ಸೀಮೋಲ್ಲಂಘನೆಯ ನಿರೀಕ್ಷೆ !

ಭಾರತವು ೫ ಆಗಸ್ಟ್ ೨೦೧೯ ರಂದು ಜಮ್ಮೂ-ಕಾಶ್ಮೀರವನ್ನು ಭಾರತ ದೇಶದಿಂದ ಪ್ರತ್ಯೇಕಿಸುವ ಮತ್ತು ಜಿಹಾದಿಗಳ ಭಯೋತ್ಪಾದನೆಯ ಚಟುವಟಿಕೆಗಳಿಗಾಗಿ ಅನುಕೂಲಕರವಾಗಿದ್ದ ಕಲಮ್ ೩೭೦ ಮತ್ತು ೩೫ (ಅ) ರದ್ದು ಪಡಿಸಿತು. ನಿಜ ಹೇಳಬೇಕೆಂದರೆ, ಈ ಕಲಮ್ ರದ್ದುಗೊಳಿಸಿರುವುದು ಭಾರತದ ಆಂತರಿಕ ವಿಷಯವಾಗಿತ್ತು; ಆದರೆ ಈ ಕಾಗದದ ಅಸ್ತ್ರವು ಪಾಕಿಸ್ತಾನ ಮತ್ತು ಚೀನಾ ದೇಶಗಳನ್ನು ಗಂಭೀರವಾಗಿ ಗಾಯಗೊಳಿಸಿತು.  ಕಲಂ ೩೭೦ ರದ್ದುಗೊಳಿಸಿರುವ ಘಟನೆಗೆ ೧ ವರ್ಷವಾದರೂ ಪಾಕಿಸ್ತಾನವು ಕಾಶ್ಮೀರದ ಮೇಲೆ ತನ್ನ ಹಕ್ಕು ಸ್ಥಾಪಿಸುವ ಹಗಲುಗನಸಿನಿಂದ ಇದುವರೆಗೂ ಹೊರ ಬಂದಿಲ್ಲ. ಇದರ ಪುರಾವೆಯೆಂದರೆ ಪಾಕಿಸ್ತಾನವು ಇತ್ತೀಚೆಗಷ್ಟೇ ಪ್ರಕಟಿಸಿರುವ ತನ್ನ ದೇಶದ ನಕಾಶೆ. ಈ ನಕಾಶೆಯಲ್ಲಿ ಪಾಕಿಸ್ತಾನವು ಜಮ್ಮೂ ಕಾಶ್ಮೀರ, ಲಢಾಖ, ಸಿಯಾಚೀನ್‌ಗಳೊಂದಿಗೆ ಗುಜರಾತಿನ ಜುನಾಗಡವನ್ನು ಕೂಡ ತನ್ನ ಗಡಿರೇಖೆಯಲ್ಲಿ ತೋರಿಸಿದೆ. ಪಾಕಿಸ್ತಾನವು ತನ್ನ ಈ ಮೂರ್ಖತನದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಗುರಿಯಾಯಿತು. ಪಾಕಿಸ್ತಾನವು ತನ್ನ ಮನಸ್ಸಿಗೆ ತೋಚಿದಂತಹ ನಕಾಶೆಯನ್ನು ಪ್ರಕಟಿಸಿರುವುದು, ೧೯೭೨ ನೇ ಇಸವಿಯ ಶಿಮ್ಲಾ ಒಪ್ಪಂದ ಸಹಿತ ೧೯೯೯ ರ  ಲಾಹೋರ ಘೋಷಣಾಪತ್ರದ ದ್ವಿಪಕ್ಷೀಯ ಮಾತುಕತೆಗೆ ತಿಲಾಂಜಲಿಯನ್ನಿತ್ತಿದೆ.

ಪಾಕಿಸ್ತಾನದ ಈ ಕ್ಯಾತೆಯನ್ನು ‘ವಿನಾಶಕಾಲೆ ವಿಪರೀತಬುದ್ಧಿಃ, ಎಂದೇ ವರ್ಣಿಸಬೇಕಾಗುವುದು. ದೇಶದ ಅಧಿಕೃತ ನಕಾಶೆ, ಎಂದರೆ ಶಿಶುವಿಹಾರದ ಯಾರೋ ಮಕ್ಕಳು ಚಿತ್ರಕಲೆಯನ್ನು ಕಲಿಯಲು ಗೀಚಿದ ಗೆರೆಗಳಾಗಿರುವುದಿಲ್ಲ. ಅಧಿಕೃತ ನಕಾಶೆ ಪ್ರಕಟಿಸುವಾಗ ಒಂದು ಮಿಲಿ ಮೀಟರನಷ್ಟು ವ್ಯತ್ಯಾಸವಾದರೂ ಅದು ಗಂಭೀರ ಅಪರಾಧವಾಗಿರುತ್ತದೆ; ಏಕೆಂದರೆ ತಪ್ಪು ನಕಾಶೆ ಪ್ರಕಟಿಸಿ ನೇರವಾಗಿ, ಮತ್ತೊಂದು ದೇಶದ ಸಾರ್ವಭೌಮತ್ವವನ್ನು ಕೆಣಕಿದಂತಾಗುತ್ತದೆ. ಇಲ್ಲಿ ಪಾಕಿಸ್ತಾನವಂತೂ ಶತ್ರುರಾಷ್ಟ್ರವಾಗಿದೆ. ಪಾಕಿಸ್ತಾನವು ಭಾರತದ ಕೆಲವು ಭೂಪ್ರದೇಶಗಳನ್ನು ತನ್ನ  ಭಾಗವಾಗಿದೆಯೆಂದು ತೋರಿಸಿ ಭಾರತವನ್ನು ಕೆಣಕಲು ಪ್ರಯತ್ನಿಸಿದೆ. ‘ಪಾಕಿಸ್ತಾನದ ಇತಿಹಾಸ ಮತ್ತು ಭೂಗೋಳ ಇವೆರಡರ ಅಧ್ಯಯನ ಎಷ್ಟು ಅಪ್ರಬುದ್ಧವಾಗಿದೆ ಎನ್ನುವುದು ಇದರಿಂದ ಕಂಡು ಬರುತ್ತದೆ. ಇಂತಹ ಪಾಕಿಸ್ತಾನದ ಭವಿಷ್ಯವಾದರೂ ಹೇಗೆ ಸುದೃಢವಾಗಿರಬಲ್ಲದು ? ‘ಪಾಕಿಸ್ತಾನವು ಮಾಡಿದ ಈ ಕೃತಿ ಅತ್ಯಂತ ನಿಂದನೀಯ, ವಿಚಿತ್ರ, ವಿಚಾರಶೂನ್ಯ ಮತ್ತು ಅಸತ್ಯವಾಗಿದೆ, ಎಂದು ಭಾರತವು ಪ್ರತಿಕ್ರಿಯಿಸಿದೆ. ಭಾರತವು ಇಷ್ಟಕ್ಕೇ ನಿಲ್ಲದೇ ಪಾಕಿಸ್ತಾನದ ಇಂತಹ ಉಪಟಳವನ್ನು ಶಾಶ್ವತವಾಗಿ ನಿಲ್ಲಿಸಲು ‘ಪಾಕಿಸ್ತಾನವನ್ನು ಜಗತ್ತಿನ ಭೂಪಟದಿಂದಲೇ ಅಳಿಸುವಂತಹ ಕ್ರಮವನ್ನು ಜರುಗಿಸಬೇಕೆಂದು ಜನರಿಗೆ ಅನಿಸುತ್ತದೆ. ಇಂದು ಸಂಪೂರ್ಣ ಜಗತ್ತು ಪಾಕಿಸ್ತಾನ ಮತ್ತು ಅದರ ಮಿತ್ರ ಚೀನಾದ ವಿರುದ್ಧ ಒಂದುಗೂಡಿದೆ. ಇವೆರಡೂ ದೇಶಗಳ  ಅಸುರಿ ಮಹತ್ವಾಕಾಂಕ್ಷೆಯು ಜಗತ್ತಿಗೆ ಅರಿವಾಗಿದೆ. ಆದರಿಂದಲೇ ಕಲಮ್ ೩೭೦ ರದ್ದುಗೊಳಿಸಿದ ಒಂದು ವರ್ಷ ಪೂರ್ಣಗೊಂಡಿರುವ ನಿಮಿತ್ತ ಚೀನಾವು ಕಾಶ್ಮೀರದ ವಿಷಯವನ್ನು ಪುನಃ ‘ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಮಂಡಿಸಲು ಪ್ರಯತ್ನಿಸಿದಾಗ, ‘ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನ ಸ್ಥಾಯಿ ದೇಶಗಳಾಗಿರುವ ಅಮೇರಿಕಾ, ಬ್ರಿಟನ್, ಫ್ರಾನ್ಸ್ ಮತ್ತು ರಶಿಯಾ ದೇಶಗಳು ಭಾರತದ ಪರವಾಗಿದ್ದವು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂದು ಭಾರತದ ಸ್ಥಾನ ಸುದೃಢವಾಗಿದೆ. ಅದರ ಲಾಭ ಪಡೆಯುವ ಅವಕಾಶವನ್ನು ಭಾರತವು ಕೈಬಿಡಬಾರದು. ಭಾರತವು ಈ ಅಂಶಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಧ್ವನಿ ಎತ್ತಿದರೂ, ಪಾಕಿಸ್ತಾನಕ್ಕೆ ಮತ್ತೊಮ್ಮೆ ಪೆಟ್ಟು ಬೀಳುವುದಂತೂ ಖಂಡಿತ. ಹೀಗಿದ್ದರೂ. ಅಂತರರಾಷ್ಟ್ರೀಯ ವೇದಿಕೆಯನ್ನು ಅವಲಂಬಿಸದೇ ದೇಶದ ಅಖಂಡತೆ ಸ್ಥಿರವಾಗಿಡಲು, ಭಾರತವೇ ಮುಂದುವರಿಯುವ ಆವಶ್ಯಕತೆಯಿದೆ. ‘ಪಾಕಿಸ್ತಾನವು ಏನಾದರೂ ಕಿಡಿಗೇಡಿತನ ಮಾಡುವುದು, ಬಳಿಕ ಭಾರತವು ಅದನ್ನು ಶಬ್ದಗಳಲ್ಲಿ ನಿಷೇಧ ವ್ಯಕ್ತಪಡಿಸುವುದು, ಎಚ್ಚರಿಕೆಯನ್ನು ನೀಡುವುದು ಮತ್ತು ವಾತಾವರಣ ತಿಳಿಯಾದ ತಕ್ಷಣ ಪಾಕಿಸ್ತಾನವು ಪುನಃ ಭಾರತವನ್ನು ಕೆಣಕುವುದು, ಈ ಚಕ್ರ ನಿಲ್ಲಿಸುವ ಒಂದು ‘ಕ್ಷಿಪ್ರ ಕೃತಿಯನ್ನು ಭಾರತದ ದೇಶಭಕ್ತ ಜನತೆಯು ಅಪೇಕ್ಷಿಸುತ್ತಿದ್ದಾರೆ.

ಗಡಿರೇಖೆಯ ಸಮಸ್ಯೆ ಇದು ಕಾಂಗ್ರೆಸ್ಸಿನ ಪಾಪ !

‘ಭಾರತದ ನಕಾಶೆಯನ್ನು ಕೇವಲ ಪಾಕಿಸ್ತಾನವಷ್ಟೇ ಕೆಣಕಿದೆ ಎಂದೇನಿಲ್ಲ, ಕೆಲವು ದಿನಗಳ ಹಿಂದೆ ನೇಪಾಳವು ಭಾರತದ ಕಾಲಾಪಾನಿ,ಲಿಂಪಿಯಾಧುರಾ ಮತ್ತು ಲಿಪುಲೇಖ ಈ ಒಟ್ಟಾರೆ ೩೯೫ ಚ.ಕಿ.ಮೀ. ಭೂಭಾಗದ ಮೇಲೆ ಹಕ್ಕನ್ನು ಪ್ರತಿಪಾದಿಸಿತ್ತು. ಅಂತಹ ನಕಾಶೆಯನ್ನು ಸಹ ಪ್ರಕಟಿಸಿ ನೇಪಾಳ ಭಾರತೀಯ ಭೂಭಾಗವನ್ನು ನುಂಗುವ ಸಿದ್ಧತೆಯಲ್ಲಿದೆ. ಚೀನಾ ಕೂಡ ಈ ಹಿಂದೆ ಭಾರತದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೇಟಿನ ಭಾಗವೆಂದು ತನ್ನ ಗಡಿರೇಖೆಯಲ್ಲಿ ತೋರಿಸಿತ್ತು. ಭಾರತದ ನಕಾಶೆಯಲ್ಲಿ ಬದಲಾವಣೆ ಮಾಡುವುದರ ಹಿಂದೆ, ಭಾರತದ ಮೇಲೆ ಅತ್ಯಧಿಕ ಕಾಲಾವಧಿಯವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ಸಿನ ನಿಷ್ಕ್ರಿಯತೆ ಕಾರಣವಾಗಿದೆ. ಸ್ವಾತಂತ್ರ್ಯಪ್ರಾಪ್ತಿಯ ಬಳಿಕ ತಕ್ಷಣವೇ ‘ಭಾರತವು ದೇಶದ ಗಡಿಯನ್ನು ಭದ್ರಪಡಿಸಬೇಕು ಎನ್ನುವ ಸೂಚನೆಯನ್ನು ಸ್ವಾತಂತ್ರ್ಯವೀರ ಸಾವರಕರರು ಸೂಚಿಸಿದ್ದರು. ಆದರೆ ರಾಷ್ಟ್ರಹಿತದ ಅಂಶವನ್ನು ಪೂರ್ಣಗೊಳಿಸಿದ್ದಲ್ಲಿ ಅದನ್ನು ಕಾಂಗ್ರೆಸ್ ಎನ್ನಬಹುದೇ ? ಕಾಂಗ್ರೆಸ್ಸಿನ ಪಂಡಿತರೆಂದು ಹೇಳಿಕೊಳ್ಳುವ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ ಇವರು ದೇಶದ ಗಡಿಯನ್ನು ಗುರುತಿಸಿ, ಭದ್ರಪಡಿಸಿಕೊಳ್ಳಲೇ ಇಲ್ಲ, ಬದಲಾಗಿ ‘ಯಾವ ಭೂ ಪ್ರದೇಶದಲ್ಲಿ ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲವೋ, ಅದನ್ನು ಚೀನಾ ವಶಕ್ಕೆ ಪಡೆದರೆ ಏನಾಯಿತು ? ಎಂಬ ಆಶಯದ ನಾಚಿಗೆಟ್ಟ ಹೇಳಿಕೆಯನ್ನು ನೀಡಿದ್ದರು. ದೇಶದ ಭೂಮಿಯ ವಿಷಯದಲ್ಲಿ ಇಷ್ಟು ನಿಷ್ಕಾಳಜಿಯ ದೃಷ್ಟಿಕೋನವಿರುವ ವ್ಯಕ್ತಿ ದೇಶದ ಪ್ರಮುಖ ಹುದ್ದೆಯಲ್ಲಿದ್ದರೆ ಏನಾಗಬಹುದು ? ಇಂದಿನ ಭಾರತದ ಗಡಿ ರೇಖೆಯ ಸಮಸ್ಯೆಯು ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಅದಕ್ಕೆ ಪ್ರಮುಖ ವಾಗಿ ಕಾಂಗ್ರೆಸ್ ಜವಾಬ್ದಾರವಾಗಿದೆ; ಆದರೆ ಈಗ ಕಾಂಗ್ರೆಸ್ಸಿನ ಈ ತಪ್ಪುಗಳನ್ನು ಸುಧಾರಿಸುವ ಜವಾಬ್ದಾರಿ ಭಾಜಪದ್ದಾಗಿದೆ. ಕೋಟ್ಯವಧಿ ಹಿಂದೂಗಳ ಶ್ರದ್ಧೆಯ ಸ್ಥಾನವಾಗಿರುವ ರಾಮ ಮಂದಿರದ ಭೂಮಿಪೂಜೆಯು ಪ್ರಧಾನಿ ನರೇಂದ್ರ ಮೋದಿಯವರ ಹಸ್ತದಿಂದ ಇತ್ತೀಚೆಗಷ್ಟೇ ಜರುಗಿತು. ಪ್ರಭು ಶ್ರೀರಾಮ ಕೇವಲ ಹಿಂದೂಗಳ ದೇವನಾಗಿಲ್ಲ. ಅವನು ಭಾರತದ ರಾಷ್ಟ್ರಪುರುಷನೂ ಆಗಿದ್ದಾನೆ. ಒಬ್ಬ ರಾಜನೆಂದು ಆದರ್ಶ ರಾಜ್ಯದ ಉದಾಹರಣೆಯನ್ನು ರಾಮನು ಹಾಕಿಕೊಟ್ಟಿದ್ದಾನೆ. ಆದ್ದರಿಂದಲೇ ಇಂದು ಸಾವಿರಾರು ವರ್ಷಗಳು ಕಳೆದರೂ, ರಾಮರಾಜ್ಯದ ಧ್ಯೇಯವನ್ನು ಕಣ್ಣೆದುರಿಗೆ ಇಟ್ಟುಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರದ ಭೂಮಿ ಪೂಜೆಯ ಸಮಯದಲ್ಲಿ ಮಾಡಿದ ಭಾಷಣದಲ್ಲಿ ರಾಮರಾಜ್ಯವನ್ನು ಉಲ್ಲೇಖಿಸಿದ್ದರು. ಶತ್ರುವಿಗೆ ಪಾಠ ಕಲಿಸುವ ದೃಷ್ಟಿಕೋನದಿಂದ ಪ್ರತ್ಯಕ್ಷ ರಾಮಾಯಣಕಾಲದ ಸಂದರ್ಭವನ್ನು ತೆಗೆದುಕೊಂಡರೆ, ‘ಅನ್ಯಾಯವನ್ನು ಹೇಗೆ ಸರಿಪಡಿಸುವುದು ?, ಎನ್ನುವ ವಾಸ್ತವಿಕ ಪಾಠ ರಾಮ ಚರಿತ್ರೆಯಿಂದ ಸಿಗುತ್ತದೆ. ರಾವಣನು ಸೀತಾಮಾತೆಯನ್ನು ಅಪಹರಿಸಿದಾಗ ರಾಮನು ಲಂಕೆಗೆ ಹೋಗಿ ರಾವಣನನ್ನು ವಧಿಸಿದನು ಮತ್ತು ಸೀತಾ ಮಾತೆಯನ್ನು ಮುಕ್ತಗೊಳಿಸಿದನು. ಆ ದಿನವೆಂದರೆ ದಸರಾ ! ಈ ದಿನದಂದು ಸೀಮೋಲ್ಲಂಘನೆ ಮಾಡುವ ಪದ್ಧತಿಯಿದೆ. ಸದ್ಯದ ಘಟನಾವಳಿಗಳನ್ನು ನೋಡಿದರೆ, ಪಕ್ಕದ ಶತ್ರುರಾಷ್ಟ್ರವನ್ನು ಅದರ ಸೀಮೆಯಲ್ಲಿಯೇ ಇರುವ ಎಚ್ಚರಿಕೆಯನ್ನು ನೀಡುವುದರೊಂದಿಗೆ ಭಾರತವು ಸೀಮೋಲ್ಲಂಘನೆಯನ್ನು ಮಾಡುವ ಆವಶ್ಯಕತೆಯಿದೆ. ಸದ್ಯ ರಾಮಜನ್ಮಭೂಮಿಯ ಮೇಲೆ ರಾಮಮಂದಿರ ನಿರ್ಮಾಣದ ಪ್ರತ್ಯಕ್ಷ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗ ಜನತೆ ಸೀಮೋಲ್ಲಂಘನೆಯ ನಿರೀಕ್ಷೆಯಲ್ಲಿದೆ.