ಗೋವರ್ಧನಗಿರಿಧಾರಿ ಶ್ರೀಕೃಷ್ಣ !

ಕಾರ್ತಿಕ ಶುಕ್ಲ ಪಾಡ್ಯ (೧೪ ನವೆಂಬರ್‌ ೨೦೨೩) ತಿಥಿಯಂದು ಭಗವಾನ್‌ ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಇಂದ್ರನ ಕೋಪದಿಂದ ಗೋಕುಲವಾಸಿಗಳನ್ನು ರಕ್ಷಿಸಿದನು. ಆದ್ದರಿಂದ ಈ ತಿಥಿಯಂದು ಗೋವರ್ಧನ ಉತ್ಸವವನ್ನು ಆಚರಿಸಲಾಗುತ್ತದೆ. ಅದರ ನಿಮಿತ್ತ

ಶರದಋತುವಿನ ಆರಂಭದಲ್ಲಿ ಗೋಕುಲವಾಸಿಗಳು ಇಂದ್ರನ ಉತ್ಸವವನ್ನು ಆಚರಿಸಲು ಯೋಚಿಸಿದ್ದರು. ಇಂದ್ರನು ಮೇಘಗಳ ರಾಜನಾಗಿದ್ದು ಅವರ ಕೃಪೆಯಿಂದ ಪ್ರಕೃತಿಯಲ್ಲಿ ಬೆಳೆ ಸಮೃದ್ಧವಾಗಿ ಆಗುತ್ತದೆ ಎಂದು ಗೋಕುಲವಾಸಿಗಳ ಕಲ್ಪನೆಯಾಗಿತ್ತು. ಆದರೆ ಶ್ರೀಕೃಷ್ಣನು “ಮೇಘ ವೃಷ್ಟಿಯ ಕಾರಣದಿಂದ ಪ್ರಕೃತಿಯು ಧನಧಾನ್ಯಗಳಿಂದ ಸಮೃದ್ಧವಾಗುತ್ತದೆ. ಆದ್ದರಿಂದ ಇಂದ್ರನ ಉತ್ಸವವನ್ನು ಆಚರಿಸುವುದು ಯೋಗ್ಯವಲ್ಲ. ಇಲ್ಲಿ ಕಾಣುವ ಈ ಕಾಡುಗಳು ಮತ್ತು ಗೋವರ್ಧನ ಪರ್ವತದಿಂದ ನಮ್ಮ ಉಪಜೀವನ ನಡೆಯುತ್ತಿದೆ. ಆದ್ದರಿಂದ ಈ ಪರ್ವತದ ಪೂಜೆ ಮಾಡುವುದು ಯೋಗ್ಯವಾಗಿದೆ” ಎಂದು ಹೇಳಿದನು. ಶ್ರೀಕೃಷ್ಣನ ಮಾತು ಎಲ್ಲರಿಗೂ ಒಪ್ಪಿಗೆ ಆಯಿತು. ಎಲ್ಲ ಗೋಪಗೋಪಿಯರು ಗೋವರ್ಧನ ಪರ್ವತದ ಪೂಜೆ ಮಾಡಿ ಸಂಭ್ರಮದಿಂದ ಉತ್ಸವವನ್ನು ಆಚರಿಸಿದರು. ಇದರಿಂದ ಇಂದ್ರನಿಗೆ ಬಹಳ ಕೋಪ ಬಂದಿತು. ಅವನು ಗೋಕುಲದ ಮೇಲೆ ಧಾರಾಕಾರ ಮಳೆಯನ್ನು ಸುರಿಸಲು ಆರಂಭಿಸಿದನು. ಇದರಿಂದ ಎಲ್ಲಾ ಗೋಕುಲವಾಸಿಗಳು ಮತ್ತು ಪಶುಪಕ್ಷಿಗಳು ಗಾಬರಿಗೊಂಡರು. ಎರಡು ದಿನ ಕಳೆದರೂ ಮಳೆ ಕಡಿಮೆ ಆಗಲಿಲ್ಲ. ಆಗ ಎಲ್ಲ ಗೋಕುಲವಾಸಿಗಳು ಶ್ರೀಕೃಷ್ಣನ ಬಳಿ ಬಂದು “ಹೇ ಕೃಷ್ಣಾ, ನೀನೇ ನಮ್ಮನ್ನು ರಕ್ಷಿಸು” ಎಂದು ಪ್ರಾರ್ಥಿಸಿದರು. ಅವರ ಪ್ರಾರ್ಥನೆಯನ್ನು ಆಲಿಸಿದ ಶ್ರೀಕೃಷ್ಣನು ಗೋಪಗೋಪಿಯರ ರಕ್ಷಣೆಗಾಗಿ ಗೋವರ್ಧನ ಪರ್ವತವನ್ನು ಮೇಲೆತ್ತಿದನು. ಆಗ ಅದರ ಕೆಳಗೆ ಎಲ್ಲ ಗೋಕುಲವಾಸಿಗಳು ಸುರಕ್ಷಿತವಾಗಿ ಉಳಿದರು ಮತ್ತು ಅವರಿಗೆ ಸ್ವಲ್ಪವೂ ತೊಂದರೆ ಆಗಲಿಲ್ಲ. ನಮ್ಮ ಅನ್ನದಾತ ಮತ್ತು ರಕ್ಷಕ ಗೋವರ್ಧನ ಪರ್ವತವೇ ಆಗಿದೆ ಎಂದು ಎಲ್ಲರಿಗೂ ಖಾತ್ರಿಯಾಯಿತು ಮತ್ತು ಶ್ರೀಕೃಷ್ಣನ ಮೇಲಿನ ಅವರ ಭಕ್ತಿ ಇನ್ನೂ ಹೆಚ್ಚಾಯಿತು. ಕೊನೆಗೆ ಇಂದ್ರನು ಆಯಾಸಗೊಂಡನು ಮತ್ತು ಮೇಘವೃಷ್ಟಿಯನ್ನು ನಿಲ್ಲಿಸಿದನು. ಅನಂತರ ಎಲ್ಲಾ ಗೋಪಗೋಪಿಯರು ಗೋಕುಲಕ್ಕೆ ಮರಳಿದರು.

ಆಧಾರ : ದಿನ ವಿಶೇಷ, ಭಾರತೀಯ ಇತಿಹಾಸದ ತಿಥಿ, ವಾರದರ್ಶನ.

ಲೇಖಕರು : ಪ್ರಹ್ಲಾದ ನರಹರಿ ಜೋಶಿ.