ನವ ದೆಹಲಿ: ನವ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ಪಿಇಟಿಎನ್ ಮಾದರಿಯ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇವು ಸೈನ್ಯವು ಬಳಸುವಂತಹ ಸ್ಫೋಟಕಗಳಾಗಿವೆ. ಈ ಸ್ಫೋಟಕಗಳು ಸುಲಭವಾಗಿ ಲಭ್ಯವಿಲ್ಲ. ಈ ಹಿಂದೆ ಅಲ್ ಖೈದಾದಂತಹ ಭಯೋತ್ಪಾದಕ ಸಂಘಟನೆಗಳು ಈ ಸ್ಫೋಟಕಗಳನ್ನು ಬಾಂಬ್ ತಯಾರಿಸಲು ಬಳಸಿದ್ದವು.
ಘಟನಾ ಸ್ಥಳದಲ್ಲಿ ೯ ವೋಲ್ಟ್ ಬ್ಯಾಟರಿಯ ಅವಶೇಷಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಹಿಂದೆ, ಉಗ್ರಗಾಮಿ ಸಂಘಟನೆಗಳಾದ ಇಂಡಿಯನ್ ಮುಜಾಹಿದ್ದೀನ್ ಮತ್ತು ಲಷ್ಕರ್-ಎ-ತೋಯಿಬಾಗಳು ಇಂತಹ ಬ್ಯಾಟರಿಗಳನ್ನು ಬಾಂಬ್ ತಯಾರಿಸಲು ಬಳಸಿದ್ದರು ಎಂದು ಮೂಲಗಳು ತಿಳಿಸಿವೆ. ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕರು ಬಾಂಬುಗಳನ್ನು ತಯಾರಿಸಲು ಸುಲಭವಾಗಿ ಲಭ್ಯವಿರುವ ಅಮೋನಿಯಂ ನೈಟ್ರೇಟ್ ಅನ್ನು ಬಳಸುತ್ತಿದ್ದರು.
ಪ್ಯಾರಿಸ್‌ನಲ್ಲಿಯೂ ಇಸ್ರೇಲಿ ರಾಯಭಾರಿ ಕಚೇರಿಯ ಬಳಿ ಬಾಂಬ್ ಪತ್ತೆ
ದೆಹಲಿಯಲ್ಲಿ ಯಾವ ದಿನದಂದು ಇಸ್ರೇಲಿ ರಾಯಭಾರಿ ಕಚೇರಿಯ ಮುಂದೆ ಬಾಂಬ್ ಸ್ಪೋಟವಾಯಿತೋ ಅದೇ ದಿನ ಕೆಲವೇ ಗಂಟೆಗಳಲ್ಲಿ ಪ್ಯಾರಿಸ್ ನಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯ ಮುಂದೆ ಬಾಂಬ್ ಕಂಡುಬಂದಿದೆ. ಆದ್ದರಿಂದ ದೆಹಲಿ ಸ್ಫೋಟವು ಅಂತರರಾಷ್ಟ್ರೀಯ ಪಿತೂರಿಯ ಭಾಗವಾಗಿರಬಹುದು, ಎಂಬ ಹಿನ್ನೆಲೆಯಲ್ಲಿ ತನಿಖೆ ಆರಂಭವಾಗಿದೆ.
೨೦೧೨ ರಲ್ಲಿ ದೆಹಲಿಯಲ್ಲಿ ಇಸ್ರೇಲಿ ರಾಜನೈತಿಕ ಅಧಿಕಾರಿಯೊಬ್ಬರ ಚತುಷ್ಚಕ್ರ ವಾಹನದ ಮೇಲೆ ಬಾಂಬ್ ಸ್ಫೋಟಿಸಲಾಯಿತು. ಅದೇ ದಿನ ಜಾರ್ಜಿಯಾದ ಇಸ್ರೇಲಿ ರಾಯಭಾರಿ ಕಚೇರಿಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಬಾಂಬ್ ಪತ್ತೆಯಾಗಿತ್ತು. ಥೈಲ್ಯಾಂಡ್‌ನ ಇಸ್ರೇಲಿ ರಾಯಭಾರಿ ಕಚೇರಿಯ ಬಳಿ ದಾಳಿಯೂ ನಡೆದಿತ್ತು. ಈ ಮೂರೂ ದಾಳಿಗಳು ಇರಾನ್ ನಡೆಸಿತ್ತು ಎಂದು ಶಂಕಿಸಲಾಗಿತ್ತು. ಈಗಲೂ ದೆಹಲಿ ಬಾಂಬ್ ಸ್ಫೋಟದ ಹಿಂದೆ ಇರಾನ್‌ನ ಕೈವಾಡವು ಕಂಡುಬರುತ್ತಿದೆ.