|
ಕರ್ಣಾವತಿ (ಗುಜರಾತ್) – ವಿಶ್ವದಲ್ಲೇ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾದ ‘ಟೆಸ್ಲಾ’ ಕಂಪನಿಯು ಭಾರತದ ಗುಜರಾತ್‌ನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವುದು ಬಹುತೇಕ ಖಚಿತವಾಗಿದೆ. 2024ರ ಜನವರಿಯಲ್ಲಿ ಗುಜರಾತ್ ಸರಕಾರ ಆಯೋಜಿಸಿರುವ ‘ವೈಬ್ರೆಂಟ್ ಗುಜರಾತ್ ಶೃಂಗಸಭೆ’ಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಸಮ್ಮೇಳನದಲ್ಲಿ ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಕೂಡ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಟೆಸ್ಲಾ ಅಧಿಕಾರಿಗಳು ಮತ್ತು ಗುಜರಾತ್ ಸರಕಾರದ ನಡುವಿನ ಮಾತುಕತೆ ಅಂತಿಮ ಹಂತವನ್ನು ತಲುಪಿದೆ.
1. ಈ ಪ್ರಕಲ್ಪವನ್ನು ನಮ್ಮಲ್ಲಿ ನಿರ್ಮಿಸುವಂತೆ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಪ್ರಯತ್ನಿಸುತ್ತಿದ್ದವು.
2. ಗುಜರಾತ್ ರಾಜ್ಯದ ಸಾನಂದ್ ಜಿಲ್ಲೆಯಲ್ಲಿ ಈ ಯೋಜನೆಯನ್ನು ಸ್ಥಾಪಿಸಲಾಗುವುದು. ಅದಕ್ಕೆ ರಾಜ್ಯ ಸರಕಾರವೂ ಜಾಗ ನೀಡಲು ನಿರ್ಧರಿಸಿದೆ. ಇಲ್ಲಿಂದ ಕಾರುಗಳನ್ನು ಸುಲಭವಾಗಿ ರಫ್ತು ಮಾಡಬಹುದು ಎಂಬ ಕಾರಣಕ್ಕೆ ಟೆಸ್ಲಾ ಗುಜರಾತ್ ರಾಜ್ಯವನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ. ಸಾನಂದ್ ಜಿಲ್ಲೆಯಿಂದ ಕಾಂಡ್ಲಾ-ಮುಂದ್ರಾ ಬಂದರಿಗೆ ಸಾರಿಗೆ ಸೌಲಭ್ಯವಿದೆ.
3. ಈ ಯೋಜನೆಯು 2022 ರಲ್ಲಿ ಭಾರತಕ್ಕೆ ಬರಲಿದೆ ಎಂದು ಹೇಳಲಾಗಿತ್ತು; ಆದರೆ ಕೇಂದ್ರ ಸರಕಾರವು ಕಂಪನಿಯ ಆಮದು ಸುಂಕವನ್ನು ಕಡಿಮೆ ಮಾಡುವ ಬೇಡಿಕೆಯನ್ನು ಈಡೇರಿಸದ ಕಾರಣ ಭಾರತದಲ್ಲಿ ಯೋಜನೆಯನ್ನು ಸ್ಥಾಪಿಸಲು ಟೆಸ್ಲಾ ನಿರ್ಧರವನ್ನು ರದ್ದುಪಡಿಸಿತ್ತು. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಎಲಾನ್ ಮಸ್ಕ್ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ವೇಳೆ ಅವರು ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಬಗ್ಗೆ ಸುಳಿವು ನೀಡಿದ್ದರು.