ಸಮ್ಮೇದ ಶಿಖರಜಿ ತೀರ್ಥಕ್ಷೇತ್ರವಾಗಿಯೇ ಉಳಿಯಲಿದೆ !

ಈ ತೀರ್ಥಕ್ಷೇತ್ರವನ್ನು ಪ್ರವಾಸಿತಾಣ ಮಾಡುವ ಜಾರ್ಖಂಡ್ ಸರಕಾರದ ನಿರ್ಣಯ ಕೇಂದ್ರ ಸರಕಾರದಿಂದ ರದ್ದು

ರಾಂಚಿ (ಜಾರ್ಖಂಡ್) – ಜೈನ ಸಮಾಜದ ಪವಿತ್ರ ತೀರ್ಥಕ್ಷೇತ್ರಯಾಗಿರುವ ಸಮ್ಮೇದ ಶಿಖರಜಿ ಇದು ಪ್ರವಾಸಿ ತಾಣ ಮಾಡಲು ಹೊರಟಿದ್ದ ಜಾರ್ಖಂಡ ಸರಕಾರದ ನಿರ್ಣಯವನ್ನು ಕೇಂದ್ರ ಸರಕಾರವು ಇತ್ತಿಚೆಗೆ ರದ್ದುಪಡಿಸಿದೆ. ಸಮ್ಮೆದ ಶಿಖರಜಿ ಈ ತೀರ್ಥಕ್ಷೇತ್ರವನ್ನು ಪ್ರವಾಸಿತಾಣವಾಗಿ ಪರಿವರ್ತಿಸಲು ಜಾರ್ಖಂಡ್ ಸರಕಾರ ನಿರ್ಣಯ ತೆಗೆದುಕೊಂಡಿತ್ತು. ಇದರ ವಿರುದ್ಧ ಜೈನ ಸಮಾಜದಿಂದ ದೊಡ್ಡ ಪ್ರತಿಭಟನೆ ನಡೆಯುತ್ತಿತ್ತು. ಪಾರಸನಾಥ ಬೆಟ್ಟ (ಸಮ್ಮೆದ ಶಿಖರಜಿ) ಪರಿಸರದಲ್ಲಿ ಎಲ್ಲಾ ಪ್ರವಾಸೋದ್ಯಮ ಮತ್ತು `ಇಕೋ ಟೂರಿಸಂ’ ನ ಎಲ್ಲಾ ಉಪಕ್ರಮಗಳನ್ನು ನಿಲ್ಲಿಸಬೇಕೆಂದು ಕೇಂದ್ರ ಸರಕಾರದ ಅಧಿಸೂಚನೆಯಲ್ಲಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ನಂತರ ಪರಿಸರ ಸಚಿವಾಲಯದಿಂದ ಈ ಅಧಿಸೂಚನೆಯನ್ನು ಪ್ರಸಾರ ಮಾಡಿದೆ.

ಇದು ಜೈನ ಸಮಾಜಕ್ಕೆ ಸಂದ ಜಯ ! – ಮುನಿಶ್ರೀ ೧೦೮ ಪ್ರಮಾಣ ಸಾಗರಜಿ ಮಹಾರಾಜ

ಇದು ಜೈನ ಸಮಾಜದ ವಿಜಯವಾಗಿದೆ, ಎಂಬ ಪದಗಳಲ್ಲಿ ಮುನಿಶ್ರೀ ೧೦೮ ಪ್ರಮಾಣ ಸಾಗರಜಿ ಮಹಾರಾಜರು ಕೇಂದ್ರ ಸರಕಾರದ ನಿರ್ಣಯದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

೪ ದಿನಗಳಲ್ಲಿ ಎರಡನೇ ಜೈನ ಮುನಿಗಳಿಂದ ಪ್ರಾಣತ್ಯಾಗ

ಸಮ್ಮೆದ ಶಿಖರಜಿಗೆ ಪ್ರವಾಸಿತಾಣ ಘೋಷಿಸಿರುವುದರ ವಿರುದ್ಧ ಜೈನ ಮುನಿ ಸಮರ್ಥ ಸಾಗರಜಿ ಇವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಜನವರಿ ೫ ರಂದು ರಾತ್ರಿ ಅವರು ನಿಧನರಾದರು. ೪ ದಿನಗಳಲ್ಲಿ ಅವರು ಸಮ್ಮೆದ ಶಿಖರಜಿಗಾಗಿ ದೇಹತ್ಯಾಗ ಮಾಡುವವರಲ್ಲಿ ಎರಡನೆಯ ಸಂತರಾಗಿದ್ದಾರೆ. ಜೈನ ಮುನಿ ಸುಜ್ಞೆಯ ಸಾಗರ ಮಹಾರಾಜ ಇವರು ಜನವರಿ ೩ ರಂದು ದೇಹ ತ್ಯಾಗ ಮಾಡಿದ್ದರು.