ದೆಹಲಿಯ ಬಾಂಬ್ ಸ್ಫೋಟ ಪ್ರಕರಣ ‘ಇದು ಕೇವಲ ಟ್ರೈಲರ್’ – ಬೆದರಿಕೆ ಪತ್ರ !

* ಕಾಸಿಮ್ ಸುಲೇಮಾನಿ ಮತ್ತು ಮೊಹ್ಸಿನ್ ಫಕ್ರಿಜಾದೆಹ ಅವರ ಹತ್ಯೆಯ ಸೇಡು ತೀರಿಸುವ ಪ್ರಯತ್ನ

* ಇರಾನ್‌ನ ಸೇನಾ ಮುಖ್ಯಸ್ಥ ಮತ್ತು ಅಲ್ಲಿನ ವಿಜ್ಞಾನಿಯ ಹತ್ಯೆಯ ಸೇಡನ್ನು ತೀರಿಸಿಕೊಳ್ಳಲು ಭಯೋತ್ಪಾದಕರು ಭಾರತದಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸುತ್ತಿದ್ದರೆ ಅದು ಸಂತಾಪಜನಕವೇ ಆಗಿದೆ! ಮೊದಲೇ ಭಾರತಕ್ಕೆ ಪಾಕ್ ಪ್ರಚೋದಿತ ಭಯೋತ್ಪಾದನೆ ಮತ್ತು ಬಾಂಗ್ಲಾದೇಶೀ ನುಸುಳುಕೋರರೊಂದಿಗೆ ಹೋರಾಡಬೇಕಾಗುತ್ತಿದೆ. ಈಗ ಇರಾನ್‌ನ ಭಯೋತ್ಪಾದಕ ಸಂಘಟನೆಗಳ ವಿರುದ್ಧವೂ ಹೋರಾಡಬೇಕಾಗುತ್ತದೆ!

ನವದೆಹಲಿ : ನವದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಬಳಿ ನಡೆದ ಬಾಂಬ್ ಸ್ಫೋಟದ ಸ್ಥಳದಲ್ಲಿ ಪೊಲೀಸರಿಗೆ ಒಂದು ಪತ್ರವು ಸಿಕ್ಕಿದೆ. ಅದರಲ್ಲಿ, ಇರಾನ್‌ನ ‘ರೆವೆಲ್ಯೂಷನರಿ ಗಾರ್ಡ್ ಕಾರ್ಪ್ಸ್’ನ ಮುಖ್ಯಸ್ಥ ಜನರಲ್ ಕಾಸಿಮ್ ಸುಲೈಮಾನಿ ಮತ್ತು ವಿಜ್ಞಾನಿ ಮೊಹ್ಸಿನ್ ಫಖ್ರಿಜಾದೆಹ ಅವರನ್ನು “ಹುತಾತ್ಮ” ಎಂದು ಕರೆದಿದ್ದು, ಮತ್ತು ಇದು ಕೇವಲ ಟ್ರೈಲರ್ ಎಂದು ಬರೆಯಲಾಗಿದೆ. ಸುಲೈಮಾನಿಯನ್ನು ಅಮೇರಿಕಾ ಮತ್ತು ಮೊಹ್ಸಿನ್ ಇವರನ್ನು ಇಸ್ರೇಲ್ ಹತ್ಯೆಗೈದಿದ್ದು, ಸೇಡು ತೀರಿಸಿಕೊಳ್ಳಲು ಭಯೋತ್ಪಾದಕ ದಾಳಿ ನಡೆಸಲಾಗಿದೆ ಎಂದು ಈ ಪತ್ರದಿಂದ ಸ್ಪಷ್ಟವಾಗಿದೆ.

ಘಟನೆಯ ತನಿಖೆ ನಡೆಸುತ್ತಿರುವಾಗ, ಆ ಪ್ರದೇಶದಲ್ಲಿದ್ದ ೩ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಕ್ಯಾಬ್ (ಟ್ಯಾಕ್ಸಿ) ಕಂಡುಬಂದಿದೆ. ಈ ಟ್ಯಾಕ್ಸಿಯಿಂದ ಇಬ್ಬರು ಸ್ಥಳದಲ್ಲಿ ಇಳಿದಿದ್ದರು. ಅದರ ನಂತರ ಕ್ಯಾಬ್ ಹೋದಂತೆ ತೋರುತ್ತದೆ. ಕ್ಯಾಬ್ ನಿಂದ ಹೊರಬಂದ ನಂತರ, ಇಬ್ಬರೂ ಬಾಂಬ್ ಸ್ಫೋಟದ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪೊಲೀಸರು ಕ್ಯಾಬ್‌ ಚಾಲಕನನ್ನು ಸಂಪರ್ಕಿಸಿದ್ದು, ಅವರು ನೀಡಿರುವ ಮಾಹಿತಿಯ ಆಧಾರದ ಮೇಲೆ ವ್ಯಕ್ತಿಗಳ ರೇಖಾಚಿತ್ರಗಳನ್ನು ತಯಾರಿಸಲಾಗುತ್ತಿದೆ.