಯವಾಗುವುದಿಲ್ಲ; ಕಾರಣ ಹಿಂದೂ ವಿವಾಹದಲ್ಲಿ ಸಪ್ತಪದಿಯಂತಹ ಆಚರಣೆಗಳು ಅತ್ಯಂತ ಮಹತ್ವದ್ದಾಗಿದೆಯೆಂದು ಸರ್ವೋಚ್ಚ ನ್ಯಾಯಾಲಯವು ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ. ನಾಗರತ್ನ ಅವರ ಪೀಠ ಈ ತೀರ್ಪು ನೀಡಿದೆ. ವಿವಾದಗಳ ಸಂದರ್ಭದಲ್ಲಿ ಇಂತಹ ಆಚರಣೆಗಳನ್ನು ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ’ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸರ್ವೋಚ್ಚ ನ್ಯಾಯಾಲಯ ನೀಡಿದ ಹೇಳಿಕೆ !

ಯುವಕರು ಹಿಂದೂ ವಿವಾಹ ವ್ಯವಸ್ಥೆಯು ಎಷ್ಟು ಪವಿತ್ರವಾಗಿದೆ ಎಂಬುದರ ವಿಚಾರ ಮಾಡಬೇಕು !

ಹಿಂದೂ ವಿವಾಹವು ಒಂದು ಸಂಸ್ಕಾರವಾಗಿದ್ದು, ವಿವಾಹಕ್ಕೆ ಭಾರತೀಯ ಸಮಾಜದಲ್ಲಿ ಮಹತ್ವದ ಭಾಗವೆಂದು ಸ್ಥಾನಮಾನ ಸಿಗಬೇಕು. ಯುವಕರು ಮದುವೆಯ ಬಗ್ಗೆ ಯೋಚಿಸುವಾಗ, ಭಾರತೀಯ ಸಮಾಜದಲ್ಲಿ ಮದುವೆ ವ್ಯವಸ್ಥೆ ಎಷ್ಟು ಪವಿತ್ರವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಮದುವೆ ಎಂದರೆ ಕುಣಿಯುವುದು, ಹಾಡುವುದು, ತಿನ್ನುವುದು, ಮದ್ಯಪಾನ ಮಾಡುವುದು ಅಲ್ಲ!

ಮದುವೆಯೆಂದರೆ ಕುಣಿಯುವುದು, ಹಾಡುವುದು, ತಿನ್ನುವುದು, ಮದ್ಯಪಾನ ಮಾಡುವುದು ಅಥವಾ ವರದಕ್ಷಿಣೆಯಂತಹ ಅನಗತ್ಯ ವಿಷಯಗಳನ್ನು ಕೊಡುಕೊಳ್ಳುವಿಕೆಯ ಕಾರ್ಯಕ್ರಮವಲ್ಲ. ಅದು ಭಾರತೀಯ ಸಮಾಜದಲ್ಲಿ ಒಂದು ಮಹತ್ವದ ಸಮಾರಂಭವಾಗಿದೆ. ಈ ಸಮಾರಂಭದ ಮೂಲಕ, ಸ್ತ್ರೀ ಮತ್ತು ಪುರುಷರ ನಡುವೆ ಒಂದು ವಿಶೇಷ ಸಂಬಂಧ ನಿರ್ಮಾಣವಾಗುತ್ತದೆ, ಅವರಿಗೆ ಪತಿ ಮತ್ತು ಪತ್ನಿಯ ಸ್ಥಾನಮಾನ ನೀಡಲಾಗುತ್ತದೆ.