ಪುರೋಹಿತರು ಶೂದ್ರರು ಹಾಗೂ ಮಹಿಳೆಯರಿಗೆ ವೇದಗಳ ಜ್ಞಾನವನ್ನು ಪಡೆಯುವ ಅವಕಾಶ ನೀಡಲಿಲ್ಲ’ ಎಂಬ ಉಲ್ಲೇಖವಿರುವ ಪಾಠವನ್ನು ಎನ್‌.ಸಿ.ಇ.ಆರ್‌.ಟಿ.ಯು ತೆಗೆದುಹಾಕಿದೆ !

ಮಾಹಿತಿ ಹಕ್ಕು ಕಾರ್ಯಕರ್ತರಾದ ವಿವೇಕ ಪಾಂಡೆಯವರು ಈ ಸಂದರ್ಭದಲ್ಲಿ ಪುರಾವೆಯನ್ನು ಕೇಳಿದಾಗ ಅದನ್ನು ಒದಗಿಸಲು ಎನ್.ಸಿ.ಇ.ಆರ್.ಟಿ.ಯು ವಿಫಲವಾಯಿತು.!

ನವದೆಹಲಿ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತಿನ (ಎನ್‌.ಸಿ.ಇ.ಆರ್‌.ಟಿ.) ಆರನೇ ತರಗತಿಯ ಇತಿಹಾಸ ಪುಸ್ತಕದಿಂದ ಕಲಿಸಲಾಗುತ್ತಿದ್ದ ಬ್ರಾಹ್ಮಣರು ಹಾಗೂ ಪುರೋಹಿತರ ವಿಷಯದಲ್ಲಿ ಭ್ರಮೆಗಳಿಂದ ಕೂಡಿದ್ದ ಲೇಖನಗಳಿರುವ ಪಾಠವನ್ನು ತೆಗೆದು ಹಾಕಲಾಗಿದೆ. ಈ ಸಂದರ್ಭದಲ್ಲಿ ಕಳೆದ ವರ್ಷ ಮಾಹಿತಿ ಹಕ್ಕು ಕಾರ್ಯಕರ್ತರಾದ ವಿವೇಕ ಪಾಂಡೆಯವರು ಎನ್‌.ಸಿ.ಇ.ಆರ್‌.ಟಿ. ಗೆ ಲಿಖಿತ ಪುರಾವೆಯನ್ನು ಕೇಳಿದ್ದರು. `ಹಿಂದೂ ಪುರೋಹಿತರು ಅಥವಾ ಬ್ರಾಹ್ಮಣರು ಮಹಿಳೆಯರು ಹಾಗೂ ಶೂದ್ರರೊಂದಿಗೆ ಭೇದಭಾವ ಮಾಡುತ್ತಾರೆ’, ಎಂದು ಎನ್‌.ಸಿ.ಇ.ಆರ್‌.ಟಿ.ಯ ಪುಸ್ತಕದಲ್ಲಿರುವ ಉಲ್ಲೇಖದ ಬಗ್ಗೆ ಪುರಾವೆಯನ್ನು ನೀಡುವಂತೆ ಪಾಂಡೆಯವರು ಮಾಹಿತಿ ಹಕ್ಕು ಅಧಿಕಾರದ ಅಡಿಯಲ್ಲಿ ಕೋರಿದ್ದರು. ಇದಕ್ಕೆ ಎನ್.ಸಿ.ಇ.ಆರ್.ಟಿ.ಯು ಉತ್ತರಿಸುವಾಗ `ಬ್ರಾಹ್ಮಣ ಮತ್ತು ಪುರೋಹಿತರು ಮಹಿಳೆಯರು ಹಾಗೂ ಶೂದ್ರರಿಗೆ ವೇದಗಳನ್ನು ಕಲಿಸದೇ ಇರುವ ಬಗ್ಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ’ ಎಂದು ಹೇಳಿತ್ತು. ಹಾಗೆಯೇ ಎಸ್.ಸಿ.ಇ.ಆರ್.ಟಿ. ಯು ಈ ದಾರಿ ತಪ್ಪಿಸುವ ಹೇಳಿಕೆಯನ್ನು ತಮ್ಮ ಪುಸ್ತಕದಿಂದ ತೆಗೆದು ಹಾಕುವುದಾಗಿಯೂ ಆಶ್ವಾಸನೆ ನೀಡಿತ್ತು. ಅದರಂತೆಯೇ ಈಗ 2023-24 ನೇ ಸಾಲಿನ ಪುಸ್ತಕದಿಂದ ಈ ಭಾಗವನ್ನು ತೆಗೆದುಹಾಕಲಾಗಿದೆ.

ಈ ಪುಸ್ತಕದಲ್ಲಿ ಏನು ಹೇಳಲಾಗಿತ್ತು ?

ಆರನೇ ತರಗತಿಯ ಇತಿಹಾಸದ ಪುಸ್ತಕದಲ್ಲಿ `ರಾಜ್ಯ, ರಾಜ ಮತ್ತು ಪ್ರಾಚೀನ ಪ್ರಜಾಪ್ರಭುತ್ವ’ (ಪುಟ ಸಂ; 44-45) ಎಂಬ ಐದನೇ ಪಾಠದಲ್ಲಿ ಪುರೋಹಿತರು ಜಾತೀ ವ್ಯವಸ್ಥೆಯನ್ನು ನಿರ್ಮಿಸಿದ್ದರು ಮತ್ತು ಅದು ಜನ್ಮದಿಂದ ನಿರ್ಧಾರವಾಗುತ್ತದೆ ಎಂದು ಹೇಳಲಾಗಿತ್ತು. ಮಹಿಳೆಯರನ್ನು ಶೂದ್ರರ ವರ್ಗದಲ್ಲಿ ಸೇರಿಸುವ ಮೂಲಕ, ಅವರನ್ನು ವೇದಾಭ್ಯಾಸ ಮಾಡುವುದರಿಂದ ತಡೆಯಲಾಗುತ್ತಿತ್ತು, ಅಷ್ಟೇ ಅಲ್ಲ ಪುರೋಹಿತರು ಕೆಲವರನ್ನು ಅಸ್ಪೃಶ್ಯರೆಂದು ಘೋಷಿಸಿದ್ದರು, ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

ಎನ್.ಸಿ.ಇ.ಆರ್.ಟಿ.ಯು ಹಿಂದೂ ಧರ್ಮದ ಅವಹೇಳನ ಮಾಡುವ ಪಾಠವನ್ನು ತೆಗೆದು ಹಾಕುವಂತೆ ಮಾಡಿರುವ ವಿವೇಕ ಪಾಂಡೆಯವರಿಗೆ ಅಭಿನಂದನೆಗಳು!