ಅತಿಕ್ರಮಣಕ್ಕೊಳಗಾದ ಕೊಟ್ಯಂತರ ಮೌಲ್ಯದ ದೇವಸ್ಥಾನಗಳ ಜಮೀನುಗಳ ರಕ್ಷಣೆ ಮಾಡಿ !

ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ 36 ಸಾವಿರ ದೇವಸ್ಥಾನಗಳ ಬಳಿ ಸರಿ ಸುಮಾರು 10 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಜಮೀನುಗಳು ಇದೆ. ಆದರೆ ಅಧಿಕಾರಿಗಳ ನಿರ್ಲಕ್ಷ, ಬೇಜವಾಬ್ದಾರಿ, ಹಣದಾಸೆಯಿಂದ ಮತ್ತು ಪ್ರಭಾವಿಗಳ ಕುತಂತ್ರದಿಂದ ಕೊಟ್ಯಂತರ ಮೌಲ್ಯದ ದೇವಸ್ಥಾನದ ಜಮೀನು ಖಾಸಗಿಯವರ ಪಾಲಾಗುತ್ತಿದೆ. ಕಳೆದ ಸೆಪ್ಟೆಂಬರ್ ವರೆಗೆ ಅಂಕಿಅಂಶದ ಪ್ರಕಾರ ದೇವಸ್ಥಾನಗಳ ಜಮೀನು ಒತ್ತುವರಿಯ 176 ಪ್ರಕರಣಗಳು ಜರುಗಿದ್ದು, ಅದರಲ್ಲಿ ಎ ಗ್ರೇಡ್ ದೇವಸ್ಥಾನದ 387.28 ಎಕರೆ, ಬಿ ಗ್ರೇಡ್ ದೇವಸ್ಥಾನದ 2.12 ಎಕರೆ, ಸಿ ಗ್ರೇಡ್ ದೇವಸ್ಥಾನದ 192.27 ಎಕರೆ ಜಮೀನುಗಳು ಖಾಸಗಿಯವರ ಪಾಲಾಗಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ, ಧಾರ್ಮಿಕ ದತ್ತಿ ಇಲಾಖೆಯ ಕಾಯಿದೆಯ ಸೂಚನೆ ಇದ್ದರೂ ಸಹ ಇದುವರೆಗೆ ದೇವಸ್ಥಾನಗಳ ಜಮೀನನ್ನು ಸರ್ವೇ ಮಾಡಿ, ಅತಿಕ್ರಮಣವನ್ನು ತೆರವುಗೊಳಿಸಿ, ಜಮೀನನ್ನು ದೇವಸ್ಥಾನಕ್ಕೆ ವಶಪಡಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ. ಇದರಿಂದ ದೇವಸ್ಥಾನದ ಸಾವಿರಾರು ಕೋಟಿ ರೂಪಾಯಿಗಳ ದೇವಸ್ಥಾನದ ಜಮೀನು ಖಾಸಗಿಯವರ ಪಾಲಾಗಿದೆ. ಅದಕ್ಕಾಗಿ ಇಂದು ರಾಜ್ಯ ಸರ್ಕಾರವು ಕೂಡಲೇ ಕೋಟ್ಯಂತರ ರೂಪಾಯಿ ಮೌಲ್ಯದ ದೇವಸ್ಥಾನದ ಜಮೀನುಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಮಾನ್ಯ ಮುಖ್ಯಮಂತ್ರಿಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ. ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಮನವಿಯನ್ನು ಸಲ್ಲಿಸಿದೆ.

ದೇವಸ್ಥಾನದ ಹುಂಡಿಯ ಹಣವನ್ನು ಕಳ್ಳತನ ಮಾಡುವ ಸಿಬ್ಬಂದಿಯ ಮೇಲೆ ಕಾನೂನು ಕ್ರಮ ಜರುಗಿಸಿ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಥಿಣಿ ಗ್ರಾಮದ ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನದ ಹುಂಡಿಯ ಹಣವನ್ನು ಸಿಬ್ಬಂದಿಗಳೇ ಕಳ್ಳತನ ಮಾಡುತ್ತಿರುವುದು ಭಕ್ತರೇ ಮೊಬೈಲ್ ಮೂಲಕ ಸೆರೆ ಹಿಡಿದಿರುವ ಘಟನೆ ನಡೆದಿದೆ. ಇದು ಅತ್ಯಂತ ನಿರ್ಲಜ್ಯ ಘಟನೆಯಾಗಿದ್ದು, ಇದು ದೇವಸ್ಥಾನಗಳ ಸದ್ಯದ ಸ್ಥಿತಿಯನ್ನು ತೋರಿಸುತ್ತದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಆಗ್ರಹ ಮಾಡುತ್ತಿದೆ.
ದೇವಸ್ಥಾನಗಳ

ಲೆಕ್ಕಪರಿಶೋಧನೆಯನ್ನು ಪ್ರತಿವರ್ಷ ಮಾಡಿರಿ !

ಪ್ರತಿವರ್ಷ ದೇವಸ್ಥಾನದ ಲೆಕ್ಕಪರಿಶೋಧನೆ ವರದಿ ಮಾಡಬೇಕು ಎಂದು ನಿಯಮವಿದ್ದರೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಲೆಕ್ಕಪರಿಶೋಧನೆಯ ವರದಿಯನ್ನು ೨೦೧೯ ರ ಮಾಡದಿರುವುದು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಬಯಲಾಗಿದೆ. ಇದು ಕೊಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ.

ಕೊಲ್ಲೂರಿನ ಅಗ್ನಿತೀರ್ಥ ಹೊಳೆಯ ಪಾವಿತ್ರ್ಯವನ್ನು ಕಾಪಾಡಿರಿ !

ಕೊಲ್ಲೂರಿನ ಅಗ್ನಿತೀರ್ಥ ಹೊಳೆಯು ವಾಣಿಜ್ಯ ಸಂಕೀರ್ಣ, ವಸತಿ ಗೃಹದಿಂದ ಮಲಿನವಾಗಿದೆ. ಅದರಿಂದ ಜಲಚರಗಳಿಗೆ ಹಾನಿ, ಸಾಂಕ್ರಾಮಿಕ ರೋಗ ಹರಡುತ್ತದೆ. ಇದೇ ನದಿಯಲ್ಲಿ ದೇವರ ತೆಪ್ಪೋತ್ಸವ ನಡೆಯುತ್ತದೆ. ಹಾಗಾಗಿ ಕೂಡಲೇ ಅಗ್ನಿತೀರ್ಥ ಹೊಳೆಯ ಮಲಿನತೆಯನ್ನು ತಡೆಯಲು ಕ್ರಮಜರುಗಿಸಿ.