ಮುಂಬಯಿ – ಹಿಂದೂ ಧರ್ಮದಲ್ಲಿ ‘ವಿವಾಹ ಸಂಸ್ಕಾರ’ವನ್ನು ಒಂದು ಮಹತ್ವದ ಸಂಸ್ಕಾರವೆಂದು ಪರಿಗಣಿಸಲಾಗಿದೆ. ಅಲ್ಲದೆ ವಿವಾಹದ ವಿಧಿಯಲ್ಲಿ ‘ಕನ್ಯಾದಾನ’ವು ಒಂದು ಮಹತ್ವದ ಧಾರ್ಮಿಕ ವಿಧಿಯಾಗಿದ್ದು ಕನ್ಯಾದಾನವನ್ನು ಸರ್ವಶ್ರೇಷ್ಠ ದಾನವೆಂದು ಪರಿಗಣಿಸಲಾಗಿದೆ. ಹೀಗಿದ್ದರೂ ಇತ್ತೀಚೆಗೆ ‘ವೇದಾಂತ ಫ್ಯಾಷನ್ಸ್ ಲಿಮಿಟೆಡ್’ ಕಂಪನಿಯು ‘ಮಾನ್ಯವರ’ ಈ ಪ್ರಸಿದ್ಧ ಬಟ್ಟೆ ಬ್ರಾಂಡ್‌ನ ಒಂದು ಜಾಹೀರಾತನ್ನು ಪ್ರಸಾರ ಮಾಡಿದೆ, ಅದರಲ್ಲಿ ‘ಕನ್ಯಾದಾನ’ ಎನ್ನುವುದು ಹೇಗೆ ತಪ್ಪು, ಅದೇ ರೀತಿ ‘ದಾನ ಮಾಡಲು ಕನ್ಯೆಯೇನು ವಸ್ತುವೇ’ ಎಂದು ಪ್ರಶ್ನಿಸುತ್ತಾ ‘ಈಗ ಕನ್ಯಾದಾನವಲ್ಲ, ಬದಲಾಗಿ ಕನ್ಯಾಮಾನ್’ ಹೀಗೆ ಪರಂಪರೆಯನ್ನು ಬದಲಾಯಿಸುವ ಸಂದೇಶವನ್ನು ನೀಡಿದೆ. ಈ ಜಾಹೀರಾತು ಹಿಂದೂ ಧರ್ಮದಲ್ಲಿನ ಧಾರ್ಮಿಕ ಕೃತಿಗಳನ್ನು ತಪ್ಪಾಗಿ ಅರ್ಥೈಸಿ ಅಪಪ್ರಚಾರ ಮಾಡುವ, ಧಾರ್ಮಿಕ ಕೃತಿಗಳನ್ನು ಅವಮಾನಿಸುವ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯು ಈ ಜಾಹೀರಾತನ್ನು ಖಂಡಿಸುತ್ತದೆ. ಹಿಂದೂ ಧರ್ಮದಲ್ಲಿ ‘ಕನ್ಯಾದಾನ’ದ ವಿಧಿಯು ಮೂಲತಃ ಕನ್ಯೆಯನ್ನು ಗೌರವಿಸುವ ಅಂದರೆ ‘ಕನ್ಯಾಮಾನ್’ ಆಗಿದೆ. ಆದ್ದರಿಂದ ‘ವೇದಾಂತ ಫ್ಯಾಶನ್ಸ್ ಲಿಮಿಟೆಡ್’ ಕಂಪನಿಯು ಈ ಜಾಹೀರಾತನ್ನು ತಕ್ಷಣವೇ ಹಿಂಪಡೆದು ಹಿಂದೂಗಳಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು. ಎಲ್ಲಿಯ ವರೆಗೆ ಹಾಗೆ ಮಾಡುವುದಿಲ್ಲವೋ ಅಲ್ಲಿಯ ವರೆಗೆ ‘ಹಿಂದೂ ಸಮಾಜವು ‘ಮಾನ್ಯವರ’ ಬ್ರಾಂಡ್‌ಅನ್ನು ಬಹಿಷ್ಕರಿಸಬೇಕು’ ಎಂದು ನಾವು ಕರೆ ನೀಡುತ್ತೇವೆ, ಎಂಬುದಾಗಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ತಿಳಿಸಿದ್ದಾರೆ.
ಈ ಜಾಹೀರಾತಿನಲ್ಲಿ ‘ಕನ್ಯಾದಾನ’ ವಿಧಿಯು ಒಂದು ರೀತಿಯಲ್ಲಿ ಮಹಿಳೆಯರಿಗೆ ಮಾಡಿದ ಅವಮಾನ ಎಂಬಂತೆ ತೋರಿಸಲಾಗಿದೆ. ಮೂಲತಃ ಈ ವಿಧಿಯ ಮೂಲಕ ಕನ್ಯಾದಾನ ಮಾಡುವಾಗ ವರನಿಂದ ವಚನವನ್ನು ತೆಗೆದುಕೊಳ್ಳಲಾಗುತ್ತದೆ. ಕನ್ಯೆಯನ್ನು ಒಂದು ವಸ್ತುವಾಗಿ ನೀಡುವುದಿಲ್ಲ, ಬದಲಾಗಿ ವಧುವಿನ ತಂದೆಯು ವಧುವಿನ ಕೈಯನ್ನು ವರನಿಗೆ ಒಪ್ಪಿಸುವಾಗ, ‘ವಿಧಾತನು ನನಗೆ ನೀಡಿದ ಈ ವರದಾನದಿಂದಾಗಿ ನನ್ನ ಕುಲದ ಉದ್ಧಾರವಾಯಿತು, ಅವಳನ್ನು ನಿನ್ನ ಕೈಗೆ ಒಪ್ಪಿಸುತ್ತಿದ್ದೇನೆ. ಅವಳು ನಿಮ್ಮ ವಂಶವನ್ನು ವೃದ್ಧಿಸಲಿದ್ದಾಳೆ. ಆದ್ದರಿಂದ ಧರ್ಮ, ಅರ್ಥ, ಕಾಮ, ಮೋಕ್ಷದ ಎಲ್ಲ ನಾಲ್ಕು ವಿಷಯಗಳಲ್ಲಿ ಅವಳಿಗೆ ತೊಂದರೆ ಕೊಡಬೇಡ ಮತ್ತು ಆಕೆಯೊಂದಿಗೆ ಏಕನಿಷ್ಠರಾಗಿರು ಮತ್ತು ಇಬ್ಬರೂ ಸುಖವಾಗಿ ಸಂಸಾರ ಮಾಡಿ’, ಎಂದು ಹೇಳಲಾಗುತ್ತದೆ, ಅದಕ್ಕೆ ‘ನಾತಿಚರಾಮಿ’ ಎಂದು ವರನು ಹೇಳುತ್ತಾನೆ, ಅಂದರೆ ‘ನಾನು ನಿಮಗೆ ನೀಡಿದ ವಚನವನ್ನು ಉಲ್ಲಂಘಿಸುವುದಿಲ್ಲ.’ ಇಷ್ಟು ಶ್ರೇಷ್ಠವಾಗಿರುವ ಈ ವಿಧಿಯನ್ನು ತಥಾಕಥಿತ ಪ್ರಗತಿಪರರೆಂದು ತೋರಿಸುವ ಉದ್ದೇಶದಿಂದ ಭ್ರಮೆಯನ್ನುಂಟು ಮಾಡಿ ಹಿಂದೂ ಧರ್ಮವನ್ನು ಅವಮಾನಿಸಲು ಪ್ರಯತ್ನಿಸಲಾಗುತ್ತಿದೆ.
ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ನೀಡುವಷ್ಟು ಗೌರವವನ್ನು ಜಗತ್ತಿನ ಯಾವುದೇ ಧರ್ಮದಲ್ಲಿ ನೀಡಿಲ್ಲ; ವಾಸ್ತವದಲ್ಲಿ, ಕೆಲವು ಸ್ಥಾಪಿತ ಧರ್ಮಗಳಲ್ಲಿ, ಸ್ತ್ರೀಯನ್ನು ಮಾನವನೆಂದೂ ಪರಿಗಣಿಸಲಾಗುವುದಿಲ್ಲ. ಹಿಂದೂ ಧರ್ಮದಲ್ಲಿ ಸ್ತ್ರೀಗೆ ದೇವಿಯ ಸ್ಥಾನವನ್ನು ನೀಡಲಾಗಿದೆ. ಅವಳನ್ನು ಪೂಜಿಸಲಾಗುತ್ತದೆ. ಪತ್ನಿಯಿಲ್ಲದೆ ಧಾರ್ಮಿಕ ವಿಧಿಗಳು ಆರಂಭವೇ ಆಗುವುದಿಲ್ಲ. ಆದರೂ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ. ಪ್ರಸ್ತುತ, ‘ಹಲಾಲಾ’, ‘ತ್ರಿವಳಿ ತಲಾಕ’, ‘ಬಹುಪತ್ನಿತ್ವ’, ಈ ರೂಢಿ ಹಾಗೂ ‘ಸ್ತ್ರೀಯು ಸೈತಾನಳಾಗಿದ್ದಾಳೆ’ ಎಂಬ ನಂಬಿಕೆಯುಳ್ಳ ಸಿದ್ಧಾಂತವು ಅಸ್ತಿತ್ವದಲ್ಲಿದೆ. ಈ ಬಗ್ಗೆ ಯಾರೂ ಜಾಹೀರಾತು ಬಿಡಿ, ಅದನ್ನು ಖಂಡಿಸಲೂ ಸಹ ಮುಂದೆ ಬರುವುದಿಲ್ಲ. ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು ‘ವೇದಾಂತ ಫ್ಯಾಶನ್ಸ್ ಲಿಮಿಟೆಡ್’ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಜಾಹೀರಾತುಗಳಿಗಾಗಿ ‘ಸೆನ್ಸಾರ್ ಬೋರ್ಡ್’ ಅನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರಕಾರದ ಬಳಿ ಒತ್ತಾಯಿಸಲಾಗುವುದು ಎಂದು ಶ್ರೀ. ಶಿಂದೆಯವರು ಹೇಳಿದರು.