‘ನಮಗೆ ಮತವನ್ನು ನೀಡಿದರೆ ೨೦೦ ರೂಪಾಯಿಯ ಮದ್ಯವನ್ನು ೫೦ ರೂಪಾಯಿಗೆ ಕೊಡುತ್ತೇವೆ ! (ಅಂತೆ)

ತೆಲಂಗಾಣದ ಭಾಜಪ ಪ್ರದೇಶಾಧ್ಯಕ್ಷರಾಗಿರುವ ಸೋಮೂ ವೀರರಾಜು ಇವರ ಜನತಾದ್ರೋಹಿ ಕರೆ !

  • ಕಾಂಗ್ರೆಸ್, ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಮುಂತಾದ ರಾಜಕೀಯ ಪಕ್ಷದವರಲ್ಲ, ಭಾಜಪ ಪ್ರದೇಶಾಧ್ಯಕ್ಷರು ಈ ರೀತಿ ಕರೆ ನೀಡುವುದನ್ನು ರಾಷ್ಟ್ರಪ್ರೇಮಿಗಳು ಅಪೇಕ್ಷಿಸಿರಲಿಲ್ಲ.
  • ಇಂದು ಮದ್ಯವನ್ನು ಅಗ್ಗವಾಗಿ ಒದಗಿಸುವ ಬಗ್ಗೆ ಮಾತನಾಡುವವರು, ಇನ್ನು ಮುಂದೆ ಅನೈತಿಕ ವಿಷಯಗಳಿಗೆ ಪರವಾನಗಿ ನೀಡುವ ಬಗ್ಗೆಯೂ ಮಾತನಾಡಬಹುದು!
  • ಜನರಿಗೆ ಸಾಧನೆ, ತ್ಯಾಗ, ವ್ಯಸನದಿಂದ ಮುಕ್ತರಾಗಿರಲು ಕಲಿಸದೇ ವ್ಯಸನಿಗಳಾಗಲು ಪ್ರೋತ್ಸಾಹ ನೀಡುವ ಇಂತಹ ರಾಜಕಾರಣಿಗಳು ಜನರ ಹಿತವನ್ನು ಹೇಗೆ ಕಾಪಾಡುವರು?

ಭಾಗ್ಯನಗರ (ತೆಲಂಗಾಣ) – ಭಾಜಪಕ್ಕೆ ಮತವನ್ನು ನೀಡಿದರೆ ೫೦ ರೂಪಾಯಿಯಲ್ಲಿ ಉತ್ತಮ ದರ್ಜೆಯ ಮದ್ಯ ನೀಡುವೆವು ಎಂದು ಭಾಜಪದ ತೆಲಂಗಾಣ ಪ್ರದೇಶಾಧ್ಯಕ್ಷರಾದ ಸೋಮೂ ವೀರರಾಜು ಆಶ್ವಾಸನೆ ನೀಡಿದ್ದಾರೆ. ಸದ್ಯ ಉತ್ತಮ ದರ್ಜೆಯ ಮದ್ಯ ೨೦೦ ರೂಪಾಯಿಗಳಿಗೆ ಸಿಗುತ್ತದೆ. ಅವರು ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಳಪೆ ಮಟ್ಟದ ಮದ್ಯವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ಅವರು ರಾಜ್ಯ ಸರಕಾರವನ್ನು ಟೀಕಿಸಿದರು. (ರಾಜ್ಯದಲ್ಲಿ ಹಾಲಿನಲ್ಲಿ ಮತ್ತು ಇತರೆ ಖಾದ್ಯ ಪದಾರ್ಥಗಳಲ್ಲಿ ಕಲಬೆರಕೆ ಮಾಡಲಾಗುತ್ತದೆ. ಈ ಕುರಿತು ಮಾತನಾಡಬೇಕೆಂದು ಸೋಮರಾಜು ಇವರಿಗೆ ಏಕೆ ಅನಿಸಲಿಲ್ಲ?- ಸಂಪಾದಕರು) ‘ರಾಜ್ಯದಲ್ಲಿ ಬಹಳಷ್ಟು ಕಂಪನಿಗಳು ಅಧಿಕ ಬೆಲೆಗೆ ಮದ್ಯವನ್ನು ಮಾರಾಟ ಮಾಡುತ್ತವೆ. ಮದ್ಯವನ್ನು ತಯಾರಿಸುವ ಹೆಸರುವಾಸಿ ಕಂಪನಿಗಳು ರಾಜ್ಯದಲ್ಲಿ ಇಲ್ಲ ಎಂದು ಅವರು ಆರೋಪಿಸಿದರು.

ವೀರರಾಜು ಇವರು ಮುಂದುವರಿಸುತ್ತಾ, ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯು ಮದ್ಯಕ್ಕಾಗಿ ಪ್ರತಿ ತಿಂಗಳು ೧೨ ಸಾವಿರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದು, ಈ ಹಣ ಸರಕಾರಿ ಖಜಾನೆಗೆ ಜಮೆಯಾಗುತ್ತದೆ ಮತ್ತು ಇದೇ ಹಣವನ್ನು ಸರಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಉಪಯೋಗಿಸಲಾಗುತ್ತದೆ. ರಾಜ್ಯದ ೧ ಕೋಟಿ ಜನರು ಮದ್ಯ ಸೇವನೆಯನ್ನು ಮಾಡುತ್ತಿದ್ದಾರೆ. ಹಾಗಾಗಿ ೨೦೨೪ ನೇ ಇಸವಿಯ ಚುನಾವಣೆಯಲ್ಲಿ ಈ ೧ ಕೋಟಿ ಜನರು ಭಾಜಪಕ್ಕೆ ಮತದಾನ ಮಾಡಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ. ಒಂದು ವೇಳೆ ಭಾಜಪಕ್ಕೆ ೧ ಕೋಟಿ ಮತಗಳು ಸಿಕ್ಕರೆ, ರಾಜ್ಯದಲ್ಲಿ ೭೫ ರೂಪಾಯಿಗಳಿಗೆ ಪ್ರತಿ ಬಾಟಲಿಯಂತೆ ಉತ್ತಮ ದರ್ಜೆಯ ಮದ್ಯ ಸಿಗುವುದು. ಒಂದು ವೇಳೆ ಅಧಿಕ ಆದಾಯ ಸಂಗ್ರಹವಾದರೆ ಇದೇ ಮದ್ಯದ ಬೆಲೆಯನ್ನು ೭೫ ರೂಪಾಯಿಗಳ ಬದಲು ೫೦ ರೂಪಾಯಿಗೆ ಪ್ರತಿ ಬಾಟಲಿಯಂತೆ ಮಾರಾಟ ಮಾಡಲಾಗುವುದು, ಎಂದರು.