ಉತ್ತರಾಖಂಡದ ಜೋಶಿಮಠದಲ್ಲಿ ಭೂಮಿ ಕುಸಿತ 500 ಕ್ಕೂ ಹೆಚ್ಚು ಮನೆಗಳಿಗೆ ಬಿರುಕು

  • 66 ಕುಟುಂಬಗಳ ವಲಸೆ

  • ನಾಗರಿಕರಲ್ಲಿ ಭಯದ ವಾತಾವರಣ

ದೆಹರಾದೂನ (ಉತ್ತರಾಖಂಡ) – ಉತ್ತರಾಖಂಡದ ಚಮೋಲಿಯ ಜೋಶಿಮಠದಲ್ಲಿ ಭೂಕುಸಿತದಿಂದಾಗಿ 561 ಮನೆಗಳು ಮತ್ತು ರಸ್ತೆಗಳು ಬಿರುಕು ಬಿಟ್ಟಿವೆ. ಇಲ್ಲಿಂದ ಹರಿದು ಬರುವ ಮಣ್ಣಿನ ಸವಕಳಿ ಹಾಗೂ ಕೆಸರು ನೀರಿನಿಂದ ನಾಗರಿಕರಲ್ಲಿ ಭಯ ಉಂಟಾಗಿ ಈವರೆಗೆ 66 ಕುಟುಂಬಗಳು ಅಲ್ಲಿಂದ ವಲಸೆ ಹೋಗಿವೆ. ಜೋಶಿಮಠದಲ್ಲಿನ ಏಷ್ಯಾದ ಅತಿ ಉದ್ದದ ‘ರೋಪ್ ವೇ’ ಯನ್ನು (ಪರ್ವತ ಪ್ರದೇಶಗಳಲ್ಲಿ ಜನರನ್ನು ಸಾಗಿಸುವ ವ್ಯವಸ್ಥೆಯನ್ನು) ಮುಚ್ಚಲು ನಿರ್ಧರಿಸಲಾಗಿದೆ. ನಾಗರಿಕರನ್ನು ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಪುಷ್ಕರ ಸಿಂಗ ಧಾಮಿಯವರು ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಪುಷ್ಕರ ಸಿಂಗ ಧಾಮಿ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಜೋಶಿಮಠವು ಹಿಮಾಲಯ ಶ್ರೇಣಿಯಲ್ಲಿ ಅಲಕನಂದಾ ನದಿಯ ದಡದಲ್ಲಿದೆ.

1. ಜೋಶಿಮಠದ ಮುಖ್ಯ ಅಂಚೆ ಕಚೇರಿ ಬಿರುಕು ಬಿಟ್ಟಿದೆ. ನಂತರ ಅದನ್ನು ಬೇರೆಕಡೆ ಸ್ಥಳಾಂತರಿಸಲಾಗಿದೆ. ಜ್ಯೋತಿರ್ಮಠ ಸಂಕಿರ್ಣ ಮತ್ತು ಲಕ್ಷ್ಮಿನಾರಾಯಣ ದೇವಸ್ಥಾನದ ಅಕ್ಕಪಕ್ಕದ ಕಟ್ಟಡಗಳಿಗೆ ದೊಡ್ಡ ಬಿರುಕುಗಳು ಬಂದಿವೆ. ಈ ಸಂಪೂರ್ಣ ಪರಿಸ್ಥಿತಿಯನ್ನು ನೋಡಿದ ಆಡಳಿತವು ಸಹಾಯವಾಣಿ ಸಂಖ್ಯೆಯನ್ನು ಜಾರಿಮಾಡಿದೆ. ಪೀಡಿತ ನಾಗರಿಕರು 8171748602 ಅನ್ನು ಸಂಪರ್ಕಿಸಲು ಕೋರಲಾಗಿದೆ.

2. ‘ಜೋಶಿಮಠ ಬಚಾವ ಸಂಘರ್ಷ ಸಮಿತಿ’ಯು ಜನವರಿ 5 ರಂದು ಮಾರುಕಟ್ಟೆಯನ್ನು ಮುಚ್ಚುವುದಾಗಿ ಘೋಷಿಸಿತ್ತು. ಜನರು ಆಕ್ರೋಶಗೊಂಡಿದ್ದು, ಆಡಳಿತದ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ. ಜನವರಿ 4 ರಂದು ಪಂಜಿನ ಮೆರವಣಿಗೆ ನಡೆಸುವ ಮೂಲಕ ಜನರು ಪ್ರತಿಭಟಿಸಿದರು. ’ಅಲ್ಲಲ್ಲಿ ನೀರು ಬರುತ್ತಿದೆ. ಮನೆಗಳು ಬಿರುಕು ಬಿಡುತ್ತಿವೆ; ಆದರೆ ಸರಕಾರ ಏನನ್ನೂ ಮಾಡುತ್ತಿಲ್ಲ. ಇದನ್ನು ತಡೆಯಲು ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು’. ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ನೀರಿನ ಸೋರುವಿಕೆ ಮತ್ತು ಬಿರುಕುಗಳಿಗೆ ಮಾನವ ನಿರ್ಮಿತ ಮತ್ತು ನೈಸರ್ಗಿಕ ಕಾರಣಗಳು !

ಭೂವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಸರಕಾರಿ ಅಧಿಕಾರಿಗಳ 5 ಸದಸ್ಯರ ತಂಡವು ಈ ಪ್ರದೇಶವನ್ನು ಪರಿಶೀಲಿಸಿತು. ಮಾನವ ನಿರ್ಮಿತ ಮತ್ತು ನೈಸರ್ಗಿಕ ಕಾರಣಗಳಿಂದಾಗಿ ಜೋಶಿಮಠದ ಹಲವು ಭಾಗಗಳು ನೀರಿನಲ್ಲಿ ಮುಳುಗಿರುವುದನ್ನು ತಂಡವು ಕಂಡುಹಿಡಿದಿದೆ. ಮರಗಳು ಮತ್ತು ಪರ್ವತಗಳನ್ನು ಕತ್ತರಿಸುವುದರಿಂದ ಭೂಕುಸಿತಗಳು ಉಂಟಾಗುತ್ತವೆ. ಜೋಶಿಮಠದ ಬಹುತೇಕ ಎಲ್ಲಾ ವಾರ್ಡ್‌ಗಳಲ್ಲಿ ಆಯೋಜನೆ ಇಲ್ಲದೆ ಅಗೆಯುವ ಕಾರ್ಯವೂ ನಡೆಯುತ್ತಿದ್ದು ಇದರಿಂದ ಮನೆ, ಅಂಗಡಿಗಳು ಬಿರುಕು ಬಿಡುತ್ತಿವೆ ಎಂದು ಹೇಳಿದ್ದಾರೆ.