ಸನಾತನ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ‘ಆನ್‌ಲೈನ್’ ಯುವಾ ಸಾಧಕ ಸತ್ಸಂಗದ ಆಯೋಜನೆ
ಮಂಗಳೂರು – ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ನಮ್ಮ ಸಾಧನೆಯ ವೇಗವನ್ನು ಹೆಚ್ಚಿಸಿ ಗುರುಕೃಪೆಯನ್ನು ಸಂಪಾದಿಸಬೇಕು. ಇಂದು ಎಷ್ಟೋ ಮಕ್ಕಳು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ನಮ್ಮಲ್ಲಿರುವ ಕೌಶಲ್ಯದ ಉಪಯೋಗವನ್ನು ಸಾಧನೆಗಾಗಿ ನೀಡಬೇಕು. ಸಾಧನೆಯಲ್ಲಿ ಮುಂದುಮುಂದಿನ ಮಾರ್ಗದರ್ಶನ ಪಡೆಯಲು ಎಲ್ಲರೂ ನಿಯಮಿತವಾಗಿ ಸತ್ಸಂಗದಲ್ಲಿ ಭಾಗಿಯಾಗಬೇಕು. ನಾವೆಲ್ಲರೂ ಹಿಂದೂ ರಾಷ್ಟ್ರದ ಭಾವಿ ಪ್ರಜೆಗಳಾಗಿದ್ದೇವೆ. ನಮ್ಮ ಪ್ರತಿಯೊಂದು ಕೃತಿ ಕೂಡ ಸಾಧನೆ ಮತ್ತು ಧರ್ಮಾಚರಣೆಯೆಂದು ಮಾಡಲು ಪ್ರಯತ್ನ ಮಾಡಬೇಕು. ಗುರುಶಿಷ್ಯ ಪರಂಪರೆಯು ಜಗತ್ತಿಗೆ ನೀಡಿದ ಸರ್ವಶ್ರೇಷ್ಠ ಕೊಡುಗೆಯಾಗಿದೆ. ಗುರುಗಳು ಶಿಷ್ಯನ ಉದ್ಧಾರವನ್ನು ಮಾಡುತ್ತಾರೆ. ನಮ್ಮ ಜೀವನದಲ್ಲಿ ಕೂಡ ಮಹಾನ್ ಗುರುಗಳು ಸಿಕ್ಕಿದ್ದಾರೆ. ಅದು ನಮ್ಮ ಪರಮಭಾಗ್ಯವಾಗಿದೆ. ನಾವೆಲ್ಲರೂ ಅಂತಹ ಗುರುಗಳ ಕೃಪೆಯನ್ನು ಪಡೆಯಲು ಪ್ರಯತ್ನ ಮಾಡೋಣ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು.
ಸನಾತನ ಸಂಸ್ಥೆಯ ವತಿಯಿಂದ ರಾಜ್ಯದ ಯುವ ಸಾಧಕರಿಗಾಗಿ ಪೂ. ರಮಾನಂದ ಗೌಡ ಇವರು ಇತ್ತೀಚೆಗೆ ಆನ್‌ಲೈನ್ ಮಾರ್ಗದರ್ಶನ ಮಾಡಿದರು. ೩೦೭ ಕ್ಕೂ ಹೆಚ್ಚು ಯುವಕರು ಹಾಗೂ ಬಾಲಸಾಧಕರು ಈ ಮಾರ್ಗದರ್ಶನದ ಲಾಭ ಪಡೆದರು. ಈ ಮಾರ್ಗದರ್ಶನದಿಂದ ಎಲ್ಲ ಯುವ ಸಾಧಕರಲ್ಲಿ ಉತ್ಸಾಹ ಮೂಡಿದ್ದು ಹೆಚ್ಚೆಚ್ಚು ಸಾಧನೆ ಹಾಗೂ ಧರ್ಮಕಾರ್ಯ ಮಾಡಲು ಅವರು ನಿಶ್ಚಯಿಸಿದರು.
ಅಭಿಪ್ರಾಯ !
ಇಷ್ಟು ದಿನ ಸಾಧನೆಯಲ್ಲಿ ಏನೇನು ಮಾಡಬೇಕು ಎಂದು ತಿಳಿದಿತ್ತು, ಆದರೆ ಅಷ್ಟೊಂದು ಪ್ರಯತ್ನ ಆಗುತ್ತಿರಲಿಲ್ಲ. ನಾವು ಮಾರ್ಗ ತಪ್ಪುತ್ತಿದ್ದೆವು. ಇಂತಹ ಸಮಯದಲ್ಲಿ ಗುರುಗಳು ನಮ್ಮನ್ನು ನಮ್ಮ ಕೈ ಹಿಡಿದು ಪುನಃ ಸಾಧನೆಯ ಮಾರ್ಗದಲ್ಲಿ ತರುತ್ತಿದ್ದಾರೆ ಎಂದು ಗಮನಕ್ಕೆ ಬಂದಿತು. – ಕು. ಪ್ರಣೀತಾ ಉಪ್ಪರ , ಧಾರವಾಡ ಜಿಲ್ಲೆ.
ಮಾರ್ಗದರ್ಶನದಲ್ಲಿ ಹೇಳಿದ ಪ್ರತಿಯೊಂದು ವಿಷಯದ ಮಹತ್ವ ತಿಳಿಯಿತು. ‘ನಾವು ಮಾಡುವ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಭಾವಪೂರ್ಣವಾಗಿ ಮಾಡಬೇಕು’ ಎಂದು ಅನಿಸಿತು. ಈ ಸತ್ಸಂಗದಿಂದ ತುಂಬಾ ಭಾವಜಾಗೃತಿಯಾಯಿತು. -ಕು. ಐಶ್ವರ್ಯಾ , ಉಜಿರೆ, ದಕ್ಷಿಣ ಕನ್ನಡ
ಇಂದಿನ ಸತ್ಸಂಗದಿಂದ ಭಗವಂತನ ಸ್ಮರಣೆಯನ್ನು ಯಾವ ರೀತಿಯಿಂದ ಮಾಡಬೇಕು. ಮುಂಬರುವ ಆಪತ್ಕಾಲದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಒಳ್ಳೆಯ ಮಾರ್ಗದರ್ಶನ ಮಾಡಿದರು. ನಾನು ಇವುಗಳನ್ನು ಕೃತಿಯಲ್ಲಿ ತರಲು ಆದಷ್ಟು ಹೆಚ್ಚಿನ ಪ್ರಯತ್ನ ಮಾಡುತ್ತೇನೆ. – ಕು. ಸೌಮ್ಯ ಕೆ. ಪುತ್ತೂರು ದಕ್ಷಿಣ ಕನ್ನಡ
ಸಂತರ ಮಾರ್ಗದರ್ಶನ ತುಂಬಾ ಅಮೂಲ್ಯವಾದದ್ದು. ಅದು ನಮ್ಮಂತಹ ಸಾಧಕರಿಗೆ ಸಿಕ್ಕಿದೆ ಅದು ನಮ್ಮ ಪೂರ್ವಜನ್ಮದ ಪುಣ್ಯ. ಈ ಜನ್ಮದಲ್ಲಿ ಮಾಡುತ್ತಿರುವ ತಪ್ಪುಗಳು ನಮ್ಮ ಸಾಧನೆಗೆ ಹಾನಿಯಾಗುತ್ತಿದೆ ಎಂದು ತಿಳಿಯಿತು. ಇನ್ನೂ ಹೆಚ್ಚು ಸೇವೆ ಮಾಡುವ ಜೊತೆಗೆ ವ್ಯಷ್ಟಿಯ ಕಡೆಗೆ ಗಮನ ಕೊಡಬೇಕೆಂದು ತಿಳಿಯಿತು. -ಕು. ಬಾಲಾಜಿ ಮತ್ತು ಕು. ಅಪೂರ್ವ, ಹಾಸನ
ಮನುಷ್ಯ ಜನ್ಮದ ಮಹತ್ವ ತಿಳಿಯಿತು. ಪೂ. ಅಣ್ಣನವರು ಹೇಳುವಾಗ ಪ್ರತಿ ಅಂಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅನಿಸಿತು. – ಕು. ಅಮರನಾಥ ಹುಳಿಪಲ್ಲೇದ, ಬಾದಾಮಿ
ಪೂ. ಅಣ್ಣ ನವರು ಹೇಳಿದಂತೆ ನನಗೆ ಈ ಮನುಷ್ಯಜನ್ಮದಲ್ಲಿ ಮೋಕ್ಷಪ್ರಾಪ್ತಿ ಮಾಡಿಕೊಳ್ಳಬೇಕು. ಸದ್ಯ ಅಪತ್ಕಾಲದಲ್ಲಿ ಎಲ್ಲ ಹಿಂದೂಗಳು ಒಟ್ಟಾಗಲು ಪೂರಕ ವಾತಾವರಣ ನಿರ್ಮಾಣವಾಗಿದೆ. ‘ನಾವು ಸೇವೆ ಮಾಡಬೇಕು’ ಎಂದು ಅನಿಸಿತು. -ಕು. ರಾಗಿಣಿ, ಶಿಕಾರಿಪುರ
ದೇವರ ಮೇಲೆ ಶ್ರದ್ಧೆ ಮತ್ತು ಭಕ್ತಿ ಹೆಚ್ಚಿಸಬೇಕು ಎಂಬುದರ ಮಹತ್ವ ತಿಳಿಯಿತು. ಇನ್ನು ನಾನು ನಾಮಜಪ ಇತ್ಯಾದಿ ಉಪಾಯಗಳನ್ನು ಹೆಚ್ಚಿಸುವೆನು. – ಕು.ಮಂಜುನಾಥ ಉಪ್ಪಾರ, ಹಳಿಯಾಳ
ವೈಶಿಷ್ಟ್ಯಪೂರ್ಣ
ಈ ಸತ್ಸಂಗವು ಅಂತರ್ಯಾಮಿಯಾಗಿರುವ ಗುರುಗಳು ದೈವಿ ಸಂಭೂತ ಜೀವಿಗಳನ್ನು ಮಾಯೆಯ ಜಾಲದಿಂದ ಬಿಡಿಸಲು ಸಂತರ ಮಾಧ್ಯಮದಿಂದ ರಚಿಸಿದ ದೈವಿಲೀಲೆಯೇ ಆಗಿತ್ತು. ಈಶ್ವರನು ಹಿಂದೂ ರಾಷ್ಟ್ರಕ್ಕಾಗಿ ಮುಂದಿನ ಪೀಳಿಗೆಯನ್ನು ರೂಪಿಸುತ್ತಿದ್ದಾನೆ ಎಂದು ಈ ಸತ್ಸಂಗದಲ್ಲಿ ಪಾಲ್ಗೊಂಡವರು ಹೇಳಿದರು.
ಸತ್ಸಂಗದ ದಿನದಂದು ಓರ್ವ ಯುವ ಸಾಧಕನಿಗೆ ಮಧ್ಯಾಹ್ನ ೩ ಗಂಟೆಗೆ ಪರೀಕ್ಷೆ ಇತ್ತು. ಆದರೆ ಅವನಿಗೆ ಸತ್ಸಂಗದಲ್ಲಿ ಪಾಲ್ಗೊಳ್ಳುವ ತೀವ್ರ ಇಚ್ಛೆ ಇತ್ತು. ಅವನಿಗೆ ಪ್ರಾರ್ಥನೆ ಮಾಡಲು ಹೇಳಿದಾಗ ಅವನು ಹಾಗೆ ಮಾಡಿದನು. ಹಿಂದಿನ ರಾತ್ರಿ ಅವನಿಗೆ ‘ನಾಳೆ ಪರೀಕ್ಷೆ ಸಾಯಂಕಾಲ ೫.೩೦ ಕ್ಕೆ ಇದೆ’, ಎಂದು ತಿಳಿಯಿತು. ಆ ಸಾಧಕನಿಗೆ ಸತ್ಸಂಗ ಸಹ ಸಿಕ್ಕಿತು ಮತ್ತು ಅವನು ಪರೀಕ್ಷೆಯನ್ನೂ ಬರೆದನು.
ಗಮನಾರ್ಹ ಅಂಶಗಳು
- ಮಾರ್ಗದರ್ಶನಕ್ಕಾಗಿ ಶೇಕಡಾ ೮೦ ರಷ್ಟು ಯುವ ಸಾಧಕರು ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದರು.
- ಯುವ ಸಾಧಕರು ಪೂ. ರಮಾನಂದಅಣ್ಣನವರು ಹೇಳಿದ ಅಂಶಗಳಿಗೆ ‘ಚಾಟ್ ಬಾಕ್ಸ್’ ಮೂಲಕ ತತ್ಪರತೆಯಿಂದ ಸ್ಪಂದಿಸಿದರು.
- ಮನೋಗತ ಹೇಳುವಾಗ ಪ್ರತಿಯೊಬ್ಬರೂ ಮಾರ್ಗದರ್ಶನದಲ್ಲಿ ಹೇಳಿದ ಅಂಶಗಳಲ್ಲಿ ಅವರಿಗೆ ಏನು ಕಲಿಯಲು ಸಿಕ್ಕಿತು ಎಂದು ಹೇಳುತ್ತಿದ್ದರು. ಇದರಿಂದ ಪ್ರತಿಯೊಂದು ಅಂಶಗಳನ್ನು ಮನಃಪೂರ್ವಕವಾಗಿ ಕೇಳಿಸಿಕೊಂಡು ಸ್ಪಂದಿಸುವುದು ಗಮನಕ್ಕೆ ಬಮದಿತು.
- ಮಾರ್ಗದರ್ಶನದ ನಂತರ ಅನೇಕ ಯುವಾ ಸಾಧಕರು ವಿವಿಧ ರೀತಿಯ ಸೇವೆಗಳನ್ನು ಮಾಡಲು ಹಾಗೂ ಸೇವೆಯನ್ನು ಕಲಿಯಲು ಮತ್ತು ಯುವಾ ಸಾಧಕರ ಸತ್ಸಂಗಕ್ಕೆ ಬರಲು ಉತ್ಸುಕರಾಗಿರುವುದು ಗಮನಕ್ಕೆ ಬಂದಿತು
- ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ೫ ನಿಮಿಷಗಳಲ್ಲಿ ೩೪ ಯುವಾ ಸಾಧಕರು ಹಾಗೂ ೫ ಗಂಟೆಗಳಲ್ಲಿ ೨೫೦ ಯುವಾ ಸಾಧಕರು ಮುಂದೆ ಬಂದು ಇಚ್ಛೆ ವ್ಯಕ್ತಪಡಿಸಿದರು.
- ಮಾರ್ಗದರ್ಶನದಲ್ಲಿ ಅನೇಕ ಯುವ ಸಾಧಕರು ವಿವಿಧ ರೀತಿಯ ಸೇವೆ ಮಾಡಲು ಹಾಗೂ ಸೇವೆ ಕಲಿಯಲು ಹಾಗೂ ಯುವಾ ಸಾಧಕರ ಸತ್ಸಂಗಕ್ಕೆ ಬರಲು ಉತ್ಸುಕರಾಗಿರುವುದು ಗಮನಕ್ಕೆ ಬಂದಿತು