ದೇಶದ ಹೆಮ್ಮೆಯ ಪುತ್ರ ಕ್ಯಾಪ್ಟನ್ ಪ್ರಾಂಜಲ್ ಪಂಚಭೂತಗಳಲ್ಲಿ ಲೀನ

ಬೆಂಗಳೂರು – ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯ ಸೋಮಸುಂದರಪಾಳ್ಯ ಚಿತಾಗಾರದಲ್ಲಿ ನಡೆಯಿತು. ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿದ್ದು, ಪ್ರಾಂಜಲ್ ಅವರ ತಂದೆ ಅಂತಿಮ ವಿಧಿವಿಧಾನಗಳನ್ನ ನೆರವೇರಿಸಿದರು. ಈ ವೇಳೆ ಕುಟುಂಬಸ್ಥರು, ಸಂಬಂಧಿಕರು, ಸೇನಾಧಿಕಾರಿಗಳು ಸೇರಿ ನೆರದಿದ್ದ ಜನರು ವೀರ ಯೋಧನಿಗೆ ಕಣ್ಣೀರಿನ ವಿದಾಯ ನೀಡಿದರು.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್​​ನ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಮೆರವಣಿಗೆ ಸೋಮಸುಂದರಪಾಳ್ಯ ಚಿತಾಗಾರದ ಆವರಣದಲ್ಲಿ ಕೊನೆಗೊಂಡಿತು. ಇನ್ನು ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.