‘ಸಾರಿ ಕಾಯಿಲೆ : ಲಕ್ಷಣಗಳು ಮತ್ತು ಉಪಚಾರ

ಪುಪ್ಪುಸವು ಶರೀರದ ಒಂದು ಮಹತ್ವಪೂರ್ಣ ಹಾಗೂ ಸಂವೇದನಾ ಶೀಲ ಅಂಗವಾಗಿದೆ. ಇದರ ಕಾರಣವೇನೆಂದರೆ ಇದು ಶರೀರಕ್ಕೆ ಪ್ರಾಣವಾಯುವನ್ನು ಪೂರೈಸುತ್ತದೆ ಹಾಗೂ ಶರೀರದಿಂದ ಕಾರ್ಬನ್ ಡೈಆಕ್ಸೈಡನ್ನು ಹೊರ ಹಾಕುತ್ತದೆ. ಇದು ಅತ್ಯಂತ ಸಂವೇದನಾಶೀಲ ಹಾಗೂ ಮುಕ್ತ ಅವಯವವಾಗಿದ್ದು ಅದು ನೇರವಾಗಿ ಹೊರಗಿನ ವಾತಾವರಣಕ್ಕೆ ಜೋಡಿಸಲ್ಪಟ್ಟಿದೆ. ಈ ಕಾರಣದಿಂದು ಯಾವುದೇ ವ್ಯಕ್ತಿಯ ಶರೀರದಲ್ಲಿ ಸಹಜವಾಗಿ ವಿಷಜಂತುಗಳ ಪ್ರವೇಶವಾಗಲು ಸಾಧ್ಯವಿದೆ. ‘ಸಾರಿ’ (SARI) ಇದು ಗಂಭೀರ ಸ್ವರೂಪದ ಸೋಂಕು ಆಗಿದ್ದು ಇದರಲ್ಲಿ ಪುಪ್ಪುಸವು ಸಹ ಒಳಗೊಂಡಿದೆ. ಈ ಸೋಂಕಿನಿಂದಾಗಿ ಶರೀರದಲ್ಲಿ ಆಕ್ಸಿಜನ್ ಪೂರೈಸುವ ಕ್ಷಮತೆಯಿರುವ ಪುಪ್ಪುಸಕ್ಕೆ ಅಡಚಣೆ ಉತ್ಪನ್ನವಾಗುತ್ತದೆ. ಸಾರಿಯ ಸೊಂಕು ತಗಲಲು ಅನೇಕ ಕಾರಣಗಳಿವೆ. ಇದರಲ್ಲಿ ವೈರಾಣು (ರೋಗಾಣು), ರೋಗದ ಸೂಕ್ಷ್ಮ ಜೀವಾಣು (ಬೆಕ್ಟೇರಿಯಾ), ಫಂಗಸ್ ಅಥವಾ ಇತರ ಕಾರಣಗಳಿರಬಹುದು. ಇದರಲ್ಲಿ ರೋಗಿಗೆ ಸಾಮಾನ್ಯವಾಗಿ ಶ್ವಾಸೋಚ್ಛ್ವಾಸದ ತೊಂದರೆಯ ಜೊತೆಗೆ ಕೆಮ್ಮು, ಜ್ವರ ಇತ್ಯಾದಿ ಲಕ್ಷಣಗಳು ಕಾಣಿಸುತ್ತವೆ. ಕೆಲವು ರೋಗಿಗಳು ಪ್ರಜ್ಞೆ ತಪ್ಪಿ ಬೀಳುತ್ತಾರೆ. ಈ ಕಾಯಿಲೆಯ ಅವಧಿ ಮತ್ತು ತೀವ್ರತೆಗನುಸಾರ ಲಕ್ಷಣಗಳು ಬದಲಾಗಬಹುದು. ‘ಸಾರಿಗೆ ತಕ್ಷಣ ಹಾಗೂ ಯೋಗ್ಯವಾದ ಉಪಚಾರ ಮಾಡದಿದ್ದರೆ ಅದರಿಂದ ಜೀವ ಹೋಗಬಹುದು.

‘ಸಾರಿ’ಯ ಅಪಾಯ ಯಾರಿಗೆ ?

‘ಸಾರಿಯ ಸೋಂಕು ತಗಲಿದೆಯೆ ಎಂದು ತಿಳಿದುಕೊಳ್ಳಲು ಅನೇಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಚಿಕಿತ್ಸೆಯ ಮೂಲಕ ಅದರ ಮೂಲ ಕಾರಣವನ್ನು ಕಂಡು ಹಿಡಿಯಲು ಪ್ರಯತ್ನಿಸಲಾಗುತ್ತದೆ. ಮಧುಮೇಹ, ಉಚ್ಚ ರಕ್ತದೊತ್ತಡ, ಹೃದ್ರೋಗ, ಪಿತ್ತಾಶಯ ಅಥವಾ ಮೂತ್ರಪಿಂಡ ಕೆಡುವುದು, ಉಬ್ಬಸ ಅಥವಾ ಕ್ಷಯರೋಗದಂತಹ ಪುಪ್ಪುಸದ ವಿವಿಧ ಕಾಯಿಲೆಗಳಿರುವ ವೃದ್ಧರಿಗೆ ಸಾರಿಯಿಂದ ಹೆಚ್ಚು ಅಪಾಯವಾಗುವ ಸಾಧ್ಯತೆಯಿದೆ ಹೆಚ್ಚು ಪ್ರಮಾಣದಲ್ಲಿರುತ್ತದೆ.

‘ಸಾರಿ’ಗೆ ಮುಖ್ಯ ಚಿಕಿತ್ಸೆಯೆಂದರೆ, ಆಕ್ಸಿಜನ್ (ಆಮ್ಲಜನಕ) ಪೂರೈಸುವುದು !

ರೋಗಿಗೆ ಪ್ಲಾಸ್ಟಿಕ್ ಟ್ಯೂಬ್ ಅಥವಾ ಸಿಪಿಎಪಿ ಅಥವಾ ಬಿಐಪಿಎಪಿಯ ಮೂಲಕ ಆಕ್ಸಿಜನ್(ಆಮ್ಲಜನಕ)ನೀಡಲಾಗುತ್ತದೆ ಅಥವಾ ಅತ್ಯಂತ ಗಂಭೀರ ಸ್ವರೂಪದ ರೋಗಿಯನ್ನು ಐಸಿಯುನಲ್ಲಿ ‘ವೆಂಟಿಲೇಟರ್’ನಲ್ಲಿಡುವ ಅವಶ್ಯಕತೆಯಿರುತ್ತದೆ. ರೋಗಿಗೆ ನಿಜವಾಗಿ ಏನಾಗಿದೆಯೆಂದು ಕಂಡು ಹಿಡಿಯಲು ಹಾಗೂ ಎಂಟಿಬಯೋಟಿಕ್ಸ್ ಉಪಯೋಗಿಸಲು ಇತರ ಪರೀಕ್ಷೆ ಸಹ ಮಾಡಲಾಗುತ್ತದೆ. ಸಾರಿಯ ವೈರಾಣು(ರೋಗಾಣು)ಗಳು ಕೆಲವೊಮ್ಮೆ ಶರೀರದಲ್ಲಿ ಇತರ ಯಾವುದದರೂ ಸೋಂಕಿನಿಂದಾಗಿ ಇರಬಹುದು ಹಾಗೂ ಅದರ ಪರಿಣಾಮದಿಂದ ಅವುಗಳು ಪುಪ್ಪುಸದಲ್ಲಿ ಹರಡುತ್ತವೆ. ಈ ಸಂಕ್ರಮಣದಿಂದಾಗಿ ಪುಪ್ಪುಸದಲ್ಲಿ ದ್ರವ ಶೇಖರಣೆಯಾಗುತ್ತದೆ ಹಾಗೂ ನಂತರ ಅದರ ಪರಿಣಾಮವೆಂದರೆ, ಪುಪ್ಪುಸದಲ್ಲಿ ಸೋಂಕು ಉಂಟಾಗುತ್ತದೆ. ಈ ಕಾಯಿಲೆಯ ಜಟಿಲತೆಯಿಂದಾಗಿ ಸಾರಿಯ ಬಹುತೇಕ ರೋಗಿಗಳನ್ನು ಐಸಿಯುನಲ್ಲಿಡುವ ಅವಶ್ಯಕತೆಯಿರುತ್ತದೆ ಹಾಗೂ ಅವರು ಹೆಚ್ಚು ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ.

ಲೇಖಕ : ಡಾ. ನಿಮೀಷ ಶಾಹ, ಜಸ್‌ಲೋಕ್ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿನ ಶ್ವಸನ ಚಿಕಿತ್ಸಾ ಸಲಹೆಗಾರರು (ಆಧಾರ : ‘ದೈನಿಕ ಲೋಕಸತ್ತಾ’ ಜಾಲತಾಣ)