ಮಂಗಳೂರು – ಕಾರ್ತಿಕ ಮಾಸದ ಕೊನೆಯ ಸೋಮವಾರ ಅಂದರೆ ದಿನಾಂಕ ೧೪ ಡಿಸೆಂಬರ್ ೨೦೨೦ ಈ ಶುಭ ದಿನದಂದು ಸಂಜೆ ೪.೧೦ ಕ್ಕೆ ಮಂಗಳೂರು ಸೇವಾಕೇಂದ್ರಕ್ಕೆ ತುಮಕೂರಿನ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮನವರ ದಿವ್ಯ ಆಗಮನವಾಯಿತು. ಈ ವೇಳೆ ಶ್ರೀ ದೇವಿಯೊಂದಿಗೆ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ. ಲಕ್ಷ್ಮೀಶ, ಅರ್ಚಕರಾದ ಶ್ರೀ. ಸಿದ್ದೇಶ ಶಾಸ್ತ್ರಿ ಮತ್ತು ಭಕ್ತರಾದ ಶ್ರೀ. ಪವನಕುಮಾರ ಯಜಮಾನ ಇವರು ಉಪಸ್ಥಿತರಿದ್ದರು. ದೇವಿಯ ಆಗಮನದ ಸಮಯದಲ್ಲಿ ಕೊರೋನಾದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಪಾಲಿಸುತ್ತಾ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಗುರುಪ್ರಸಾದ ಗೌಡ ಇವರು ದೇವಿಗೆ ಪುಷ್ಪಹಾರವನ್ನು ಅರ್ಪಿಸಿ ಆರತಿ ಬೆಳಗಿ ಸೇವಾಕೇಂದ್ರದೊಳಗೆ ಸ್ವಾಗತಿಸಿದರು.
ಶ್ರೀ ದೇವಿಯನ್ನು ಸಭಾಗೃಹದ ವ್ಯಾಸಪೀಠದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಶ್ರೀ ದೇವಿಗೆ ಸನಾತನದ ಸಂತರಾದ ಪೂ. ವಿನಾಯಕ ಕರ್ವೆ ಹಾಗೂ ಪೂ. ರಮಾನಂದ ಗೌಡ ಇವರು ಬಿಲ್ವಾರ್ಚನೆ ಮಾಡಿ ಪೂಜೆಯನ್ನು ಸಲ್ಲಿಸಿದರು, ನಂತರ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶೇ. ೬೧ ಆಧ್ಯಾತ್ಮಿಕ ಮಟ್ಟದ ಶ್ರೀ. ಚಂದ್ರ ಮೊಗೇರ ಇವರು ಶ್ರೀ ದೇವಿಯೊಂದಿಗೆ ಬಂದ ಭಕ್ತರಿಗೆ ಸೇವಾಕೇಂದ್ರದ ದರ್ಶನ ಮಾಡಿಸಿದರು. ನಂತರ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮತ್ತು ಸನಾತನದ ದೈವೀ ಬಾಲಕರ ವಿಡಿಯೋವನ್ನು ತೋರಿಸಲಾಯಿತು.
೧. ಕೊರೋನಾದಿಂದ ಸಮಾಜದಲ್ಲಾದ ಬದಲಾವಣೆ
ಶ್ರೀ ದೇವಿಯ ಮಹಿಮೆಯನ್ನು ಹೇಳುತ್ತಾ, ಶ್ರೀ. ಪವನಕುಮಾರ ಯಜಮಾನ ಇವರು, ‘ಕೊರೋನಾದಿಂದಾಗಿ ಸಮಾಜದಲ್ಲಿ ಒಂದೆಡೆ ಕಷ್ಟ ಎಂದೆನಿಸಿದರೂ ಇನ್ನೊಂದೆಡೆ ಎಷ್ಟೋ ಅನ್ಯಾಯ ಅತ್ಯಾಚಾರಗಳು ಕಡಿಮೆಯಾಯಿತು, ಕುಟುಂಬ ಬಾಂಧವ್ಯ ಹೆಚ್ಚಾಯಿತು, ಸಾತ್ತ್ವಿಕ ಆಹಾರವನ್ನೇ ಸೇವನೆ ಪ್ರಾರಂಭವಾಯಿತು. ಅಂದರೆ ಸಮಾಜದಲ್ಲಿ ಅನ್ಯಾಯಗಳು, ಅಧರ್ಮಗಳು ಹೆಚ್ಚಾದಾಗ ಭಗವಂತನು ಯಾವುದಾದರೊಂದು ಮಾಧ್ಯಮದಿಂದ ತನ್ನ ಲೀಲೆಯನ್ನು ತೋರಿಸುತ್ತಾನೆ ಎಂದು ಹೇಳಿದರು.
೨. ಸೇವಾಕೇಂದ್ರದ ಎಲ್ಲ ಸಾಧಕರನ್ನು ಆಶೀರ್ವದಿಸಲು ಶ್ರೀ ದೇವಿಯ ಆಗಮನ
“ಶ್ರೀ ದೇವಿಯು ರಜತ ಮಹೋತ್ಸವದ ನಂತರ ಮೊದಲ ಬಾರಿಗೆ ಹೊರಗೆ ಸಂಚಾರಕ್ಕೆ ಹೊರಟು ಇಂದು ಸೇವಾಕೇಂದ್ರಕ್ಕೆ ಆಗಮಿಸಿದ್ದಾರೆ, ಸಾಮಾನ್ಯವಾಗಿ ಅಮ್ಮನವರನ್ನು ಭಕ್ತರು ದೇವಸ್ಥಾನಕ್ಕೆ ಬಂದು ದರ್ಶನ ಪಡೆಯುತ್ತಾರೆ, ಆದರೆ ಇಂದು ಸಾಧಕರಿಗಾಗಿ ಸ್ವತಃ ದೇವಿಯು ಸೇವಾಕೇಂದ್ರಕ್ಕೆ ಬಂದು ದರ್ಶನ ನೀಡುತ್ತಿದ್ದಾಳೆ, ಇದರ ಹಿಂದಿನ ಕಾರಣವೆಂದರೆ, ದೇವಸ್ಥಾನಕ್ಕೆ ಸಾಧಕರು ಬಂದರೆ ಕೇವಲ ಒಬ್ಬರು ಅಥವಾ ಇಬ್ಬರು ಮಾತ್ರ ಬರಬಹುದು. ಆದರೆ ದೇವಿಯೇ ಸೇವಾಕೇಂದ್ರಕ್ಕೆ ಬಂದರೆ ಸೇವಾಕೇಂದ್ರದ ಎಲ್ಲ ಸಾಧಕರಿಗೆ ದೇವಿಯ ದರ್ಶನದ ಲಾಭವಾಗುತ್ತದೆ ಮತ್ತು ದೇವಿಯ ಆಶೀರ್ವಾದ ಸಿಗುತ್ತದೆ, ಇದೇ ಉದ್ದೇಶದಿಂದ ದೇವಿಯು ಸೇವಾಕೇಂದ್ರಕ್ಕೆ ಆಗಮಿಸಿದ್ದಾಳೆ ಎಂದು ಶ್ರೀ. ಪವನಕುಮಾರ ಇವರು ತಿಳಿಸಿದರು.
೩. ಸನಾತನ ಸಂಸ್ಥೆ, ಸಂತರು ಹಾಗೂ ಸಾಧಕರ ಬಗ್ಗೆ ಗೌರವೋದ್ಗಾರ
“ಪರಾತ್ಪರ ಗುರು ಡಾ. ಆಠವಲೆಯವರೊಬ್ಬರಿಂದಲೇ ಆರಂಭವಾದ ಚಿಕ್ಕ ಸಂಸ್ಥೆಯು, ಇಂದು ಸಾವಿರಾರು ಸಾಧಕರಿಗೆ ಸಾಧನೆಯನ್ನು ಕಲಿಸುತ್ತಿದೆ. ಹಾಗೆಯೇ ನಿಮ್ಮ ಇಬ್ಬರು ಸದ್ಗುರುಗಳು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಹಾಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ) ಸರಸ್ವತಿ ಹಾಗೂ ಲಕ್ಷ್ಮೀಯೇ ಆಗಿದ್ದಾರೆ, ಸಾಧಕರೆಲ್ಲರೂ ಇಂದು ಧರ್ಮಪ್ರಚಾರ, ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯವನ್ನಿಟ್ಟು ದಿನನಿತ್ಯ ಪ್ರಯತ್ನ ಮಾಡುತ್ತಿದ್ದಾರೆ, ನಿಮ್ಮೆಲ್ಲರನ್ನೂ ನೋಡುವಾಗ ಛತ್ರಪತಿ ಶಿವಾಜಿ ಮಹಾರಾಜರನ್ನು ನೋಡಿದಂತಾಗುತ್ತದೆ, ನಾವು ದೂರವಾಣಿಯಲ್ಲಿ ಮಾತನಾಡುವಾಗ ಒಮ್ಮೆಯಾದರೂ ‘ಹಲೋ ಎಂಬ ಶಬ್ದವನ್ನು ಬಳಸುತ್ತೇವೆ. ಆದರೆ ಸನಾತನದ ಸಾಧಕರಿಗೆ ಯಾವಾಗ ಕರೆ ಮಾಡಿದರೂ ಅವರು ನಮ್ರವಾದ ಧ್ವನಿಯಲ್ಲಿ ‘ನಮಸ್ಕಾರ ಎಂದು ಹೇಳುತ್ತಾರೆ. ಯಾರಲ್ಲಿಯೂ ಭಿನ್ನತೆಗಳಿಲ್ಲ, ಎಲ್ಲರ ವರ್ತನೆಯೂ ಒಂದೇ ರೀತಿ ನಮ್ರತೆಯಿಂದಿರುತ್ತದೆ, ನಾವು ನಿಮ್ಮ ಆಚರಣೆಯನ್ನು ನೋಡಿ ತುಂಬಾ ಕಲಿಯುವುದಿದೆ, ಎಂದು ಶ್ರೀ. ಪವನಕುಮಾರ ಯಜಮಾನ ಇವರು ಹೇಳಿದರು.
೪. ಸೇವಾಕೇಂದ್ರದಲ್ಲಿ ಅರಿವಾದ ಸಾತ್ತ್ವಿಕತೆ ಹಾಗೂ ಚೈತನ್ಯ
ಸೇವಾಕೇಂದ್ರದ ಧ್ಯಾನಮಂದಿರದ ದೇವತೆಗಳ ಚಿತ್ರಗಳನ್ನು ನೋಡಿದಾಗ ‘ಇದರಲ್ಲಿ ಚೈತನ್ಯದ ಅರಿವಾಗುತ್ತದೆ, ಪೂಜೆಗೆ ಅರ್ಪಿಸಿರುವ ಹೂವುಗಳ ರಚನೆಯೂ ಆದರ್ಶ ಹಾಗೂ ಸಾತ್ತ್ವಿಕ ಸ್ಪಂದನಗಳಿಂದ ಕೂಡಿದೆ. ಸಾಧಕರ ವಸ್ತ್ರದಲ್ಲಿ ನನಗೆ ಸಾತ್ತ್ವಿಕ ತರಂಗಗಳ ಅರಿವಾಗುತ್ತದೆ, ಧ್ಯಾನಮಂದಿರದಲ್ಲಿ ನನಗೆ ಉಷ್ಣತೆಯ ಅನುಭವವಾಗುತ್ತಿದೆ. ಇದು ವಾತಾವರಣದಿಂದಲ್ಲ ಇಲ್ಲಿರುವ ದೇವತೆಗಳ ಚೈತನ್ಯದಿಂದ ಉಂಟಾಗಿದೆ. (ಧ್ಯಾನಮಂದಿರದಲ್ಲಿ ಶ್ರೀಕೃಷ್ಣನ ನಿಂತಿರುವ ಸಾತ್ತ್ವಿಕ ಚಿತ್ರವನ್ನು ನೋಡಿ) “ನಮ್ಮ ಬಳಿ ಗುರುಗಳ (ಪರಾತ್ಪರ ಗುರು ಡಾ. ಆಠವಲೆ) ನಿಂತಿರುವ ಒಂದು ಚಿತ್ರವಿದೆ, ಅದನ್ನು ನೋಡುವಾಗ ನನಗೆ ಅದರಲ್ಲಿ ಇದೇ ಶ್ರೀಕೃಷ್ಣನ ಚಿತ್ರ ಕಾಣಿಸುತ್ತಿತ್ತು, ಇದರ ಅರ್ಥ ಅಂದರೆ ಗುರುಗಳು ಮತ್ತು ಶ್ರೀಕೃಷ್ಣ ಬೇರೆಯಲ್ಲ ಅವರು ಒಂದೇ ಆಗಿದ್ದಾರೆ, ಗುರುಗಳ ಒಂದೊಂದು ಚಿತ್ರದಲ್ಲಿ ಬೇರೆ ಬೇರೆ ರೀತಿ ಹಾವಭಾವ ಕಾಣಿಸುತ್ತದೆ ಎಂದು ಶ್ರೀ. ಪವನಕುಮಾರ ಇವರು ಹೇಳಿದರು.
೫. ಸನಾತನ ನಿರ್ಮಿತ ಸಾತ್ತ್ವಿಕ ಗಣೇಶಮೂರ್ತಿ
ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಚಂದ್ರ ಮೊಗೇರ ಇವರು ಸಾತ್ತ್ವಿಕ ಗಣೇಶಮೂರ್ತಿಯ ಬಗ್ಗೆ ಮಾಹಿತಿ ಹೇಳಿದಾಗ, ಶ್ರೀ. ಪವನಕುಮಾರ ಇವರು ‘ನಾವು ಮೂರ್ತಿಕಾರರಿಂದ ಶಾಸ್ತ್ರೋಕ್ತ ಗಣೇಶಮೂರ್ತಿ ಮಾಡಿಸಿಕೊಳ್ಳುತ್ತೇವೆ. ಅದರ ಜೊತೆಗೆ ನಿಮ್ಮ ಸಾತ್ತ್ವಿಕ ಅಷ್ಟ ದೇವತೆಗಳ ಚಿತ್ರವನ್ನು ನಮಗೆ ಕೊಡಿ ಎಂದರು.
೪. ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಜೊತೆಗಿನ ಸಂಭಾಷಣೆ
೪ ಅ. ಧರ್ಮಪ್ರಸಾರ ಕಾರ್ಯ ಹೆಚ್ಚುತ್ತಿರುವುದು
ಶ್ರೀ. ಪವನ : ಲಾಕ್‌ಡೌನ್‌ನಿಂದ ನಿಮ್ಮ ಧರ್ಮಪ್ರಸಾರ ಕಾರ್ಯಕ್ಕೆ ತುಂಬಾ ಅಡಚಣೆ ಆಗಿರಬಹುದಲ್ಲ ?
ಪೂ. ರಮಾನಂದ ಗೌಡ : ಲಾಕ್‌ಡೌನ್ ಕಾಲಾವಧಿಯಲ್ಲಿ ನಮ್ಮ ಎಲ್ಲ ಧರ್ಮಪ್ರಸಾರ ಕಾರ್ಯವು ‘ಆನ್‌ಲೈನ್ ಮೂಲಕ ನಡೆಯುತ್ತಿದೆ, ಇದರಿಂದಾಗಿ ನಾವು ಕಡಿಮೆ ಕಾಲಾವಧಿಯಲ್ಲಿ ಮೊದಲಿಗಿಂತ ಹೆಚ್ಚು ಜನರವರೆಗೆ ತಲುಪಲು ಸಾಧ್ಯವಾಗುತ್ತಿದೆ ಮತ್ತು ಭಗವಂತನ ಕೃಪೆಯಿಂದ ನಮ್ಮ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈಗ ಕಾರ್ಯವು ತುಂಬಾ ಹೆಚ್ಚಾಗುತ್ತಿದೆ.
ಶ್ರೀ. ಪವನ : ಹೌದು ನಾವು ಸಹ ನಿಮ್ಮ ಆನ್‌ಲೈನ್ ಸತ್ಸಂಗವನ್ನು ನೋಡುತ್ತೇವೆ, ಇದರಿಂದ ಸಮಾಜದಲ್ಲಿ ಜನರಿಗೆ ಒಳ್ಳೆಯ ಮಾಹಿತಿ ಸಿಗುತ್ತಿದೆ. ಧರ್ಮಪ್ರಸಾರದ ಸಂದರ್ಭದಲ್ಲಿ ಹೀಗೆಯೇ ಒಂದು ಹೋದರೆ ಇನ್ನೊಂದು ಬಂದು ಹೆಚ್ಚಿನ ಲಾಭ ತರುತ್ತದೆ, ಇದನ್ನು ಕೇಳಿ ನಮಗೆ ತುಂಬಾ ಸಂತೋಷವಾಯಿತು, ಇದು ಪರಾತ್ಪರ ಗುರು ಡಾ. ಆಠವಲೆಯವರು ಬೆಳೆಸಿದ ವೃಕ್ಷವಾಗಿದೆ ಈಗ ಅದು ಫಲ ಕೊಟ್ಟಿದೆ. (ಎಲ್ಲ ಸಾಧಕರು ಮಾಸ್ಕ್ ಧರಿಸಿರುವುದನ್ನು ಕಂಡು) ನೀವು ಕೊರೋನಾದ ಸಂದರ್ಭದಲ್ಲಿ ಸರಕಾರವು ನೀಡಿದ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೀರಿ, ನಮ್ಮಿಂದಲೂ ಅದು ಪೂರ್ಣ ರೀತಿಯಲ್ಲಿ ಪಾಲನೆ ಆಗುತ್ತಿಲ್ಲ. ನಮ್ಮನ್ನು ಕ್ಷಮಿಸಿ ಎಂದು ತಿಳಿಸಿದರು.
೪ ಆ. ಸಾಧನೆಯ ಬಗ್ಗೆ ಸಂವಾದದ ಅಂಶಗಳು
ಶ್ರೀ. ಪವನಕುಮಾರ ಅವರು ಸೇವಾಕೇಂದ್ರದಲ್ಲಿರುವ ಸಾಧಕರನ್ನು ನೋಡಿ ಮತ್ತು ಪೂ. ರಮಾನಂದಣ್ಣನವರ ಪತ್ನಿ-ಮಕ್ಕಳ ಬಗ್ಗೆ ವಿಚಾರಿಸುತ್ತಾ ನೀವು ಹೇಗೆ ಸಾಧನೆಗೆ ಬಂದಿರಿ, ತಾವು ಎಷ್ಟು ವರ್ಷದಿಂದ ಸಾಧನೆಯಲ್ಲಿದ್ದೀರಿ, ನಾನು ಹೀಗೆ ಕೇಳಿದೆ ಎಂದು ತಪ್ಪು ತಿಳಿಯಬೇಡಿ ಎಂದು ಅನೌಪಚಾರಿಕವಾಗಿ ಮಾತನಾಡುತ್ತಾ ಕೇಳಿದರು.
ಪೂ. ರಮಾನಂದ ಗೌಡ : ನಾನು ೨೦ ವರ್ಷದಿಂದ ಸಾಧನೆ ಮಾಡುತ್ತಿದ್ದೇನೆ, ನಾನು ಮೊದಲು ವ್ಯವಹಾರ ಮಾಡುತ್ತಾ ಸಾಧನೆ ಮಾಡುತ್ತಿದ್ದೆ. ಒಂದು ದಿನ ಗುರುಗಳ ಭಾವಚಿತ್ರಕ್ಕೆ ಪ್ರಾರ್ಥನೆ ಮಾಡುತ್ತಿರುವಾಗ ಅದರಲ್ಲಿ ನಮ್ಮ ಕುಲದೇವರಾದ ಶ್ರೀವೆಂಕಟರಮಣ ದೇವರ ರೂಪ ಕಾಣಿಸಿತು ಮತ್ತು ಗುರುಗಳೇ ಶ್ರೀವೆಂಕಟರಮಣ ಆಗಿದ್ದಾರೆ ಎಂದು ಅನುಭೂತಿ ಬಂತು. ಅದರಿಂದ ನನ್ನ ಶ್ರದ್ಧೆ ಹೆಚ್ಚಾಯಿತು, ನನಗೆ ಸಾಧನೆಯಲ್ಲಿ ಇನ್ನೂ ಮುಂದೆ ಹೋಗಬೇಕು, ಗುರುಕಾರ್ಯ ಇನ್ನೂ ಹೆಚ್ಚು ಮಾಡಬೇಕೆಂಬ ವಿಚಾರಗಳು ಬರಲು ಆರಂಭವಾಯಿತು. ಹಾಗಾಗಿ ನಾನು ಪೂರ್ಣವೇಳೆ ಸಾಧನೆ ಮಾಡಲು ಸೇವಾಕೇಂದ್ರಕ್ಕೆ ಬಂದೆನು. ನನ್ನ ಜೀವನದಲ್ಲಿ ಕೂಡ ಅನೇಕ ರೀತಿಯ ಕಠಿಣ ಪ್ರಸಂಗಗಳು ಎದುರಾದವು. ಅದೆಲ್ಲವು ಗುರುಕೃಪೆಯಿಂದ ದೂರವಾಯಿತು. ಹೀಗೆ ಹೇಳುವಾಗ ಪೂ. ರಮಾನಂದ ಗೌಡ ಇವರಿಗೆ ಭಾವಜಾಗೃತಿಯಾಯಿತು.
ಶ್ರೀ. ಪವನ : ನಮಗೆ ನಿಮ್ಮ ಗುರುಗಳ ಬಗ್ಗೆ ಕೇಳಿದಷ್ಟು ಅವರನ್ನು ನೋಡುವ ಕಾತರತೆ ಹೆಚ್ಚಾಗುತ್ತಿದೆ. ಅವರು ಭವರೋಗ ರಕ್ಷಕರಾಗಿದ್ದಾರೆ, ಸಾಧಕರೆಲ್ಲರ ಕಷ್ಟವನ್ನು ಸ್ವತಃದ ಮೇಲೆ ತೆಗೆದುಕೊಳ್ಳುತ್ತಾರೆ ಎಂದು ನನಗೆ ಅನಿಸುತ್ತದೆ.
೪ ಇ. ಸಾಧಕರ ಬಗ್ಗೆ ವ್ಯಕ್ತಪಡಿಸಿದ ಶ್ಲಾಘನೆ
ಸೇವಾಕೇಂದ್ರದಲ್ಲಿ ತಮ್ಮ ನೌಕರಿ, ಶಿಕ್ಷಣವನ್ನು ಬಿಟ್ಟು ಪೂರ್ಣವೇಳೆ ಸೇವೆಗಾಗಿ ಬಂದ ಸಾಧಕರ ಬಗ್ಗೆ ಅವರು ಶ್ಲಾಘನೆಯನ್ನು ವ್ಯಕ್ತ ಪಡಿಸುತ್ತಾ “ನೀವು ಮಾಡಿರುವ ತ್ಯಾಗವು ಸುಲಭದ್ದಲ್ಲ ಅದಕ್ಕಾಗಿ ಅನೇಕ ಜನ್ಮಗಳ ಸಾಧನೆಯೂ ಇರಬೇಕು ಎಂದರು ಮತ್ತು “ನಾವು ಇಲ್ಲಿಗೆ ಬಂದು ಎಷ್ಟು ಸಮಯ ಕಳೆಯಿತು ಎಂದು ಅರಿವೇ ಆಗಲಿಲ್ಲ ಎಂದು ತಿಳಿಸಿದರು.
೪ ಈ. ದೋಷ-ಅಹಂ ನಿರ್ಮೂಲನೆಗಾಗಿ ಮಾಡುವ ಪ್ರಯತ್ನ
ಪೂ. ರಮಾನಂದ ಗೌಡ : ಸೇವಾಕೇಂದ್ರದಲ್ಲಿ ಸಾಧಕರು ತಮ್ಮಿಂದಾದ ತಪ್ಪುಗಳನ್ನು ಬರೆಯುತ್ತಿರುವ ಫಲಕದ ಬಗ್ಗೆ ಹೇಳುವಾಗ “ಸೇವಾಕೇಂದ್ರದಲ್ಲಿ ಈ ರೀತಿ ನಾವು ಪ್ರತಿದಿನ ನಮ್ಮಿಂದಾಗುವ ತಪ್ಪುಗಳನ್ನು ಬರೆಯುತ್ತೇವೆ. ನಮ್ಮಲ್ಲಿರುವ ಷಡ್ವೈರಿಗಳಿಂದಾಗಿ, ನಮ್ಮ ದೋಷ ಅಹಂಗಳಿಂದ ಬೇರೆ ಬೇರೆ ಕೃತಿಗಳನ್ನು ಮಾಡುವಾಗ ನಮ್ಮಿಂದ ತಪ್ಪುಗಳಾಗುತ್ತವೆ, ಇದರಿಂದಾಗಿ ನಾವು ಮಾಡಿದ ಸಾಧನೆಯು ಖರ್ಚಾಗುತ್ತದೆ ಈ ತಪ್ಪುಗಳಿಂದ ಉಂಟಾದ ಪಾಪಕರ್ಮಗಳು ಕ್ಷಾಲನೆಯಾಗಬೇಕು ಎಂಬುದಕ್ಕಾಗಿ ತಮ್ಮಿಂದಾದ ತಪ್ಪುಗಳನ್ನು ಸಾಧಕರು ಫಲಕದಲ್ಲಿ ಬರೆಯುತ್ತಾರೆ, ಸಾಧಕರೆದುರು ಕ್ಷಮಾಯಾಚನೆ ಮಾಡುತ್ತಾರೆ, ಫಲಕದಲ್ಲಿ ಈ ರೀತಿ ತಪ್ಪು ಬರೆಯುವುದರಿಂದ ಅದನ್ನು ಇತರರು ಓದುತ್ತಾರೆ. ಇದರಿಂದಾಗಿ ನಮ್ಮ ಅಹಂ ನಾಶವಾಗಲು ಸಹಾಯವಾಗುತ್ತದೆ ಮತ್ತು ಇತರರಿಂದ ಅಂತಹ ತಪ್ಪುಗಳು ಆಗದಂತೆ ಇತರರಿಗೂ ಕಲಿಯಲು ಸಿಗುತ್ತದೆ. ಈ ರೀತಿ ಪ್ರಯತ್ನಿಸುವುದರಿಂದ ನಮ್ಮ ದೋಷ ಅಹಂಭಾವಗಳು ಕಡಿಮೆಯಾಗಿ ಸಾಧನೆಯಲ್ಲಿ ಮುಂದೆ ಹೋಗಲು ಸಹಾಯವಾಗುತ್ತದೆ.
ಶ್ರೀ. ಪವನ : ನಿಮ್ಮಂತೆ ಈ ರೀತಿ ತಪ್ಪುಗಳನ್ನು ಬರೆದು ಎಲ್ಲರೆದುರು ಹೇಳಿ ಕ್ಷಮಾಯಾಚನೆ ಮಾಡುವುದು ಇದು ಸಾಮಾನ್ಯ ವಿಷಯವಲ್ಲ. ಇದು ‘ದಂಡಂ ದಶಗುಣಂ ಇದ್ದಂತೆ, ನಿಮ್ಮಲ್ಲಿ ನೀಡುವುದು ಜ್ಞಾನದ ಶಿಕ್ಷೆಯಾಗಿದೆ, ಈ ರೀತಿ ಮಾಡಲು ಬೇರೆಯವರಿಂದ ಸಾಧ್ಯವಿಲ್ಲ. (ಸಾಧಕರನ್ನುದ್ದೇಶಿಸಿ) ನಿಮಗೆ ಎಲ್ಲವೂ ತಿಳಿದಿದೆ, ವಿದ್ಯಾವಂತರಾಗಿದ್ದೀರಿ, ಆದರೂ ನಿಮ್ಮಲ್ಲಿ ಗರ್ವವಿಲ್ಲ, ಇದೆಲ್ಲಾ ಹೇಗೆ ಸಾಧ್ಯ ? ಅಂದರೆ ಇದು ಕೇವಲ ನಿಮ್ಮ ಗುರುಗಳಾದ ಪರಾತ್ಪರ ಗುರು ಡಾ. ಆಠವಲೆಯವರ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಯಿಂದಲೇ ಸಾಧ್ಯ, ಎಲ್ಲ ಸಾಧಕರು ಒಂದೇ ರೀತಿ ಇದ್ದಾರೆ, ಹೀಗೆ ತ್ಯಾಗ ಮಾಡಿ ಬರಲು ಎಲ್ಲರಿಂದಲೂ ಸಾಧ್ಯವಿಲ್ಲ.
೪ ಉ. ಗ್ರಂಥ ಹಾಗೂ ಸಾತ್ತ್ವಿಕ ಉತ್ಪಾದನೆಗಳು
ಪೂ. ರಮಾನಂದ ಗೌಡ : (ಸಂಸ್ಥೆಯ ಗ್ರಂಥಗಳ ಪರಿಚಯ ಮಾಡುತ್ತಾ) ಸಂಸ್ಥೆಯಲ್ಲಿ ಸುಮಾರು ೩೦ ಸಾಧಕರಿಗೆ ಗುರುಗಳ ಕೃಪೆಯಿಂದ ಮತ್ತು ಸಾಧಕರ ತೀವ್ರ ಇಚ್ಛಾಶಕ್ತಿಯಿಂದ ಸೂಕ್ಷ್ಮದಿಂದ ಜ್ಞಾನ ಸಿಗುತ್ತದೆ. ಅವರಿಗೆ ಬೇರೆ ಬೇರೆ ವಿಷಯಗಳ ಬಗ್ಗೆ ಜ್ಞಾನ ಪ್ರಾಪ್ತಿಯಾಗುತ್ತದೆ. ಈ ಎಲ್ಲಾ ಜ್ಞಾನವು ಸಮಾಜಕ್ಕೆ ತಲುಪಬೇಕು ಮತ್ತು ಅದರ ಲಾಭ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ಆ ಜ್ಞಾನವನ್ನು ಗ್ರಂಥಗಳ ಮೂಲಕ ಸಮಾಜಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸದ್ಯ ಇಲ್ಲಿಯವರೆಗೆ ಸಂಸ್ಥೆಯಿಂದ ಬೇರೆ ಬೇರೆ ವಿಷಯಗಳಲ್ಲಿ ೧೭ ಭಾಷೆಗಳಲ್ಲಿ ಒಟ್ಟು ೩೨೯ ಗ್ರಂಥಗಳನ್ನು ರಚಿಸಲಾಗಿದೆ. ಇನ್ನೂ ೮೦೦೦ ಗ್ರಂಥಗಳನ್ನು ರಚಿಸುವಷ್ಟು ಜ್ಞಾನ ಪ್ರಾಪ್ತಿಯಾಗಿದೆ.
ಶ್ರೀ. ಪವನ : ಸಂಸ್ಥೆಯ ಗ್ರಂಥಗಳ ನಿರ್ಮಿತಿಯಿಂದ ಇಂದು ಜನರಿಗೆ ಹಿಂದೂ ಧರ್ಮದ ಜ್ಞಾನವು ತಲುಪುತ್ತಿದೆ, ನಿಮ್ಮ ಕಾರ್ಯವು ಅದ್ಭುತವಾಗಿದೆ. (ಸಂಸ್ಥೆಯ ಸಾತ್ತ್ವಿಕ ಉತ್ಪಾದನೆಗಳನ್ನು ನೋಡುತ್ತಾ) ಈ ರೀತಿ ಉತ್ಪಾದನೆಗಳನ್ನು ಸಾತ್ತ್ವಿಕ ಉತ್ಪಾದನೆಗಳ ಬಗ್ಗೆ (ಪರಾತ್ಪರ ಗುರು) ಡಾ. ಆಠವಲೆಯವರಿಗೆ ಹೇಗೆ ವಿಚಾರ ಬಂದಿತು ?
ಪೂ. ರಮಾನಂದ ಗೌಡ : ಇಂದು ಸಮಾಜದಲ್ಲಿ ವ್ಯಾವಹಾರಿಕ ಉದ್ದೇಶದಿಂದ ಹೆಚ್ಚಿನ ವಸ್ತುಗಳನ್ನು ತಯಾರಿ ಮಾಡುತ್ತಾರೆ. ಅದರಲ್ಲಿ ಕೇವಲ ಆರ್ಥಿಕ ಲಾಭ ಮತ್ತು ಸ್ವಾರ್ಥ ಇರುವುದರಿಂದ ವಸ್ತುಗಳ ಸಾತ್ತ್ವಿಕತೆಯ ಬಗ್ಗೆ ವಿಚಾರ ಇರುವುದಿಲ್ಲ. ಆದರೆ ಇಂದು ಸಮಾಜಕ್ಕೆ ಸಾತ್ತ್ವಿಕ ವಸ್ತುಗಳು ಸಿಗಬೇಕು ಅದನ್ನು ಉಪಯೋಗಿಸುವ ವ್ಯಕ್ತಿಗೆ, ವಾಸ್ತುವಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭವಾಗಬೇಕು ಮತ್ತು ಎಲ್ಲರ ಸಾಧನೆಯಾಗಬೇಕು ಎಂಬ ಉದ್ದೇಶದಿಂದ ಗುರುಗಳು ಸಾತ್ತ್ವಿಕ ಉತ್ಪಾದನೆಗಳನ್ನು ತಯಾರಿಸಲು ಮಾರ್ಗದರ್ಶನ ಮಾಡುತ್ತಾರೆ.
೫. ಸೇವಾಕೇಂದ್ರದಲ್ಲಿ ಬೇರೆ ಲೋಕದ ಅನುಭವವಾಗುವುದು
ಶ್ರೀ. ಪವನ : ಸೇವಾಕೇಂದ್ರದ ಪ್ರತಿಯೊಂದು ವ್ಯವಸ್ಥೆಯನ್ನು ನೋಡಿದರೆ ಇದು ಬೇರೆಯೇ ಒಂದು ಲೋಕದ ಅನುಭವವನ್ನು ಕೊಡುತ್ತದೆ. ಆದರೆ ಇಂದು ಸಮಾಜದಲ್ಲಿ ಇದರ ಬಗ್ಗೆ ಕಲ್ಪನೆಯೇ ಇಲ್ಲ. ಗುರುಗಳು ಎಲ್ಲೆಡೆ ಸಾತ್ತ್ವಿಕತೆ ಹರಡಬೇಕು ಎಂಬ ವಿಚಾರವನ್ನಿಟ್ಟು ಪ್ರತಿಯೊಂದು ವಿಧದಲ್ಲಿ ಅಭ್ಯಾಸ ಮಾಡಿದ್ದಾರೆ, ಸಂಸ್ಥೆಯ ಇನ್ನೊಂದು ವಿಶೇಷತೆ ಎಂದರೆ ಸಂಸ್ಥೆಯು ಇಲ್ಲಿಯವರೆಗೆ ಯಾವುದೇ ರಾಜಕಾರಣಕ್ಕೆ ಜೋಡಣೆಯಾಗಿಲ್ಲ, ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಸ್ಥೆಯನ್ನು ಪರಿಶುದ್ಧವಾಗಿರಿಸಿದ್ದಾರೆ.ಆದುದರಿಂದಲೇ ಸಂಸ್ಥೆಯು ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು. ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪದಂತೆ ೨೦೨೩ ಕ್ಕೆ ಹಿಂದೂ ರಾಷ್ಟ್ರ ಸ್ಥಾಪನೆಯು ಆಗಲಿಕ್ಕೇ ಇದೆ. ನಾವು ಸಹ ಹಿಂದೂ ರಾಷ್ಟ್ರದ ಉಧ್ಘಾಟನೆಗಾಗಿ ಕಾಯುತ್ತಿದ್ದೇವೆ.
೬. ಸನಾತನ ಪ್ರಭಾತದ ಬಗ್ಗೆ ಶ್ಲಾಘನೆ
ಸನಾತನ ಪ್ರಭಾತದ ಬಗ್ಗೆ ಪರಿಚಯಿಸಿದಾಗ ಈ ಪತ್ರಿಕೆಯನ್ನು ಕೈಯಲ್ಲಿ ಹಿಡಿದಾಗಲೇ ಕಂಪನದ ಅನುಭವವಾಗುತ್ತದೆ, ಪತ್ರಿಕೆಯಲ್ಲಿ ಇಂತಹದೇ ಬಣ್ಣ ಉಪಯೋಗ ಮಾಡಬೇಕು ಎಂದು ನಿಮಗೆ ಹೇಗೆ ಗೊತ್ತಾಗುತ್ತದೆ ? ನೀವು ಪತ್ರಿಕೆಯಲ್ಲಿ ಉತ್ತಮ ಶಬ್ದಗಳನ್ನು ಬಳಸುತ್ತೀರಿ, ಅದೆಲ್ಲ ನಿಮಗೆ ಹೇಗೆ ಹೊಳೆಯುತ್ತದೆ ಎಂಬ ಜಿಜ್ಞಾಸೆಯಿಂದ ಪ್ರಶ್ನೆಯನ್ನು ಕೇಳಿದರು. ಆಗ ಸನಾತನ ಪ್ರಭಾತ ಸಂಪಾದಕೀಯ ವಿಭಾಗದ ಸಾಧಕರಾದ ಶೇ. ೬೧ ಮಟ್ಟದ ಶ್ರೀ. ಪ್ರಶಾಂತ ಹರಿಹರ ಇವರು, ‘ನಮಗೆ ಗುರುಗಳು ಸ್ಪಂದನಶಾಸ್ತ್ರಕ್ಕನುಸಾರ ಯಾವ ಬಣ್ಣಗಳನ್ನು ಉಪಯೋಗಿಸಬೇಕು, ಅಕ್ಷರ ಹೇಗಿರಬೇಕು ಹೀಗೆ ಪ್ರತಿಯೊಂದನ್ನು ಸಹ ಸ್ಪಂದನ ಶಾಸ್ತ್ರಕ್ಕನುಸಾರವೇ ಮಾಡಲು ಕಲಿಸಿದ್ದಾರೆ. ಇವೆಲ್ಲವೂ ಗುರುಗಳ ಕೃಪೆಯಿಂದಲೇ ಸಾಧ್ಯವಾಗುತ್ತದೆ ಎಂದಾಗ ಅವರು ತುಂಬಾ ಆನಂದ ವ್ಯಕ್ತಪಡಿಸಿದರು. ಸನಾತನ ಪ್ರಭಾತದ ಕಾರ್ಯವನ್ನು ಶ್ಲಾಘಿಸಿ ಅವರು ಮುಂದಿನ ವರ್ಷ ದೇವಿಯ ಉತ್ಸವದ ದಿನದಂದು ಶ್ರೀ. ಪ್ರಶಾಂತ ಹರಿಹರ ಇವರಿಗೆ ‘ಸರ್ವಶ್ರೀ ವಿದ್ಯಾಭೂಷಣ ಪ್ರಶಸ್ತಿ ನೀಡುತ್ತೇವೆ ಎಂದು ಘೋಷಣೆ ಮಾಡಿದರು.
೭. ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವೇ ಆಗಿದ್ದಾರೆ
ಸೇವಾಕೇಂದ್ರದಲ್ಲಿ ಈ ರೀತಿಯ ಆದರ್ಶ ವ್ಯವಸ್ಥೆ ಮಾಡಲು ಬೇರೆ ಯಾರಿಂದಲೂ ಸಾಧ್ಯವಿಲ್ಲ, ನಿಜವಾಗಿಯೂ ಪರಾತ್ಪರ ಗುರು ಡಾ. ಆಠವಲೆಯವರು ಸಾಕ್ಷಾತ್ ಶ್ರೀ ವಿಷ್ಣುವೇ ಆಗಿದ್ದಾರೆ. ಅವರು ಮಾಡಿರುವ ಇನ್ನೊಂದು ಮಹತ್ವದ ಕಾರ್ಯವೆಂದರೆ ಅವರು ಸನಾತನ ಸಂಸ್ಥೆಯ ಮೂಲಕ ಅನ್ನ ದಾಸೋಹದಲ್ಲಿ ಯಾವುದೇ ಜಾತಿ ಭೇದ ಮಾಡಿಲ್ಲ, ಸಂಸ್ಥೆಯ ಕಾರ್ಯವು ಉತ್ತರೋತ್ತರವಾಗಿ ಬೆಳೆಯಲಿ ಇದೇ ದೇವಿಯ ಚರಣದಲ್ಲಿ ಪ್ರಾರ್ಥನೆ ಎಂದರು.
೮. ವೈಶಿಷ್ಟ್ಯಪೂರ್ಣ ಅಂಶಗಳು
ಶ್ರೀ. ಪವನ ಹಾಗೂ ಇತರ ಭಕ್ತರು ದೇವಿಯೊಂದಿಗೆ ಸೇವಾಕೇಂದ್ರಕ್ಕೆ ಬರುವಾಗ ದಾರಿಯಲ್ಲಿ ಅವರಿಗೆ ಎರಡು ಹಸುಗಳು ಸಿಕ್ಕಿದವು. ಮತ್ತು ಗರುಡ ಕಾಣಿಸಿತು. ನೇರವಾಗಿ ಹೋಗುತ್ತಿದ್ದ ನಾವು ಅದನ್ನು ಗಮನಿಸಿ ಅದನ್ನು ಹಿಂಬಾಲಿಸಿದಾಗ ಅದು ಸೇವಾಕೇಂದ್ರದ ದಾರಿಗೆ ಕರೆ ತಂದಿತು ಎಂದು ಹೇಳಿದರು.
ದೇವಿಯ ಮೂರ್ತಿಯನ್ನು ಸೇವಾಕೇಂದ್ರದೊಳಗೆ ಕರೆದೊಯ್ಯುವಾಗ ದೇವಿಯ ಮುಡಿಯಿಂದ ಹೂವೊಂದು ಕೆಳಗೆ ಬಿತ್ತು. ಇದು ಶುಭಸಂಕೇತವೆಂದು ಹೇಳಿದರು.
ಶ್ರೀ. ಪವನ ಇವರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಕಲ್ಪ ಮಾಡಿ ಪ್ರಾರ್ಥನೆ ಮಾಡಿದಾಗ ದೇವಿಯ ಕಿರೀಟದ ಮೇಲಿದ್ದ ನಾಗನ ಹೆಡೆಯಲ್ಲಿನ ಒಂದು ಮಣಿ ಅಲುಗಾಡಲು ಆರಂಭಿಸಿತು ಮತ್ತು ಅದೇ ಸಮಯದಲ್ಲಿ ದೇವಿಯ ಕಿರೀಟದಿಂದ ಹೂವೊಂದು ಪ್ರಸಾದ ರೂಪದಲ್ಲಿ ಕೆಳಗೆ ಬಿತ್ತು.
೯. ಶ್ರೀದೇವಿಯು ಸೇವಾಕೇಂದ್ರಕ್ಕೆ ಬಂದಾಗ ಸಾಧಕರಿಗೆ ಬಂದ ಅನುಭೂತಿಗಳು
೯ ಅ. ಸನಾತನದ ಬಾಲ ಸಂತರಾದ ಪೂ. ಭಾರ್ಗವರಾಮ ಬೆಳಗ್ಗೆ ಏಳುವಾಗ ನಾನು ಧೂಪ ಹಾಕುತ್ತಿದ್ದೆ. ಅದನ್ನು ನೋಡಿ ಅವರು ದೇವಿ ಬರುತ್ತಿದ್ದಾಳೆ ಮತ್ತು ಹೂವಿನ ಮೇಲೆ ಕುಳಿತು ಕೊಳ್ಳುತ್ತಿದ್ದಾಳೆ. ಅವಳಿಗೆ ನಮಸ್ಕಾರ ಮಾಡೋಣ ಎಂದು ಹೇಳಿದರು. ಇದರಿಂದ ಪೂ. ಭಾರ್ಗವರಾಮರಿಗೆ ಮೊದಲೇ ದೇವಿ ತತ್ತ್ವದ ಅನುಭವವಾಗುತ್ತಿತ್ತು ಎಂದೆನಿಸಿತು. – ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ)
೯ ಆ. ದೇವಿಯು ಸೇವಾಕೇಂದ್ರಕ್ಕೆ ಬರುವ ಹಿಂದಿನ ದಿನ ಸೇವಾಕೇಂದ್ರದ ಸ್ವಚ್ಛತೆ ಸೇವೆ ಮಾಡುವಾಗ ನನಗೆ ಶಾರೀರಿಕ ತೊಂದರೆ ಇದ್ದರೂ ನೋವಿನ ಅರಿವೇ ಆಗುತ್ತಿರಲಿಲ್ಲ. ಗುರುಗಳೇ ನನ್ನಿಂದ ಸ್ವಚ್ಛತೆ ಮಾಡಿಸುತ್ತಿದ್ದಾರೆ ಹೀಗೆ ಅರಿವಾಗುತ್ತಿತ್ತು. ಶ್ರೀ ದೇವಿ ಆಗಮನದ ಮುನ್ನ ಸಾಕ್ಷಾತ ಗುರುಗಳೇ ಅವರೊಂದಿಗೆ ಬರುತ್ತಿದ್ದಾರೆ ಎಂದು ಅರಿವಾಗುತ್ತಿತ್ತು. ಸಭಾಗೃಹದಲ್ಲಿ ಸಂತರು ಕುಳಿತಿರುವುದು ನೋಡುವಾಗ ಅವರೊಟ್ಟಿಗೆ ಗುರುಗಳೇ ಕುಳಿತಿದ್ದಾರೆ ಅನಿಸುತ್ತಿತ್ತು.
೯ ಇ. ಪೂ. ರಮಾನಂದಣ್ಣನವರು ಶ್ರೀ ದೇವಿಗೆ ಬಿಲ್ವವನ್ನು ಅರ್ಪಿಸುವಾಗ ಅವರು ಸಾಕ್ಷಾತ್ ಗುರುಗಳ ಚರಣಗಳಿಗೆ ಅರ್ಪಿಸುತ್ತಿದ್ದಾರೆ ಎಂದು ಅರಿವಾಗುತ್ತಿತ್ತು. ದೀಪದುರ್ಗೆಯ ಪೂಜೆ ನಡೆಯುವಾಗ ದೇವಿಯು ಸಾಧಕರಾದ ನಮ್ಮೆಲ್ಲರಿಗೆ ಶಕ್ತಿ ನೀಡುತ್ತಿದ್ದಾಳೆ ಅಂದು ಅನಿಸುತ್ತಿತ್ತು. – ಶ್ರೀ. ವಿಜಯ ಹುಳಿಪಲ್ಲೇದ
೯ ಈ. ದೇವಿಯ ಬಗ್ಗೆ ವರದಿ ಸೇವೆ ಮಾಡುವಾಗ ಇದು ನಮ್ಮಿಂದ ಸಾಧ್ಯವಿಲ್ಲ ನೀವೇ ಮಾಡಿಸಿಕೊಳ್ಳಿ ಎಂದು ಶರಣಾಗತಿಯ ಅನುಭವ ಆಗುತ್ತಿತ್ತು ಮತ್ತು ಒಮ್ಮೊಮ್ಮೆ ನನಗೆ ಗೊತ್ತಿರದ ಶಬ್ದಗಳು ಮನಸ್ಸಿಗೆ ಬರುವಾಗ ಗುರುಗಳೇ ಈ ವಿಚಾರ ಕೊಡುತ್ತಿದ್ದಾರೆ ಎಂದು ಅನಿಸುತ್ತಿತ್ತು ಮತ್ತು ಸೇವೆ ಮಾಡುತ್ತಿದ್ದ ಗಣಕಯಂತ್ರದಲ್ಲಿ ಗುರುಗಳ ಭಾವಚಿತ್ರ ಕಾಣಿಸುತ್ತಿತ್ತು. – ಶ್ರೀ. ಸುಮನ ಹುರುಕಡ್ಲೆ
೯ ಉ. ದೇವಿಯು ಬಂದಾಗ ನನಗೆ ಅನಾರೋಗ್ಯದಿಂದಾಗಿ ದೇವಿಯ ಪೂಜೆಯಿರುವಲ್ಲಿ ಹೋಗಲು ಆಗಲಿಲ್ಲ. ಆದರೆ ದೇವಿಗೆ ಶರಣಾಗತಿ ಯಿಂದ ಪ್ರಾರ್ಥನೆಯಾಗುತ್ತಿತ್ತು. ಆಗ ಓರ್ವ ಸಾಧಕರು ದೇವಿಗಾಗಿ ನೈವೇದ್ಯವನ್ನು ಪೂಜೆಯ ಸ್ಥಳಕ್ಕೆ ತೆಗೆದುಕೊಂಡು ಹೋಗಲು ಹೇಳಿದರು. ಆಗ ದೇವಿಯೇ ಈ ಸೇವೆ ನೀಡಿದರು ಎಂದು ಕೃತಜ್ಞತೆ ಅನಿಸಿತು.
೯ ಊ. ದೇವಿ ಬರುವ ಹಿಂದಿನ ದಿನ ಮಧ್ಯೆ ಮಧ್ಯೆ ದೇವಿಯ ನಾಮಸ್ಮರಣೆಯಾಗುತ್ತಿತ್ತು. – ಶ್ರೀ. ಪ್ರಶಾಂತ ಹರಿಹರ
೯ ಎ. ಸೇವಾಕೇಂದ್ರದ ಸಾಧಕರಿಗೆ ಬಂದ ಅನುಭೂತಿ : ಸೇವಾಕೇಂದ್ರಕ್ಕೆ ಶ್ರೀ ದೇವಿಯು ಆಗಮನವಾಗುವಾಗಲೇ ಎಲ್ಲ ಸಾಧಕರಿಗೆ ಭಾವಜಾಗೃತಿಯಾಗುತ್ತಿತ್ತು ಹಾಗೂ ಆರತಿಯ ಸಮಯದಲ್ಲೂ ಎಲ್ಲ ಸಾಧಕರಿಗೆ ಪ್ರತ್ಯಕ್ಷ ದೇವಿ ಬಂದಿದ್ದಾಳೆ ಎಂದೆನಿಸಿ ಮೈ ರೋಮಾಂಚನವಾಗುತ್ತಿತ್ತು.
೯ ಏ. ಈ ಮೇಲಿನ ವರದಿಯನ್ನು ಮರಾಠಿ ಭಾಷೆಗೆ ಅನುವಾದ ಮಾಡುವಾಗ ದೇವಿಯನ್ನು ನಾನು ಪ್ರತ್ಯಕ್ಷ ಅನುಭವಿಸಿದೆನು. ಬರವಣಿಗೆಯ ಪ್ರತಿಯೊಂದು ಶಬ್ದದಲ್ಲಿ ಭಾವದ ಅರಿವಾಯಿತು. ನನ್ನ ಆರೋಗ್ಯ ತುಂಬ ಹದಗೆಟ್ಟಿರುವಾಗ ಪ್ರತ್ಯಕ್ಷ ದೇವಿಯೇ ಶಕ್ತಿ ನೀಡಿ ಈ ಸೇವೆ ಮಾಡಿಸಿಕೊಂಡರು. ಭಗವಂತನೇ ಹೇಗೆ ಕೃತಜ್ಞತೆ ಅರ್ಪಿಸಲಿ ? ನಾನು ಅಸಮರ್ಥಳಿದ್ದೇನೆ. ಈ ಅನುಭೂತಿ ನೀಡಿದ್ದಕ್ಕಾಗಿ ದೇವಿಯ, ಗುರುದೇವರ, ಸಂತರ ಚರಣಗಳಲ್ಲಿ ಅನಂತಕೋಟಿ ಕೃತಜ್ಞತೆಗಳು. – ಸೌ. ಮಾಧುರಿ ಇನಾಮದಾರ, ಬೆಳಗಾವಿ.