ಹಿಜಾಬ್ ನಿಷೇಧಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ಅಸ್ತು !

  • ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ !

  • ಹಿಜಾಬ್ ಇಸ್ಲಾಮ್‌ನಲ್ಲಿ ಕಡ್ಡಾಯವಲ್ಲ ಎಂದು ಸ್ಪಷ್ಟ !

  • ಹಿಜಾಬ್ ನಿಷೇಧವನ್ನು ಪ್ರಶ್ನಿಸಿದ ಎಲ್ಲಾ ಅರ್ಜಿಗಳು ವಜಾ !

ಬೆಂಗಳೂರು – ಅನೇಕ ವಾರಗಳಿಂದ ಬಾಕಿ ಉಳಿದಿದ್ದ ಹಿಜಾಬ್ ನಿಷೇಧದ ತೀರ್ಪು ಕೊನೆಗೂ ಹೊರ ಬಂದಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗುವುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯವು ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ತಳ್ಳಿಹಾಕಿದೆ, ‘ಹಿಜಾಬ್ ಇದು ಇಸ್ಲಾಂನ ಅನಿವಾರ್ಯ ಭಾಗವಲ್ಲ’ ಎಂದು ಮಹತ್ವಪೂರ್ಣ ತೀರ್ಪು ನೀಡಿದೆ. ಅದೇ ರೀತಿ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗುವುದು, ಎಂದು ನ್ಯಾಯಾಲಯ ಹೇಳಿದೆ. ಇದರ ಅಡಿಯಲ್ಲಿ ಶಾಲಾ-ಕಾಲೇಜುಗಳಿಗೂ ಸಮವಸ್ತ್ರ ಕಡ್ಡಾಯದ ಹಕ್ಕನ್ನು ನೀಡಲಾಗಿದೆ.

(ಸೌಜನ್ಯ : Vijay Karnataka)

ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಒಟ್ಟು ೮ ಅರ್ಜಿಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದವು. ಅವೆಲ್ಲವನ್ನೂ ರದ್ದುಗೊಳಿಸಲಾಗಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರು ತೀರ್ಪು ನೀಡುವಾಗ, ಈ ತೀರ್ಪು ಎರಡು ಅಂಶಗಳನ್ನು ಆಧರಿಸಿ ನೀಡಲಾಗಿದೆ ಎಂದು ಹೇಳಿದರು. ಮೊದಲನೆಯದಾಗಿ ಹಿಜಾಬ್ ಧರಿಸುವುದು ಸಂವಿಧಾನದ ೨೫ ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಅಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆಯೇ ? ಎರಡನೆಯದಾಗಿ, ಶಾಲಾ ಸಮವಸ್ತ್ರವನ್ನು ಕಡ್ಡಾಯಗೊಳಿಸುವುದು, ಈ ಅಧಿಕಾರದ ವಿರುದ್ಧವೇ ? ಈ ಎರಡೂ ಅಂಶಗಳನ್ನು ಅಧ್ಯಯನ ಮಾಡಿದ ನಂತರ, ನ್ಯಾಯಾಲಯವು ಶೈಕ್ಷಣಿಕ ಸಂಸ್ಥೆಗಳ ಹಿಜಾಬ್ ನಿಷೇಧದ ನಿಲುವನ್ನು ಎತ್ತಿಹಿಡಿದಿದೆ, ಎಂದರು.