ತಿರುವನಂತಪುರಂ (ಕೇರಳ) – ಕೇರಳದಲ್ಲಿಯ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂ ಈತನ ಕೈವಾಡವಿರಬಹುದು ಎಂಬ ಸಂದೇಹವಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಕೊಚ್ಚಿಯ ವಿಶೇಷ ನ್ಯಾಯಾಲಯದಲ್ಲಿ ತಿಳಿಸಿದೆ. ಚಿನ್ನದ ಕಳ್ಳಸಾಗಣೆಯಿಂದ ಬರುವ ಆದಾಯವನ್ನು ಭಾರತವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತಿವೆ ಎಂದು ಗುಪ್ತಚರ ಇಲಾಖೆಯು ಹೇಳಿರುವುದನ್ನು ಎನ್.ಐ.ಎ.ಯು ನ್ಯಾಯಾಲಯಕ್ಕೆ ತಿಳಿಸಿದೆ. ಈ ಸಮಯದಲ್ಲಿ ಎನ್.ಐ.ಎ. ಆರೋಪಿಗಳ ಜಾಮೀನಿಗೆ ವಿರೋಧಿಸಿದೆ. ಜುಲೈ ತಿಂಗಳಲ್ಲಿ ಬೇರೆ ಬೇರೆ ಕಡೆಗಳಿಂದ ಸುಮಾರು ೩೦ ಕೆಜಿ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಲಾಗಿದೆ. ತಿರುವನಂತಪುರಂ ವಿಮಾನ ನಿಲ್ದಾಣದಿಂದ ಈ ಚಿನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಚಿನ್ನವನ್ನು ಯುನೈಟೆಡ್ ಅರಬ್ ಎಮಿರಾತ್‌ನ ರಾಯಭಾರಿ ಕಚೇರಿಗೆ ಕಳುಹಿಸಲಾಗುತ್ತಿತ್ತು.
ಕೆಲವು ಆರೋಪಿಗಳು ದಾವೂದ್ ಇಬ್ರಾಹಿಂನೊಂದಿಗೆ ನಂಟಿದ್ದು ಈ ನಿಮಿತ್ತ ಅವರು ಹಲವಾರು ಬಾರಿ ಟಾಂಜಾನಿಯಾಕ್ಕೆ ಭೇಟಿ ನೀಡಿದ್ದರು. ದಾವೂದ್ ಟಾಂಜಾನಿಯಾದಲ್ಲಿ ವಜ್ರ ವ್ಯವಹಾರ ಮಾಡುತ್ತಿದ್ದು ಫಿರೋಜ್ ಎಂಬ ಹೆಸರಿನ ವ್ಯಕ್ತಿಯು ಈ ಎಲ್ಲಾ ವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದೆ.