ಮ್ಯಾನ್ಮಾರ್‌ನಲ್ಲಿ ಅಧಿಕಾರ ಪದಚ್ಯುತಗೊಳಿಸಿದ ಸೈನ್ಯ!

* ಆಂಗ್ ಸಾನ್ ಸೂಕಿ ಸಹಿತ ರಾಷ್ಟ್ರಪತಿ ಅಧ್ಯಕ್ಷರನ್ನು ಬಂಧಿಸಲಾಗಿದೆ

* ಒಂದು ವರ್ಷದ ತುರ್ತು ಪರಿಸ್ಥಿತಿ ಘೋಷಣೆ

ಯಾಂಗೊನ್ (ಮ್ಯಾನ್ಮಾರ್) – ಮ್ಯಾನ್ಮಾರ್ ಅಧ್ಯಕ್ಷ ವಿನ್ ಮೈಂಟ್, ಆಡಳಿತ ಪಕ್ಷದ ಹಿರಿಯ ನಾಯಕಿ ಮತ್ತು ಪ್ರಜಾಪ್ರಭುತ್ವ ಪರ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಸೈನ್ಯವು ಬಂಧಿಸಿದೆ. ಫೆಬ್ರವರಿ ೧ ರಂದು ಇವರೆಲ್ಲರನ್ನು ಬಂಧಿಸಲಾಗಿದೆ. ದೇಶದಲ್ಲಿ ಒಂದು ವರ್ಷ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಮಾಜಿ ಜನರಲ್ ಮತ್ತು ಉಪ ರಾಷ್ಟ್ರಪತಿ ಮಿಂಟ್ ಸ್ವೇ ಅವರನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರಿಗೆ ಸೇನಾಪಡೆಯ ಮುಖ್ಯಸ್ಥರ ಹುದ್ದೆಯನ್ನೂ ನೀಡಲಾಗಿದೆ. ಮ್ಯಾನ್ಮಾರ್ ಸೈನ್ಯವು ದೂರದರ್ಶನದಲ್ಲಿ ಘೋಷಿಸಿತು, ‘ಸೈನ್ಯವು ಒಂದು ವರ್ಷಕ್ಕಾಗಿ ಅಧಿಕಾರವನ್ನು ಕೈಗೆತ್ತಿಕೊಂಡಿದೆ. ಆದ್ದರಿಂದ ಈಗ ಸೈನ್ಯದ ಕಮಾಂಡರ್-ಇನ್-ಚೀಫ್ ಮಿನ್ ಆಂಗ್ ಹೈಲಿಂಗ್ ಅವರು ಅಧಿಕಾರದ ನಿಯಂತ್ರಣವಿರಲಿದೆ.’ ಅಧಿಕಾರ ಬದಲಾವಣೆ ಜೊತೆಗೆ ದೇಶದ ವಿವಿಧ ಜಾಗಗಳಲ್ಲಿ ಸೈನಿಕಪಡೆಯನ್ನು ನಿಯುಕ್ತಿಗೊಳಿಸಲಾಗಿದೆ. ಈ ಅಧಿಕಾರ ಬದಲಾವಣೆಯನ್ನು ಯಾರೂ ವಿರೋಧಿಸಬಾರದು ಎಂದು ಮ್ಯಾನ್ಮಾರ್‌ನ ಪ್ರಮುಖ ನಗರವಾದ ಯಾಂಗೊನ್‌ನಲ್ಲಿರುವ ಸಿಟಿ ಹಾಲ್‌ನ ಹೊರಗೆ ಸೈನಿಕರನ್ನು ನಿಯೋಜಿಸಲಾಗಿದೆ. ದೂರವಾಣಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

. ಮ್ಯಾನ್ಮಾರ್‌ನ ಸೈನ್ಯವು ಜನವರಿ ೩೦ ರಂದು ದೇಶದ ಸಂವಿಧಾನಕ್ಕನುಸಾರ ಕಾರ್ಯಕಲಾಪ ನಡೆಸುವುದಾಗಿ ಹೇಳಿದೆ. ಇದಕ್ಕೆ ಮೊದಲು ಸಹ ಸೈನ್ಯದಿಂದ ಅಧಿಕಾರಾರೂಢ ಸರಕಾರವನ್ನು ಪದಚ್ಯುತಗೊಳಿಸುವ ಬಗ್ಗೆ ಅನುಮಾನಗಳಿದ್ದವು. ಸೈನ್ಯವು ದೇಶದ ಚುನಾವಣೆಯಲ್ಲಿ ಹಗರಣಗಳಾಗಿವೆ ಎಂದು ಆರೋಪಿಸಿತ್ತು. ಆದರೆ ಯಾವುದೇ ಹಗರಣಗಳು ನಡೆದಿಲ್ಲ ಮತ್ತು ಚುನಾವಣೆಗಳನ್ನು ಅತ್ಯಂತ ವಿಶ್ವಾಸಾರ್ಹ ಪದ್ಧತಿಯಲ್ಲಿ ನಡೆಸಲಾಗಿದೆ ಎಂದು ದೇಶದ ಚುನಾವಣಾ ಆಯೋಗವು ನಂತರ ಸ್ಪಷ್ಟಪಡಿಸಿತ್ತು. ಮ್ಯಾನ್ಮಾರ್‌ನ ಸಂವಿಧಾನದ ಪ್ರಕಾರ, ಸಂಸತ್ತಿನಲ್ಲಿ ೨೫ ಪ್ರತಿಶತದಷ್ಟು ಸ್ಥಾನಗಳು ಸೈನ್ಯಕ್ಕೆ ಮೀಸಲಾಗಿವೆ, ಮತ್ತು ಸೈನ್ಯವು ಸರಕಾರದ ಮೂರು ಪ್ರಮುಖ ಇಲಾಖೆಗಳ ನಿಯಂತ್ರಣವಿದೆ.

. ಮ್ಯಾನ್ಮಾರ್‌ನಲ್ಲಿ ದೀರ್ಘಕಾಲದ ತನಕ ಸೈನ್ಯಾಡಳಿವಿತ್ತು. ೧೯೬೨ ರಿಂದ ೨೦೧೧ ರವರೆಗೆ ದೇಶದಲ್ಲಿ ಸೈನ್ಯದ ಸರ್ವಾಧಿಕಾರವಿತ್ತು. ೨೦೧೦ ರಲ್ಲಿ ಮ್ಯಾನ್ಮಾರ್ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿ ನಾಗರಿಕರ ಸರಕಾರವು ಅಧಿಕಾರವನ್ನು ವಹಿಸಿತು. ಇದರಲ್ಲಿ ಜನರು ಚುನಾಯಿಸಿದ ಪ್ರತಿನಿಧಿಗಳಿಗೆ ಆಡಳಿತ ನಡೆಸಲು ಅವಕಾಶ ಸಿಕ್ಕಿತ್ತು.

ಭಾರತ ಮತ್ತು ಅಮೇರಿಕಾದಿಂದ ವಿರೋಧ

“ನಾವು ಕಾನೂನಿನ ರಾಜ್ಯದಲ್ಲಿ ವಿಶ್ವಾಸವನ್ನಿಡುತ್ತೇವೆ ಪ್ರಜಾಪ್ರಭುತ್ವ ಪ್ರಕ್ರಿಯೆಯು ಶಾಶ್ವತವಾಗಿ ಮುಂದುವರಿಯಬೇಕು” ಎಂದು ಭಾರತವು ಹೇಳಿದೆ. ಮ್ಯಾನ್ಮಾರ್‌ನ ಪರಿಸ್ಥಿತಿಯ ಬಗ್ಗೆ ಅಮೇರಿಕಾವು ಚಿಂತಿತವಾಗಿದೆ ಎಂದು ಶ್ವೇತಭವನದ ವಕ್ತಾರ ಜೇನ್ ಪಾಸ್ಕಿ ಹೇಳಿದ್ದಾರೆ. ಇದರ ಬಗ್ಗೆ ಹೇಳುವಾಗ ಅವರು, ಮ್ಯಾನ್ಮಾರ್‌ನ ಸೈನ್ಯವು ದೇಶದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದೆ. ಮ್ಯಾನ್ಮಾರ್‌ನಲ್ಲಿರುವ ಪ್ರಜಾಪ್ರಭುತ್ವ ಪರಶಕ್ತಿಗಳನ್ನು ಅಮೇರಿಕಾವು ಬೆಂಬಲಿಸುತ್ತಿದೆ ಮತ್ತು ಬಂಧಿತರನ್ನು ಬಿಡುಗಡೆ ಮಾಡಬೇಕು. ತನ್ನ ಸೈನಿಕ ಕಾರ್ಯಾಚರಣೆಯನ್ನು ಹಿಂತೆಗೆದುಕೊಳ್ಳದಿದ್ದರೆ ಅಮೇರಿಕಾವು ಕಠಿಣ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದಿದ್ದಾರೆ