ಭಾರತೀಯ ಮೂಲದ ರಿಷಿ ಸುನಕ ಬ್ರಿಟನ ನೂತನ ಪ್ರಧಾನಿ !

೧೯೩ ಸಂಸದರು ಸುನಕ ಅವರಿಗೆ ಬೆಂಬಲ ನೀಡಿದರೆ, ೨೬ ಸಂಸದರ ಬೆಂಬಲ ಹೊಂದಿರುವ ಪೆನ್ನಿ ಹಿಂದೆ ಸರಿದರು !

ಲಂಡನ್ – ಭಾರತೀಯ ಮೂಲದ ರಿಷಿ ಸುನಕ ಅವರು ಬ್ರಿಟನ್‌ನ ನೂತನ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ನಂತರ, ಬೋರಿಸ್ ಜಾನ್ಸನ್, ರಿಷಿ ಸುನಕ ಮತ್ತು ಪೆನ್ನಿ ಮೊರ್ಡಾಂಟ್ ಅವರ ಹೆಸರುಗಳು ಪ್ರಧಾನಿ ಹುದ್ದೆಗೆ ಮುಂದೆ ಬಂದಿದ್ದವು. ಜಾನ್ಸನ್ ಅವರು ಅಕ್ಟೋಬರ್ ೨೩ ರಂದೇ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವೆಂದು ಘೋಷಿಸಿದರು. ಆನಂತರ ಸುನಕ ಮತ್ತು ಮೊರ್ಡಾಂಟ್ ನಡುವೆ ಪೈಪೋಟಿ ನಡೆಯಿತು. ಮೊರ್ಡಾಂಟ್ ಅಂತಿಮವಾಗಿ ಕೆಳಗಿಳಿದ ನಂತರ ಕೇವಲ ೪೨ ವರ್ಷದ ಸುನಕ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿದ್ದಾರೆ.

೧. ಬ್ರಿಟನ್ ಸಂಸತ್ತಿನಲ್ಲಿ ಒಟ್ಟು ೩೫೭ ಸಂಸದರಿದ್ದಾರೆ. ಹೊಸ ಚುನಾವಣಾ ನಿಯಮಗಳ ಪ್ರಕಾರ ಪ್ರಧಾನಿಗೆ ೧೦೦ ಕ್ಕೂ ಹೆಚ್ಚು ಸಂಸದರ ಬೆಂಬಲವಿರುವುದು ಅವಶ್ಯಕವಿರುತ್ತದೆ. ೧೯೩ ಸಂಸದರು ಸಾರ್ವಜನಿಕವಾಗಿ ಸುನಕ ಅವರನ್ನು ಬೆಂಬಲಿಸಿದರೆ, ಕೇವಲ ೨೬ ಸಂಸದರು ಮೊರ್ಡಾಂಟ್ ಅವರನ್ನು ಬೆಂಬಲಿಸಿದ್ದರು.

೨. ಅಕ್ಟೋಬರ್ ೨೮ ರಂದು ಸುನಕ ಪ್ರಮಾಣ ವಚನ ಸ್ವೀಕರಿಸಲಿದ್ದು, ಅಕ್ಟೋಬರ್ ೨೯ ರಂದು ಅವರ ಸಂಪುಟ ರಚನೆಯಾಗಲಿದೆ.

೩. ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರಿಗೆ ಆರ್ಥಿಕ ವಿಷಯಗಳಲ್ಲಿ ಅನುಭವವಿಲ್ಲ ಎಂಬುದು ತೀಳಿದಾಗ ಸಂಸದರು ಅವರನ್ನು ವಿರೋಧಿಸಿದ್ದರು. ಇದರಿಂದಾಗಿ ಅವರು ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

೪. ಮತ್ತೊಂದೆಡೆ ಸುನಕ ಅವರು ವೃತ್ತಿಯಲ್ಲಿ ‘ಬ್ಯಾಂಕರ್’ ಆಗಿರುವ ಕಾರಣಕ್ಕಾಗಿಯೂ, ಬೊರಿಸ್ ಜಾನ್ಸನ್ ಅವರ ಕಾರ್ಯಕಾಲದಲ್ಲಿ ಅವರು ಹಣಕಾಸು ಸಚಿವ ಹುದ್ದೆಯನ್ನು ಹೊಂದಿದ್ದರಾದ್ದರಿಂದಲೂ ಅವರು ೧೮೫ ಸಂಸದರ ಮೊದಲ ಆಯ್ಕೆಯಾಗಿದ್ದಾರೆ.