ಸರಕಾರಿ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಆಂದೋಲನ ಕೈಗೊಳ್ಳುವುದಾಗಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಕರ್ನಾಟಕ’ದ ಎಚ್ಚರಿಕೆ !
ಉಡುಪಿ – ಭಕ್ತರು ಶ್ರದ್ಧೆಯಿಂದ ಅರ್ಪಿಸಿದ ದಾನವು ಭ್ರಷ್ಟ ಅಧಿಕಾರಿಗಳ ಕಿಸೆಗೆ ಹೋಗುತ್ತಿದ್ದರೆ, ಭಕ್ತರು ದೇವಸ್ಥಾನಗಳಿಗೆ ಏಕೆ ದಾನ ನೀಡಬೇಕು ? ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸರಕಾರಿ ಅಧಿಕಾರಿಯು ಕೋಟ್ಯವಧಿ ಸಂಪತ್ತು ಲೂಟಿ ಮಾಡಿರುವುದು ಮಾಹಿತಿ ಹಕ್ಕು ಅಧಿನಿಯಮದಿಂದ ಬಹಿರಂಗವಾಗಿದೆ. ಭಕ್ತರು ಅರ್ಪಿಸಿದ ಧನವು ದೇವನಿಧಿಯಾಗಿದ್ದು, ಅದರ ಲೂಟಿ ಮಾಡುವುದು ಮಹಾಪಾಪವಾಗಿದೆ. ಈ ಮಹಾಪಾಪಿಗಳಿಗೆ ಶ್ರೀ ಮೂಕಾಂಬಿಕಾದೇವಿಯು ಖಂಡಿತ ಶಿಕ್ಷಿಸುತ್ತಾಳೆ; ಆದರೆ ಈ ಅಧಿಕಾರಿಯ ಮೇಲೆ ಕಠಿಣ ಕ್ರಮ ಜರುಗಿಸಲು ಮತ್ತು ದೇವನಿಧಿ ಲೂಟಿಗೆ ಸಾಧನವಾದ ‘ದೇವಸ್ಥಾನ ಸರಕಾರಿಕರಣ’ ರದ್ದತಿಗಾಗಿ ಹೋರಾಡುವುದು ಭಕ್ತರ ಧರ್ಮಕರ್ತವ್ಯ. ಈ ಸರಕಾರಿ ಅಧಿಕಾರಿಗಳ ಮೇಲೆ ತಕ್ಷಣವೇ ಕ್ರಮವನ್ನು ಜರುಗಿಸದೇ ಇದ್ದರೆ ಇದರ ವಿರುದ್ಧ ರಾಜ್ಯವ್ಯಾಪಿ ಆಂದೋಲನವನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡುತ್ತಾ, ಈ ಲೂಟಿಕೋರ ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆಯ ವಿರುದ್ಧದ ಧರ್ಮದ ಹೋರಾಟದಲ್ಲಿ ಸಮಸ್ತ ಭಕ್ತರು ಭಾಗವಹಿಸಬೇಕು ಎಂದು ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ದ ವಕ್ತಾರರಾದ ಶ್ರೀ. ಗುರುಪ್ರಸಾದ ಗೌಡ ಇವರು ಕರೆ ನೀಡಿದ್ದಾರೆ. ಅವರು ಸರಕಾರೀಕರಣಗೊಂಡ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಬೃಹತ್ ಪ್ರಮಾಣದಲ್ಲಿ ನಡೆದಿರುವ ಹಗರಣಗಳು ಮತ್ತು ಆರ್ಥಿಕ ಅವ್ಯವಹಾರಗಳನ್ನು ಬಹಿರಂಗ ಪಡಿಸಲು ಆಯೋಜಿಸಲಾಗಿದ್ದ ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರೊಂದಿಗೆ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ದ ಸದಸ್ಯರಾದ ಶ್ರೀ. ಮಧೂಸೂದನ ಅಯ್ಯರ್ ಇವರೂ ಉಪಸ್ಥಿತರಿದ್ದರು.
ಅದೇ ರೀತಿ ಮಹಾಸಂಘದ ವತಿಯಿಂದ ಬೆಂಗಳೂರಿನಲ್ಲಿಯೂ ನಡೆದ ಪತ್ರಿಕಾ ಪರಿಷತ್ತಿನಲ್ಲಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ.’ ಇದರ ರಾಜ್ಯ ಸಮನ್ವಯಕರಾದ ಶ್ರೀ. ಮೋಹನ ಗೌಡ, ಮಹಾಸಂಘದ ಸದಸ್ಯರಾದ ನ್ಯಾಯವಾದಿ ಕಿರಣ ಬೆಟ್ಟದಾಪುರ, ನ್ಯಾಯವಾದಿ ಶ್ರೀ. ವಿಜಯಶೇಖರ, ಶ್ರೀ. ಪ್ರಣವ ಶರ್ಮಾ ಗುರೂಜಿ, ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಶ್ರೀ. ಎಮ್. ಎಸ್. ಹರೀಶ ಇವರು ಉಪಸ್ಥಿತರಿದ್ದರು.
ಸರಕಾರಿಕರಣಗೊಳಿಸಿದ ಎಲ್ಲ ದೇವಸ್ಥಾನಗಳನ್ನು ಮುಕ್ತಗೊಳಿಸಿ ಶ್ರೀ. ಗೌಡ ಇವರು ಈ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ವ್ಯವಹಾರಗಳನ್ನು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ದೊರಕಿದ ಕಾಗದಪತ್ರಗಳ ಆಧಾರದಲ್ಲಿ ಬಯಲುಗೊಳಿಸಿದರು. ೨೦೧೮-೧೯ ರ ‘ಕಾಗ್ ವರದಿಗನುಸಾರ ಕರ್ನಾಟಕ ಸರಕಾರವು ೧೪೦ ಕಂಪನಿಗಳು, ಸಹಕಾರಿ ಸಂಸ್ಥೆಗಳು ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ ೬೬,೫೧೮ ಕೋಟಿಗಳಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದರೂ ಅದರಲ್ಲಿ ಸರಕಾರಕ್ಕೆ ಶೇ. ೦.೦೬ ಅಂದರೆ ಕೇವಲ ೩೮ ಕೋಟಿಯಷ್ಟು ಹಾನಿಯೇ ಆಗಿದೆ. ಕೈತುಂಬ ಸಂಬಳ ಪಡೆದರೂ ಸರಕಾರಿ ಐಎಎಸ್ ಅಧಿಕಾರಿಗಳು ಸರಕಾರಕ್ಕೆ ಹಾನಿ ಮಾಡುತ್ತಿದ್ದರೆ, ಇವರು ದೇವಸ್ಥಾನದ ಆಡಳಿತವನ್ನು ಎಂದಾದರೂ ಸರಿಯಾಗಿ ನೋಡಿಕೊಳ್ಳುವರೇ ? ಇದು ಒಂದು ದೇವಸ್ಥಾನದ ಆಡಳಿತ ಮಂಡಳಿಯ ವ್ಯವಹಾರದಿಂದ ಸ್ಪಷ್ಟವಾಗಿದೆ. ಹಾಗಾಗಿ ಸರಕಾರಿಕರಣಗೊಂಡ ಎಲ್ಲ ದೇವಸ್ಥಾನಗಳನ್ನು ಮುಕ್ತಗೊಳಿಸಿ ಎಂದು ಕೋರುತ್ತಿದ್ದೇವೆ ಎಂದೂ ಶ್ರೀ. ಗೌಡ ಇವರು ಹೇಳಿದರು.
ಶ್ರೀ. ಗೌಡರವರು ಮುಂದೆ ಮಾತನಾಡುತ್ತಾ, ‘ನಾವು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಈ ಪ್ರಕರಣದ ಸಂದರ್ಭದಲ್ಲಿ ಭೇಟಿಯಾಗುವವರಿದ್ದು ಶ್ರೀ ಮೂಕಾಂಬಿಕಾ ದೇವಸ್ಥಾನದ ದೇವ ನಿಧಿಯಲ್ಲಿ ಆಗುತ್ತಿರುವ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ ಗಮನಹರಿಸಿ ಕೂಡಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಲಿದ್ದೇವೆ. ದೇವನಿಧಿಯ ಒಂದೊಂದು ರೂಪಾಯಿಯೂ ವಸೂಲಾತಿ ಆಗುವವರೆಗೆ ಮತ್ತು ದೇವನಿಧಿಯನ್ನು ಲೂಟಿ ಮಾಡುವ ದೋಷಿಗಳಿಗೆ ಕಠಿಣ ಶಿಕ್ಷೆಯಾಗುವವರೆಗೆ ನಮ್ಮ ಸಂಘರ್ಷ ಮುಂದುವರಿಯಲಿದೆ’ ಎಂದೂ ಶ್ರೀ. ಗೌಡ ಇವರು ಈ ಸಂದರ್ಭದಲ್ಲಿ ಹೇಳಿದರು.
ಈ ಸಮಯದಲ್ಲಿ ಮುಂದಿನ ಬೇಡಿಕೆಯನ್ನು ಕೂಡ ಮಾಡಲಾಯಿತು. ಈಗಿನ ಸರಕಾರವು ಹಿಂದುಹಿತರಕ್ಷಣೆಯ ಸರಕಾರವಾಗಿದೆಯೆಂದು ಹಿಂದೂ ಸಮಾಜದ ಭಾವನೆಯಾಗಿದೆ. ಆದುದರಿಂದ ದೇವಸ್ಥಾನ ಆಡಳಿತದ ವ್ಯವಹಾರದಲ್ಲಿ ಆಗುವ ಇಂತಹ ಅಹಿತಕರ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಕ್ರಮಕೈಗೊಳ್ಳಲಾಗುವುದೆಂದು ಆಶಿಸುತ್ತೇವೆ ಎಂದು ಶ್ರೀ. ಗೌಡ ಇವರು ಹೇಳಿದರು.
ದೇವಸ್ಥಾನದ ಸುವ್ಯವಸ್ಥಾಪನೆಗಾಗಿ ನೇಮಿಸಿದ ಅಧಿಕಾರಿಗಳು ದೇವಸ್ಥಾನವನ್ನು ತಮ್ಮ ಸ್ವತ್ ಎಂಬಂತೆ ಬಳಸುತ್ತಿದ್ದಾರೆ ! – ಶ್ರೀ. ಮಧುಸೂದನ ಅಯ್ಯರ್
ರಾಜ್ಯದಲ್ಲಿರುವ ಮಹತ್ವದ ದೇವಸ್ಥಾನಗಳ ಪೈಕಿ ಒಂದಾಗಿರುವ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಈ ರೀತಿ ಆಗುತ್ತಿದ್ದರೆ, ಇತರೆ ದೇವಸ್ಥಾನಗಳ ಬಗ್ಗೆ ಸರಕಾರಿ ಅಧಿಕಾರಿಗಳು ಏನು ಮಾಡುತ್ತಿರಬಹುದು, ಎಂದು ಕಲ್ಪನೆಯನ್ನು ಮಾಡದಿರುವುದೇ ಒಳ್ಳೆಯದು. ದೇವಸ್ಥಾನಗಳ ಸುವ್ಯವಸ್ಥಿತವಾದ ಆಡಳಿತ ಜರುಗಲು ನೇಮಿಸಿರುವ ಅಧಿಕಾರಿಯು ದೇವಸ್ಥಾನವನ್ನು ತನ್ನ ಖಾಸಗಿ ಸಂಪತ್ತು ಎಂಬಂತೆ ಉಪಯೋಗಿಸುತ್ತಿದ್ದಾರೆ. ಅಲ್ಲದೇ ಕೇವಲ ಹಿಂದೂಗಳ ದೇವಸ್ಥಾನಗಳ ಸರಕಾರಿಕರಣವೇಕೆ ? ಮಸೀದಿ ಮತ್ತು ಚರ್ಚ್‌ಗಳ ಸರಕಾರಿಕರಣವನ್ನು ಏಕೆ ಮಾಡುತ್ತಿಲ್ಲ ? ಇದೇ ಸರಕಾರದ ಜಾತ್ಯತೀತವಾಗಿದೆಯೇ ? ಎಂದು ಪ್ರಶ್ನಿಸುತ್ತಾ ನಾವು ಇದನ್ನು ಸಹಿಸುವುದಿಲ್ಲ. ಇದರ ವಿರುದ್ಧ ರಸ್ತೆಗಿಳಿದು ಹೋರಾಟ ಮಾಡುತ್ತೇವೆ.
ಈ ಸಂದರ್ಭದಲ್ಲಿ ಮುಂದಿನ ಬೇಡಿಕೆಗಳನ್ನು ಮಾಡಲಾಯಿತು
ಅ. ಈ ಲೆಕ್ಕಪತ್ರ ಪರೀಕ್ಷಣೆಯು ಆಧಾರದಲ್ಲಿ ಈ ಪ್ರಕರಣದ ಮೂಲಕ್ಕೆ ಹೋಗಿ ತನಿಖೆ ಮಾಡಬೇಕು, ತನಿಖೆಯಲ್ಲಿ ಕಂಡುಬರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಹಾಗೂ ಯಾರಲ್ಲಿ ದೇವಸ್ಥಾನದ ಬಾಕಿ ಮೊತ್ತ ಇದೆಯೋ ಅದನ್ನು ಸಂಬಂಧಪಟ್ಟವರಿಂದ ಕೂಡಲೇ ವಸೂಲಿ ಮಾಡಬೇಕು.
ಆ. ಅಲ್ಲಿಯವರೆಗೆ ದೇವಸ್ಥಾನದಲ್ಲಿರುವ ಎಲ್ಲ ವ್ಯವಹಾರಗಳಲ್ಲಿ ಪಾರದರ್ಶಕತೆ ಬರಬೇಕೆಂದು ದೇವಸ್ಥಾನದ ಎಲ್ಲ ವ್ಯವಹಾರಗಳ ಮಾಹಿತಿ ಮತ್ತು ಅವುಗಳ ವಿವರದ ನೋಂದಣಿಯನ್ನು ದೇವಸ್ಥಾನದ ಜಾಲತಾಣದಲ್ಲಿ ನಿಯಮಿತವಾಗಿ ಪ್ರಕಟಿಸಬೇಕು.
ಇ. ರಾಜ್ಯದ ಎಲ್ಲ ಸರಕಾರಿಕರಣಗೊಂಡ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ ಭಕ್ತ ವಶಕ್ಕೊಪ್ಪಿಸಬೇಕು.
ಶ್ರೀ. ಗೌಡ ಇವರು ಈ ಸಮಯದಲ್ಲಿ ಮಾಹಿತಿ ಹಕ್ಕು ಅಧಿನಿಯಮದಲ್ಲಿ ದೊರಕಿದ ಕಾಗದಪತ್ರಗಳ ವಿವರವನ್ನು ಬಹಿರಂಗ ಪಡಿಸುತ್ತಾ ದೇವಸ್ಥಾನದ ಆಡಳಿತ ಮಂಡಳಿಯ ಭ್ರಷ್ಟಾಚಾರವನ್ನು ಬಯಲು ಮಾಡಿದರು. ಅವುಗಳ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ.
೧. ಅರ್ಪಣೆಯಲ್ಲಿ ದೊರಕಿದ ಬಂಗಾರ-ಬೆಳ್ಳಿಯ ಆಭರಣಗಳ ನೋಂದಣಿಯನ್ನು ವ್ಯವಸ್ಥಿತವಾಗಿಟ್ಟು ಅವುಗಳನ್ನು ಪಟ್ಟಿಯಂತೆ ಆಭರಣಗಳನ್ನು ನಿಯಮಿತವಾಗಿ ಪ್ರತ್ಯಕ್ಷ ಪರಿಶೀಲನೆ ಮಾಡಬೇಕು ಮತ್ತು ಕಾರ್ಯಕಾರಿ ಅಧಿಕಾರಿಯಿಂದ ಅದನ್ನು ದೃಢೀಕೃತಗೊಳಿಸಬೇಕು ಎನ್ನುವ ನಿಯಮವಿದ್ದರೂ ಉದ್ದೇಶಪೂರ್ವಕವಾಗಿ,
ಅ. ದೇವಸ್ಥಾನದಲ್ಲಿ ದೇಣಿಗೆ ಸ್ವರೂಪದಲ್ಲಿ ದೊರೆತ ಬಂಗಾರ-ಬೆಳ್ಳಿಯ ಬೆಲೆಬಾಳುವ ಆಭರಣಗಳ ಬಗ್ಗೆ ನಿಯಮಾನುಸಾರ ನೋಂದಣಿ ಮಾಡಿಟ್ಟಿಲ್ಲ.
ಆ. ವರ್ಷ ೨೦೧೮-೧೯ರ ವರೆಗೆ ಇಂತಹ ದೇಣಿಗೆ ಸ್ವೀಕರಿಸಿದ ಆಭರಣಗಳ ಪಟ್ಟಿಯನ್ನು ಸರಕಾರಿ ಲೆಕ್ಕಪರಿಶೋಧಕರಿಗೆ ಸಲ್ಲಿಸಿಲ್ಲ.
ಇ. ೨೦೧೬ ನೇ ಇಸವಿಯಲ್ಲಿ ದೇವಿಯ ೪.೨೦ ಕಿಲೋ ಬಂಗಾರದ ಹಾರವನ್ನು ಅಧಿಕಾರಿಯು ಕದ್ದಿದ್ದನು ಮತ್ತು ಆ ಅಧಿಕಾರಿಯ ಮೇಲೆ ದೂರು ದಾಖಲಾಗಿ ಆತನ ಬಂಧನವೂ ಆಗಿತ್ತು. ಅಧಿಕಾರಿಗಳೇ ದೇವಿಯ ಬಂಗಾರವನ್ನು ಕಳ್ಳತನ ಮಾಡಿದರೆ ಇಂತಹ ಅಧಿಕಾರಿಗಳನ್ನು ಹೇಗೆ ನಂಬುವುದು ?
೨. ಸುಳ್ಳು ಸಿಬ್ಬಂದಿಗಳನ್ನು ತೋರಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರವಾಗುತ್ತಿರುವುದು ಕಂಡು ಬರುತ್ತದೆ. ಅಧಿನಿಯಮಗಳ ಕಲಮ್ ೧೩ ಅನುಸಾರ ದೇವಸ್ಥಾನದ ಸಿಬ್ಬಂದಿಗಳ ವಿವರಗಳ ಮಾಹಿತಿಯನ್ನಿಡಬೇಕೆಂಬ ನಿಯಮವಿದ್ದರೂ ಅವರ ‘ಕೆವೈಸಿ’ ವಿವರ, ಜನನ ದಿನಾಂಕ ಇತ್ಯಾದಿ ಪ್ರಾಥಮಿಕ ವಿವರಗಳು ಸಹ ದೇವಸ್ಥಾನದ ಅಧಿಕಾರಿಯ ಬಳಿ ಇಲ್ಲ.
೩. ದೇವಸ್ಥಾನದ ಸಿಬ್ಬಂದಿಗಳ ಭವಿಷ್ಯನಿಧಿಯನ್ನು ನೋಂದಾಯಿತ ಭವಿಷ್ಯನಿಧಿ ಆಯುಕ್ತರ ಬಳಿ ಜಮೆ ಮಾಡಿಲ್ಲ; ಈ ಕಾರಣದಿಂದ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳಿಂದ ೭,೪೬,೩೫೫ ರೂಪಾಯಿಗಳ ದಂಡದ ಮೊತ್ತವನ್ನು ವಸೂಲು ಮಾಡಲಾಗಿದೆ. ಆದರೆ ಈ ದಂಡವನ್ನು ಸರಕಾರಿ ಅಧಿಕಾರಿಯ ಸಂಬಳದಿಂದ ವಸೂಲು ಮಾಡುವ ಬದಲು ಅದನ್ನು ಭಕ್ತರ ದೇಣಿಗೆಯಿಂದ ನೀಡಲಾಗಿದೆ. ಈ ವಿಷಯವನ್ನು ಮೇಲಿಂದ ಮೇಲೆ ಗಮನಕ್ಕೆ ತಂದರೂ ದೇವಸ್ಥಾನದ ಅಧಿಕಾರಿಯು ನಿರ್ಲಕ್ಷತೆ ವಹಿಸಿದರು. ಈ ಪ್ರಸಂಗ ಗಂಭೀರವಾಗಿದೆ, ಏಕೆಂದರೆ ದೇವಸ್ಥಾನದ ಬಹಳಷ್ಟು ಸಿಬ್ಬಂದಿಗಳು ತಾತ್ಕಾಲಿಕ ನೌಕರರಾಗಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಸುಳ್ಳು ನೌಕರರ ಹೆಸರು ಮತ್ತು ಅವರ ಸಂಬಳವನ್ನು ತೋರಿಸಿ ಆ ಹಣವನ್ನು ಅಧಿಕಾರಿಯೇ ಕಬಳಿಸುತ್ತಿದ್ದಾರೆ.
೪. ದೊಡ್ಡ ಪ್ರಮಾಣದಲ್ಲಿ ಮುಂಗಡ ಮೊತ್ತ ವಿತರಣೆಯಾಗುತ್ತಿದ್ದು, ಅವುಗಳ ಮರುಪಾವತಿ ಅನೇಕ ದಿನಗಳಿಂದ ಬಾಕಿ ಉಳಿದಿದೆ. ಇದರಲ್ಲಿ
ಅ. ೨೦೦೪ ನೇ ಇಸವಿಯಲ್ಲಿ ಒಟ್ಟು ೨.೪೧ ಕೋಟಿ ರೂಪಾಯಿಗಳ ಮುಂಗಡ ಮೊತ್ತ ಬಾಕಿ ಉಳಿದಿದ್ದು ಅದು ಕಡಿಮೆಯಾಗುವುದರ ಬದಲಾಗಿ ಹೆಚ್ಚಳವಾಗಿ ೨೦೧೮-೧೯ ನೇ ಇಸವಿಯಲ್ಲಿ ಅದು ೨.೮೩ ಕೋಟಿಗಳಷ್ಟಾಗಿದೆ.
ಆ. ಈ ಮೊತ್ತವನ್ನು ಯಾರಿಂದ ಮತ್ತು ಏತಕ್ಕಾಗಿ ವಸೂಲಾತಿ ಮಾಡಬೇಕಾಗಿದೆ, ಎನ್ನುವ ವಿವರಣೆ ದೇವಸ್ಥಾನದ ಆಡಳಿತ ಮಂಡಳಿಯ ಬಳಿಯಿಲ್ಲ. ಇದರ ಯಾವುದೇ ವಿವರಗಳನ್ನು ಲೆಕ್ಕಪರಿಶೋಧಕರಿಗೆ ತೋರಿಸುತ್ತಿಲ್ಲ ಅಥವಾ ಸೂಕ್ತವಾದ ಕಾಗದಪತ್ರಗಳೊಂದಿಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ.
ಇ. ನಿಯಮಾನುಸಾರ ಪರವಾನಗಿಯನ್ನು ಪಡೆಯದೇ ದೇವಸ್ಥಾನದ ಹಣದಿಂದ ಈ ಮುಂಗಡ ಮೊತ್ತವನ್ನು ನೀಡುವುದು ಕಾನೂನುಬಾಹಿರವಾಗಿದೆ. ಇದರಲ್ಲಿ ತೊಡಗಿಕೊಂಡಿರುವ ಎಲ್ಲ ಅಧಿಕಾರಿಗಳ ವಿಚಾರಣೆ ಇಲಾಖಾವಾರು ಕೈಗೊಳ್ಳುವುದು ಮತ್ತು ದೋಷಿಗಳ ಮೇಲೆ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ.
೫. ಜಮೀನು ಮತ್ತು ದೇವಸ್ಥಾನದ ಇತರೆ ಆಸ್ತಿಪಾಸ್ತಿಗಳ ಸರಿಯಾದ ಮಾಹಿತಿ ನೋಂದಾಯಿಸಿಟ್ಟುಕೊಳ್ಳದಿರುವುದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಪರಿಣಾಮವಾಗಿ ಅನೇಕ ಜಮೀನುಗಳು ಅತಿಕ್ರಮಣಗಳಾಗಿವೆ. ದೇವಸ್ಥಾನದ ಆಸ್ತಿಪಾಸ್ತಿಯ ನೋಂದಣಿಯನ್ನು ಸರಿಯಾಗಿಡಲು ಸಾಧ್ಯವಿಲ್ಲದವರು ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳಲು ಅರ್ಹರೇ ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
೬. ಅನೇಕ ನಿಯಮಬಾಹಿರ ಆರ್ಥಿಕ ವ್ಯವಹಾರಗಳನ್ನು ಮಾಡಿರುವುದು ಕಂಡು ಬಂದಿದೆ. ಇದರ ಅಂಕಿ ಅಂಶಗಳು ನೂರಾರು ಕೋಟಿಗಳಷ್ಟು ಇರಬಹುದು. ಉದಾ. –
ಅ. ದೇವಸ್ಥಾನದ ಆಡಳಿತ ಮಂಡಳಿಯು ಅನೇಕರಿಗೆ ಕಾನೂನು ಬಾಹಿರವಾಗಿ ದೇಣಿಗೆಯನ್ನು ನೀಡಿದೆ. ಅಲ್ಲದೇ ಆ ದೇಣಿಗೆಯ ಪಾವತಿಗಳು ಕೂಡ ಇರುವುದಿಲ್ಲ.
ಆ. ದೇವಸ್ಥಾನದ ಆಡಳಿತ ಮಂಡಳಿಯು ವಿವಿಧ ರೀತಿಯ ಖರ್ಚುಗಳನ್ನು ಮಾಡಿದೆ; ಆದರೆ ಅವುಗಳ ಬಿಲ್‌ಗಳನ್ನು ಅಥವಾ ವೋಚರ್‌ಗಳು ಲಭ್ಯವಿರುವುದಿಲ್ಲ.
ಇ. ೨೦೦೪-೦೫ ನೇ ಇಸವಿಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯು ೧,೪೫,೦೯೪ ರೂಪಾಯಿಗಳಷ್ಟು ದೂರವಾಣಿ ಬಿಲ್‌ನ್ನು ಪಾವತಿಸಿದೆ. ಆದರೆ ಒಂದು ವರ್ಷದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ಇಷ್ಟು ಯಾವ ದೂರವಾಣಿ ಕರೆಯನ್ನು ಮಾಡಿದೆ ? ಯಾವ ಉದ್ದೇಶದಿಂದ ಮಾಡಿದೆ ?ಖಂಡಿತವಾಗಿಯೂ ದೂರವಾಣಿ ಕರೆ ಮಾಡಲು ವಿನಿಯೋಗಿಸಲಾಗಿದೆಯೋ ಅಥವಾ ಇನ್ನಿತರೆ ಅವ್ಯವಹಾರವಾಗಿದೆ.
ಈ. ವರ್ಷ ೨೦೦೫ ರಿಂದ ೨೦೧೮ ರವರೆಗೆ ದೇವಸ್ಥಾನ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಶಾಲೆಯ ಸಮವಸ್ತ್ರಗಳಿಗಾಗಿ ೫೩ ಲಕ್ಷ ರೂಪಾಯಿಗಳನ್ನು ಕೊಟ್ಟಿದೆ; ಆದರೆ ಇವುಗಳ ಯಾವುದೇ ಪಾವತಿ ಅಥವಾ ಪ್ರಮಾಣಪತ್ರಗಳು ಉಪಲಬ್ಧವಿಲ್ಲ. ವಾಸ್ತವದಲ್ಲಿ ವ್ಯವಸ್ಥಾಪನೆಯು ಯಾರಿಗೆ ದೇಣಿಗೆ ನೀಡಿದೆಯೋ ಅದರ ಯೋಗ್ಯ ವಿನಿಯೋಗವಾಗುತ್ತಿದೆಯೇ ಎಂದು ಪ್ರತ್ಯಕ್ಷ ಭೇಟಿ ನೋಡುವುದು ಅಪೇಕ್ಷಿತವಿದೆ. ಆದರೆ ಅವರು ಅಗತ್ಯವಿರುವ ವಿಷಯಗಳನ್ನು ಸಹ ಪೂರ್ಣ ಮಾಡಿಲ್ಲ.
ಉ. ೨೦೧೧-೧೨ ನೇ ಇಸವಿಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯು ವಿಶ್ರಾಂತಿಗೃಹಗಳಿಗಾಗಿ ೨,೩೫,೫೫೫ ಗಳ ಮೊತ್ತದ ಬಕೇಟು ಮತ್ತು ಕಸದ ಡಬ್ಬಿಗಳನ್ನು ಖರೀದಿಸಿದೆ. ಇಷ್ಟು ಬಕೇಟು ಮತ್ತು ಕಸದ ಡಬ್ಬಿಗಳನ್ನು ಖರೀದಿಸಿದ ಬಗ್ಗೆ ಪಾವತಿ, ದರಪಟ್ಟಿ ಇತ್ಯಾದಿ ಯಾವುದೂ ಉಪಲಬ್ಧವಿಲ್ಲ.
ಊ. ೨೦೧೮ ನೇ ಇಸವಿಯಲ್ಲಿ ಜಿಲ್ಲಾಧಿಕಾರಿಗಳ ನಿವಾಸದ ೨೩,೩೬೩ ರೂಪಾಯಿಗಳ ದೂರವಾಣಿ ಬಿಲ್, ಅಲ್ಲದೇ ಪಾಲಿಕೆಯ ಕೆಲವು ಸಿಬ್ಬಂದಿಗಳ ಸಂಬಳವನ್ನು ಸಹ ಮಂದಿರದ ನಿಧಿಯಿಂದ ನೀಡಲಾಗಿದೆ. ಹೀಗೇಕೆ ? ಸರಕಾರದ ಬಳಿ ಇದಕ್ಕಾಗಿ ನಿಧಿ ಉಪಲಬ್ಧವಿರಲಿಲ್ಲವೇ ? ಅಥವಾ ಇದರಲ್ಲಿಯೂ ಭ್ರಷ್ಟಾಚಾರ ನಡೆದಿದೆಯೇ ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ದೇವಸ್ಥಾನ ಆಡಳಿತ ಮಂಡಳಿಯ ಸಮಿತಿಯ ವತಿಯಿಂದ ಪಡೆಯುವ ಅವಶ್ಯಕತೆಯಿದೆ.
೭. ದೇವಸ್ಥಾನದ ವಿಶ್ರಾಂತಿಗೃಹದಿಂದ ೩೧.೩.೨೦೧೮ ರವರೆಗೆ ೨೧,೫೨,೦೦೦ ಗಳಿಗಿಂತ ಅಧಿಕ ರೂಪಾಯಿ ಬಾಕಿ ಬರಬೇಕಾಗಿದೆ.
೮. ಲೆಕ್ಕಪರಿಶೋಧಕರು ದೇವಸ್ಥಾನದ ವ್ಯವಹಾರದಲ್ಲಿ ೨೧.೮೦ ಕೋಟಿ ರೂಪಾಯಿಗಳ ಆರ್ಥಿಕ ವ್ಯವಹಾರ ಸಂಶಯಾಸ್ಪದವಾಗಿದೆ, ಅಲ್ಲದೇ ದೇವಸ್ಥಾನದ ಆಡಳಿತ ಮಂಡಳಿಯು ೮೪.೯೬ ಲಕ್ಷ ರೂಪಾಯಿಗಳ ಬಾಕಿ ವಸೂಲಾತಿ ಮಾಡಬೇಕು ಎಂದು ತಿಳಿಸಿದ್ದಾರೆ.