ನವೆಂಬರ್ 14 ರಂದು ದೇವಾಲಯಗಳಲ್ಲಿ ಗೋಪೂಜೆಯನ್ನು ಮಾಡಿರಿ ! – ಮುಜರಾಯಿ ಇಲಾಖೆ

ರಾಜ್ಯದ ಮುಜರಾಯಿ ಮತ್ತು ದತ್ತಿ ಇಲಾಖೆಯಿಂದ ದೇವಸ್ಥಾನಗಳಿಗೆ ಆದೇಶ !

ಬೆಂಗಳೂರು – ಮುಜರಾಯಿ ಇಲಾಖೆ ಮತ್ತು ದತ್ತಿ ಇಲಾಖೆಯು ತನ್ನ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ದೇವಾಲಯಗಳಿಗೆ ನವೆಂಬರ್ 14 ರಂದು ಗೋಪೂಜೆಯನ್ನು ಮಾಡುವಂತೆ ಆದೇಶಿಸಿದೆ. ಈ ದಿನ, ಹಸುಗಳಿಗೆ ಸ್ನಾನ ಮಾಡಿಸಿ ದೇವಸ್ಥಾನಕ್ಕೆ ಕರೆತಂದು ಅವುಗಳನ್ನು ಪೂಜಿಸುವಂತೆ ತಿಳಿಸಿದೆ. ಗೋವುಗಳನ್ನು ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸುವುದರೊಂದಿಗೆ ಹಸುಗಳಿಗೆ ಸಿಹಿ ಪದಾರ್ಥವನ್ನು ತಿನ್ನಿಸುವಂತೆ ಹೇಳಲಾಗಿದೆ. ಸಂಜೆ 5.30 ರಿಂದ 6.30 ಸಮಯದಲ್ಲಿ ಗೋಪೂಜೆಯನ್ನು ಮಾಡುವಂತೆ ಹೇಳಲಾಗಿದೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಗೋವುಗಳ ಮಹತ್ವ ಮತ್ತು ಸಂರಕ್ಷಣೆಗಾಗಿ ಜನಜಾಗೃತಿ ಮೂಡಿಸಲು ದೇವಸ್ಥಾನದಲ್ಲಿ ಗೋಪೂಜೆಯ ಆಯೋಜನೆಯನ್ನು ಮಾಡಲಾಗಿದೆಯೆಂದು ಮುಜರಾಯಿ ಇಲಾಖೆ ಮತ್ತು ದತ್ತಿ ಇಲಾಖೆಯು ಸ್ಪಷ್ಟಪಡಿಸಿದೆ.