ನಕಲಿ ಪ್ಲೇಟ್‌ಲೆಟ್‌ಸ್ ಮಾರುವ ಗುಂಪು ಪತ್ತೆ – ೧೦ ಜನರ ಬಂಧನ

(ಪ್ಲೇಟ್‌ಲೆಟ್‌ಸ್ ಎಂದರೆ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಸಣ್ಣ ರಕ್ತ ಕಣಗಳು)

ಪ್ರಯಾಗರಾಜ (ಉತ್ತರ ಪ್ರದೇಶ) – ನಕಲಿ ಪ್ಲೇಟ್‌ಲೆಟ್‌ಗಳನ್ನು ಮಾರುವ ಮೂಲಕ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುವ ಗುಂಪನ್ನು ಪತ್ತೆ ಹಚ್ಚಲಾಗಿದೆ. ಗ್ಯಾಂಗ್‌ನ ನಾಯಕನೂ ಸೇರಿದಂತೆ ೧೦ ಜನರನ್ನು ಪೊಲೀಸರು ಬಂಧಿಸಿದರು. ಆರೋಪಿಗಳಿಂದ ೧೮ ಚೀಲ ಪ್ಲಾಸ್ಮಾ (ರಕ್ತಕಣಗಳು ಯಾವುದರಲ್ಲಿ ತೇಲುತ್ತವೆಯೋ ಆ ಬಣ್ಣರಹಿತ ಭಾಗ), ೩ ಚೀಲ ನಕಲಿ ಪ್ಲೇಟ್ ಲೆಟ್ಸ್ ಹಾಗೂ ಒಂದು ಲಕ್ಷದ ಎರಡು ಸಾವಿರ ನಗದು ವಶಪಡಿಸಿಕೊಳ್ಳಲಾಯಿತು. ಅಲ್ಲದೆ ಆರೋಪಿಗಳಿಂದ ೩ ದ್ವಿಚಕ್ರ ವಾಹನಗಳು ಹಾಗೂ ೧೩ ಸಂಚಾರವಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.

೧. ರಾಘವೇಂದ್ರ ಸಿಂಗ ಅಲಿಯಾಸ್ ರಾಹುಲ ಪಟೇಲ ಈ ಗ್ಯಾಂಗ್ ನ ನಾಯಕ. ಆತ ಇತರ ಆರೋಪಿಗಳನ್ನು ಜೊತೆಗೆ ಸೇರಿಸಿಕೊಂಡು ಕೆಲಸ ಮಾಡುತ್ತಿದ್ದ.

೨. ಆರೋಪಿಗಳು ರಕ್ತನಿಧಿಯಿಂದ ಪ್ಲಾಸ್ಮಾ ಖರೀದಿಸುತ್ತಿದ್ದರು ಎಂದು ಹಿರಿಯ ಪೊಲೀಸ ವರಿಷ್ಠಾಧಿಕಾರಿ ಶೈಲೇಶ ಕುಮಾರ ಪಾಂಡೆ ತಿಳಿಸಿದ್ದಾರೆ. ಒಂದು ಚೀಲದಲ್ಲಿ ೩೫೦ ಮಿಲಿ ಪ್ಲಾಸ್ಮಾ ಇರುತ್ತದೆ. ಇದಾದ ಬಳಿಕ ಖಾಲಿ ಚೀಲದಲ್ಲಿ ೫೦-೫೦ ಮಿಲಿ ಪ್ಲಾಸ್ಮಾ ತುಂಬಿಸಿ ಪ್ಲೇಟ್‌ಲೆಟ್ಸ್ ಎಂದು ೩ ರಿಂದ ೫ ಸಾವಿರ ರೂಪಾಯಿಗೆ ಮಾರಲಾಗುತ್ತಿತ್ತು. ಗುಂಪಿನ ಸದಸ್ಯರಿಗೆ ವಿವಿಧ ಕಾರ್ಯಗಳನ್ನು ಒಪ್ಪಿಸಲಾಗಿತ್ತು. ಕೆಲವರು ಪ್ಲಾಸ್ಮಾವನ್ನು ತರುವ ಕೆಲಸ ಮಾಡುತ್ತಿದ್ದರಾದರೆ, ಇನ್ನು ಕೆಲವರು ರೋಗಿಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದರು.

ಗ್ಲೋಬಲ್ ಹಾಸ್ಪಿಟಲ್ಸ್ ಜೊತೆಗಿನ ಸಂಬಂಧದ ಬಗ್ಗೆ ತನಿಖೆ

ಝಾಲವಾದಲ್ಲಿನ, ಈಗ ಮುಚ್ಚಲಾಗಿರುವ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಟ್ಟರ್‌ನೊಂದಿಗೆ ನಕಲಿ ಪ್ಲೇಟ್‌ಲೆಟ್ಸ್ ಮಾರುವ ಗುಂಪಿಗೂ ಏನಾದರೂ ಸಂಬಂಧವಿದೆಯೇ ಎಂಬುದರ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಪಾಂಡೆ ಹೇಳಿದ್ದಾರೆ. ‘ಆಸ್ಪತ್ರೆಯ ಕೆಲ ಸಿಬ್ಬಂದಿ ನಮ್ಮ ಸಂಪರ್ಕದಲ್ಲಿದ್ದರು’, ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಸಿಬ್ಬಂದಿಗಳ ಮೂಲಕ ಪ್ಲೇಟ್‌ಲೆಟ್‌ಸ್ ನ ಅವಶ್ಯಕತೆಯಿರುವ ಅನೇಕರು ಆರೋಪಿಗಳನ್ನು ಸಂಪರ್ಕಿಸುತ್ತಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧೀಕ್ಷಕ ಪಾಂಡೆ ತಿಳಿಸಿದ್ದಾರೆ.