ನಿರ್ವಾಣಿ ಅಖಾಡಾದ ಮುಖ್ಯಸ್ಥ ಮಹಂತ ಧರ್ಮದಾಸ ಇವರಿಂದ ಕೇಂದ್ರ ಸರಕಾರಕ್ಕೆ ಲೀಗಲ್ ನೋಟಿಸ್
ನವದೆಹಲಿ – ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಸ್ಥೆಯ ಕುರಿತು ಪ್ರಶ್ನೆಗಳನ್ನು ಎತ್ತಿ ನಿರ್ವಾಣಿ ಅಖಾಡಾದ ಮುಖ್ಯಸ್ಥ ಮಹಂತ ಧರ್ಮದಾಸರು ಕೇಂದ್ರ ಗೃಹ ಸಚಿವಾಲಯಕ್ಕೆ ನೋಟಿಸ್ ಕಳುಹಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿಗನುಸಾರ ಟ್ರಸ್ಟ್ ಸ್ಥಾಪಿಸಲಾಗಿಲ್ಲ. ಇದು ಕಾನೂನು ಬಾಹಿರವಾಗಿದೆ ಮತ್ತು ಅನೇಕ ಲೋಪದೋಷಗಳನ್ನು ಒಳಗೊಂಡಿದೆ. ಪ್ರಸ್ತುತ ಟ್ರಸ್ಟ್‌ನಲ್ಲಿ ಸ್ವೇಚ್ಛಾಚಾರ ನಡೆಯುತ್ತಿದೆ, ಎಂದು ಅವರು ಆರೋಪಿಸಿದ್ದಾರೆ.
೧. ಮಹಂತ ಧರ್ಮದಾಸ ಅವರು ಗೃಹ ಸಚಿವಾಲಯಕ್ಕೆ ಕಳುಹಿಸಿರುವ ನೋಟಿಸ್‌ನಲ್ಲಿ, ಈ ಟ್ರಸ್ಟ್‌ನಲ್ಲಿ ಸುಧಾರಣೆ ಮಾಡುವ ಅಗತ್ಯವಿದೆ ಎಂದು ತಿಳಿಸಲಾಗಿದೆ. ನೋಟಿಸ್ ಬಂದ ಎರಡು ತಿಂಗಳಲ್ಲಿ ಸರಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.
೨. ನೋಟಿಸ್‌ನಲ್ಲಿ, ಮಹಂತ ಧರ್ಮದಾಸರು ಎಲ್ಲಾ ಆಸ್ತಿಯು ದೇವರಿಗೆ ಸೇರಿದ್ದರೆ, ದೇವರನ್ನು ಟ್ರಸ್ಟ್‌ನಲ್ಲಿ ಏಕೆ ಸೇರಿಸಿಕೊಂಡಿಲ್ಲ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಈ ಮೊದಲು ಸ್ವೀಕರಿಸಿದ ಅರ್ಪಣೆಗಳು ಪ್ರಸ್ತುತ ಟ್ರಸ್ಟನಲ್ಲಿ ಏಕೆ ತೋರಿಸಿಲ್ಲ ? ಎಂಬಂತಹ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
೩. ಶ್ರೀ ರಾಮ ಮಂದಿರ ಚಳುವಳಿಗೆ ಯಾವುದೇ ಸಂಬಂಧವಿಲ್ಲದ ಜನರನ್ನು ಟ್ರಸ್ಟ್ ನೇಮಕ ಮಾಡಿದೆ. ೧೯೪೯ ರ ಆಂದೋಲನದಲ್ಲಿ ಭಾಗವಹಿಸಿದವರಿಗೆ ಟ್ರಸ್ಟ್‌ನಲ್ಲಿ ಸರಿಯಾದ ಸ್ಥಾನಮಾನ ನೀಡಲಾಗಿಲ್ಲ; ಆದರೇ ೧೯೮೯ ರ ನಂತರ ಚಳುವಳಿಯಲ್ಲಿ ಸೇರಿದವರಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಸರಕಾರದೊಂದಿಗೆ ರಾಜಕೀಯ ಸಂಬಂಧ ಹೊಂದಿರುವವರಿಗೆ ಟ್ರಸ್ಟನಲ್ಲಿ ಪ್ರಮುಖ ಪಾತ್ರ ನೀಡಲಾಗಿದೆ ಎಂದು ಸಹ ಆರೋಪಿಸಿದ್ದಾರೆ.