ನಾನು ರಾಷ್ಟ್ರಪತಿಯಾದ ನಂತರ ಕಾಂಗ್ರೆಸ್ ರಾಜಕೀಯ ದಿಕ್ಕನ್ನು ಕಳೆದುಕೊಂಡಿತು ! – ಪ್ರಣಬ್ ಮುಖರ್ಜಿ ಅವರ ಪುಸ್ತಕದಲ್ಲಿ ಹೇಳಿಕೆ

  • ಕಾಂಗ್ರೆಸ್ಸಿನೊಳಗಿನ ಆಂತರಿಕ ಕಲಹ ಈಗ ನಿಧಾನವಾಗಿ ಹೊರಬರುತ್ತಿದೆ. ತನ್ನದೇ ಕಾರ್ಯಕರ್ತರು ಮತ್ತು ಮುಖಂಡರಿಗೆ ದಿಕ್ಕು ನೀಡಲು ಸಾಧ್ಯವಾಗದ ಪಕ್ಷವು ಜನರಿಗೆ ಏನು ದಿಕ್ಕು ನೀಡುತ್ತದೆ ? 
  • ಕಾಂಗ್ರೆಸ್‌ನ ಮನೆತನದ ಬಗ್ಗೆ ಮುಖರ್ಜಿಯವರು ಮೊದಲೇ ಏಕೆ ಬಹಿರಂಗಪಡಿಸಲಿಲ್ಲ ? ಪಕ್ಷದ ಅವನತಿಗೆ ಗಾಂಧಿ ಮನೆತನವು ಕಾರಣವಾದಂತೆಯೇ, ಈ ಮನೆತನದ ಓಲೈಕೆ ಮಾಡಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಾರಣರಾಗಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನವ ದೆಹಲಿ – ನಾನು ೨೦೦೪ ರಲ್ಲಿ ಪ್ರಧಾನಿಯಾಗಿದ್ದರೆ, ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸುತ್ತಿರಲಿಲ್ಲ ಎಂದು ನನ್ನ ಪಕ್ಷದ ಕೆಲವು ಸದಸ್ಯರು ಅಭಿಪ್ರಾಯಪಟ್ಟರು; ಆದರೆ ನಾನು ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ. ನಾನು ರಾಷ್ಟ್ರಪತಿಯಾದ ನಂತರ ಪಕ್ಷದ ನಾಯಕತ್ವವು ತನ್ನ ರಾಜಕೀಯ ದಿಕ್ಕನ್ನು ಕಳೆದುಕೊಂಡಿತು. ಪಕ್ಷದ ಸಮಸ್ಯೆಗಳನ್ನು ನಿಭಾಯಿಸಲು ಸೋನಿಯಾ ಗಾಂಧಿ ಅವರಿಗೆ ಸಾಧ್ಯವಾಗಲಿಲ್ಲ, ಹಾಗೂ ಡಾ. ಮನಮೋಹನ್ ಸಿಂಗ್ ಅವರು ಸಂಸತ್ತಿಗೆ ಹೆಚ್ಚು ಸಮಯ ಗೈರುಹಾಜರಾಗಿದ್ದು ಸಂಸದರೊಂದಿಗಿನ ಅವರ ವೈಯಕ್ತಿಕ ಸಂಬಂಧ ಹದಗೆಟ್ಟಿತು, ಎಂದು ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಅವರು ತಮ್ಮ ‘ದಿ ಪ್ರೆಸಿಡೆನ್ಶಿಯಲ್ ಇಯರ್ಸ್’ ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಮುಖರ್ಜಿ ಅವರು ತೀರಿ ಹೋಗುವ ಮುನ್ನ ಬರೆದಿದ್ದ ಈ ಪುಸ್ತಕವು ಮುಂದಿನ ತಿಂಗಳು ಪ್ರಕಾಶನವಾಗಲಿದೆ. ಈ ಪುಸ್ತಕದ ಆಯ್ದ ಭಾಗಗಳು ಇದೀಗ ಹೊರಬಂದಿವೆ. ಈ ಪುಸ್ತಕದಲ್ಲಿ ಪ್ರಣಬ್ ಮುಖರ್ಜಿ ಅವರ ಬಂಗಾಳದ ಹಳ್ಳಿಯೊಂದರ ಬಾಲ್ಯದಿಂದ ಅಧ್ಯಕ್ಷ ಸ್ಥಾನಕ್ಕೆ ಪ್ರಯಾಣವನ್ನು ವಿವರಿಸಿದ್ದಾರೆ.

ಈ ಪುಸ್ತಕದಲ್ಲಿ ಮುಖರ್ಜಿಯವರು, ‘ಪ್ರಧಾನ ಮಂತ್ರಿಗೆ ಆಡಳಿತ ನಡೆಸುವ ನೈತಿಕ ಅಧಿಕಾರವಿದೆ ಎಂದು ನಾನು ನಂಬುತ್ತೇನೆ’ ಎಂದು ಹೇಳಿದ್ದಾರೆ. ದೇಶದ ಇಡೀ ಸರಕಾರದ ವ್ಯವಸ್ಥೆಯು ಪ್ರಧಾನಿ ಮತ್ತು ಅವರ ಆಡಳಿತದ ಕೆಲಸದಲ್ಲಿ ಪ್ರತಿಫಲಿಸುತ್ತದೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಮೈತ್ರಿ ಸರಕಾರವನ್ನು ಕಾಪಾಡುವ ಸಲಹೆ ನೀಡಲಾಗಿತ್ತು ಮತ್ತು ಅದು ಆಡಳಿತದ ಮೇಲೆ ವಿಪರೀತ ಪರಿಣಾಮ ಬೀರಿತು ಎಂದು ಹೇಳಿದರು.