ಬ್ರಹ್ಮಚೈತನ್ಯ ಗೋಂದಾವಲೆಕರ ಮಹಾರಾಜರ ಪುಣ್ಯತಿಥಿ

ಕೋಟಿ ಕೋಟಿ ನಮನಗಳು ಮಾರ್ಗಶಿರ ಕೃ. ೧೦, ೬.೧.೨೦೨೪

ಬ್ರಹ್ಮಚೈತನ್ಯ ಗೋಂದವಲೆಕರ ಮಹಾರಾಜರು

ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ  ಪ್ರವಚನ : ಭಗವಂತನ ಸ್ಮರಣೆಯೆ ಸದ್ಭುದ್ಧಿಯಾಗಿರುತ್ತದೆ

ಪರಮೇಶ್ವರನು ಎಲ್ಲ ಕಡೆಗೆ ತುಂಬಿಕೊಂಡಿರುತ್ತಾನೆ . ವಿಶ್ವವನೆಲ್ಲ ವ್ಯಾಪಿಸಿರುತ್ತಾನೆ . ಅಂದ ಮೇಲೆ ಅವನ ಅಸ್ತಿತ್ವದ ಅರಿವು ಪ್ರತಿಯೊಬ್ಬರಿಗೂ ಏಕೆ ಆಗುವದಿಲ್ಲ ? ಯಾರ ಭಾವನೆಯು ಪ್ರಗಲ್ಪವಾಗಿರುತ್ತದೆಯೋ ಅವರಿಗೆ ಪರಮೇಶ್ವರನ ಅಸ್ತಿತ್ವದ ಅನುಭವ ಬರುತ್ತದೆ , ಬೇರೆಯವರಿಗೆ ಬರುವದಿಲ್ಲ ಆದ್ದರಿಂದ ಇಂಥ ಭಾವನೆ ಇರುವದು ಅವಶ್ಯವಿರುತ್ತದೆ ಹಾಗೂ ಅದು ನಿರ್ಮಾಣವಾಗುವದಕ್ಕಾಗಿ ಭಗವಂತನ ಸ್ಮರಣೆಯು ಅತ್ಯಂತ ಅವಶ್ಯ ವಾಗಿರುತ್ತದೆ . ನಾನು ನಾಮಸ್ಮರಣೆ ಮಾಡುತ್ತೇನೆ ಎಂದು ಯಾರು ಹೇಳುತ್ತಾರೋ ಅವರು ನನಗೆ ಉಪಕಾರ ಮಾಡುತ್ತಾರೆ ಎಂದು ನನಗೆ ಅನಿಸುತ್ತದೆ . ಏಕೆಂದರೆ , ಯಾವ ಮನುಷ್ಯನು ನಾಮಸ್ಮರಣೆ ಮಾಡುತ್ತಾನೊ ಅವನು ತನ್ನ ಉದ್ಧಾರ ಮಾಡಿಕೊಳ್ಳುತ್ತಾನೆ . ಅಂದರೆ ಪರ್ಯಾಯವಾಗಿ ನನ್ನ ಮೇಲೆ ಉಪಕಾರವನ್ನೇ ಮಾಡುತ್ತಿರುತ್ತಾನೆ .

ಬುದ್ದಿವಾದಿಗಳಿಗೆ ಒಂದು ಸಂಶಯ ಬರುವದೇನೆಂದರೆ, ಪರಮೇಶ್ವರನು ಬುದ್ಧಿಧಾತಾ ಬುದ್ದಿ ಕೊಡುವವನು ಇರುತ್ತಾನೆ ಅಂದಮೇಲೆ ಮನುಷ್ಯನಲ್ಲಿ ದುರ್ಬುದ್ದಯು ಬಂದಿತೆಂದರೆ ಆ ದೋಷವು ಮನುಷ್ಯನದೆಂದು ಹೇಗೆ ಹೇಳುವದು ? ಇದಕ್ಕೆ ಉತ್ತರವೆಂದರೆ , ಬುದ್ಧಿದಾತಾ ಪರಮೇಶ್ವರನೇನೋ ನಿಜ , ಆದರೆ ಆ ಬುದ್ದಿಯು. ಸದ್ಭುದ್ಧಿ ಅಥವಾ ದುರ್ಬುದ್ದಿ ಏಕೆ ಆಗುತ್ತದೆ ಎಂಬುದನ್ನು ನೋಡುವದು ಅವಶ್ಯವಿರುತ್ತದೆ . ಪ್ರಕಾಶ ಹಾಗೂ ಅಂಧಕಾರ ಇವೆರಡಕ್ಕೂ ಸೂರ್ಯನೇ ಕಾರಣನಾಗಿರುತ್ತಾನೆ . ಸೂರ್ಯನ ಇರುವಿಕೆಯು ಪ್ರಕಾಶಕ್ಕೆ ಕಾರಣವಾದರೆ ಅವನ ಇಲ್ಲದಿರುವಿಕೆಯು ಅಂಧಕಾರಕ್ಕೆ ಕಾರಣವಾಗಿರುತ್ತದೆ . ಅದರಂತೆ ಭಗವಂತನ ಸ್ಮರಣೆಯು ಸದ್ಭುದ್ಧಿಗೆ ಕಾರಣವಾದರೆ ವಿಸ್ಮರಣೆಯು ದುರ್ಬುದ್ಧಿಗೆ ಕಾರಣವಾಗುತ್ತದೆ . ಆದ್ದರಿಂದ ಬುದ್ಧಿದಾತಾ ಪರಮೇಶ್ವರನೆಂಬುದು ನಿಜವಾಗಿದ್ದರೂ ಸದ್ದುಧ್ಧಿ ಅಥವಾ ದುರ್ಬುದ್ಧಿ ನಿರ್ಮಾಣ ಮಾಡಿಕೊಳ್ಳುವದು ಮನುಷ್ಯನ ಕೈಯಲ್ಲಿಯೇ ಇರುತ್ತದೆ . ಭಗವಂತನ ಸ್ಮರಣೆ ಮಾಡುವದರಿಂದ ದುರ್ಬುದ್ಧಿಯು ಆಗುವದಿಲ್ಲ . ಆದ್ದರಿಂದ ಯಾವಾಗಲೂ ಭಗವಂತನ ಸ್ಮರಣೆಯಲ್ಲಿ ಇರಬೇಕು ಹಾಗೂ ಇದಕ್ಕೆ ಉಪಾಯವೆಂದರೆ ನಾಮಸ್ಮರಣೆ , ಸರ್ವಸಂಗ ಪರಿತ್ಯಾಗ ಮಾಡಿ ಭಗವಂತನ ಸ್ಮರಣೆ ಮಾಡಬೇಕು . ಆದರೆ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ , ಅದರಲ್ಲಿ ಭಗವಂತನ ಅನುಸಂಧಾನವನ್ನಿಟ್ಟುಕೊಳ್ಳುವದು ಅದಕ್ಕಿಂತಲೂ ಶ್ರೇಷ್ಟವಾಗಿರುತ್ತದೆ . ಭಗವಂತನ ಕೃಪೆಯಿಂದ ಪ್ರಾಪ್ತವಾದ ಇಂದಿನ ದಿನವನ್ನು ನಾವು ಅವನಿಗೆ ಸಮರ್ಪಿಸಬೇಕು . ಭಗವಂತನ ಅನುಸಂಧಾನವನ್ನಿಡುವದರಿಂದ ದಿವಸವು ಅವನಿಗೆ ಸಮರ್ಪಣವಾಗುತ್ತದೆ . ಈ ರೀತಿ ಇಂದಿನ ದಿವಸವನ್ನು ಭಗವಂತನ ಅನುಸಂಧಾನದಲ್ಲಿ ಕಳೆದರೆ ನಮಗೆ ನಿತ್ಯ ದೀಪಾವಳಿಯೇ ಇದ್ದಂತೆ , ಅನುಸಂಧಾನದಲ್ಲಿ ಸ್ತ್ರೀ – ಪುರುಷ , ಶ್ರೀಮಂತ – ಬಡವ ಎಂಬ ಭೇದವಿರುವದಿಲ್ಲ . ಅನ್ಯ ಅನೇಕ ಸಾಧನಗಳಿಂದ ಏನು ಸಾಧಿಸುತ್ತದೆಯೋ ಅದು ಕೇವಲ ಅನುಸಂಧಾನದಿಂದ ಸಾಧಿಸುತ್ತದೆ ; ಇದೇ ಈ ಯುಗದ ಮಹಿಮೆಯಾಗಿರುತ್ತದೆ . ಅನ್ಯ ವಿಷಯಗಳು ಮನಸ್ಸಿನಲ್ಲಿ ಬರದೇ ಕೇವಲ ಒಂದೇ ವಿಷಯ ಮನಸ್ಸಿನಲ್ಲಿ ಬರುವದಕ್ಕೆ ಅನುಸಂಧಾನವೆನ್ನುತ್ತಾರೆ . ಭಗವಂತನ ಅನುಸಂಧಾನವೇ ನಿಜವಾದ ಪುಣ್ಯವಾಗಿರುತ್ತದೆ ಹಾಗೂ ಜೀವನದಲ್ಲಿ ಸಂಪಾದಿಸಬೇಕಾದ ಏಕಮೇವವಸ್ತು ಆಗಿರುತ್ತದೆ ಭಗವಂತನ ಅನುಸಂಧಾನ ಇಟ್ಟುಕೊಳ್ಳಿರಿ ಅಂದರೆ ಉಳಿದೆಲ್ಲ ಗುಣಗಳು ತಾವಾಗಿಯೆ ಬೆನ್ನುಹತ್ತಿ ಬರುತ್ತದೆ. ಭಗವಂತನಿಗೆ ಅನನ್ಯ ಭಾವದಿಂದ – ‘ ಹೇ ದೇವಾ , ಪ್ರಾರಬ್ದಾನುಸಾರ ಬರುವ ಭೋಗಗಳು ಬರಲಿ , ಆದರೆ ನಿನ್ನ ಅನುಸಂಧಾನ ಮಾತ್ರ ತಪ್ಪದಿರಲಿ ‘ ಎಂದು ಪ್ರಾರ್ಥಿಸಬೇಕು.

ಮುಖ್ಯ ವಿಚಾರ

ನಾಮ ಹಾಗೂ ಅನುಸಂಧಾನ ಇಪ್ಪತ್ನಾಲ್ಕು ಗಂಟೆಗಳೂ ನಡೆಯುತ್ತಿರಬೇಕು . ಅಂಥ ಸಮಯದಲ್ಲಿ ಬೇರೆ ಯಾವದಾದರೊಂದು ಕಾರ್ಯವು ಸಮಯಕ್ಕನುಸಾರ ಆಗದಿದ್ದರೆ ಅದರ ವಿಷಯದಲ್ಲಿ ಆಗ್ರಹವಿರಬಾರದು.

ಜೈ ಜೈ ರಘುವೀರ ಸಮರ್ಥ