ವಟಪೂರ್ಣಿಮೆ

೧. ತಿಥಿ : ಜ್ಯೇಷ್ಠ ಹುಣ್ಣಿಮೆ (ದಿನಾಂಕ : ೫.೬.೨೦೨೦)

೨. ಉದ್ದೇಶ : ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವೂ ವೃದ್ಧಿಯಾಗಬೇಕೆಂದು ಸ್ತ್ರೀಯರು ಈ ವ್ರತವನ್ನು ಪ್ರಾರಂಭಿಸಿದರು.

೩. ಸಾವಿತ್ರಿಯ ಮಹತ್ವ : ಭರತಖಂಡದಲ್ಲಿ ಪ್ರಸಿದ್ಧಿ ಹೊಂದಿರುವ ಪತಿವ್ರತೆಯರಲ್ಲಿ ಸಾವಿತ್ರಿಯು ಆದರ್ಶಳಾಗಿದ್ದಾಳೆ; ಹಾಗೆಯೇ ಅವಳನ್ನು ಅಖಂಡ ಸೌಭಾಗ್ಯದ ಪ್ರತೀಕವೆಂದೂ ಪರಿಗಣಿಸಲಾಗುತ್ತದೆ.

‘ಪತಿಯ ಸುಖ-ದುಃಖದಲ್ಲಿ ಭಾಗಿಯಾಗುವುದು, ಅವನನ್ನು ಆಪತ್ತಿನಿಂದ ರಕ್ಷಿಸಲು ಕಾಲಕ್ಕೇ ಆಹ್ವಾನ ನೀಡುವುದು, ಅವನ ಜೊತೆಗೇ ಇರುವುದು ಮತ್ತು ಇಬ್ಬರ ಜೀವನವನ್ನೂ ಈಶ್ವರಾಭಿಮುಖವಾಗಿಸುವುದು, ಇವು ಸ್ತ್ರೀಯ ದೊಡ್ಡ ಸದ್ಗುಣಗಳಾಗಿವೆ ಎಂಬ ಆದರ್ಶವನ್ನು ಸಾವಿತ್ರಿಯು ನಿರ್ಮಿಸಿದ್ದಾಳೆ. ಹೀಗಿದ್ದಲ್ಲಿ ‘ವಟಸಾವಿತ್ರಿ ವ್ರತದ ಆಚರಣೆಯು ಸ್ತ್ರೀಯ ದೌರ್ಬಲ್ಯ ಅಥವಾ ದಾಸ್ಯತ್ವ (ಗುಲಾಮಿತನ) ಹೇಗಾಗುತ್ತದೆ ?

ತಥಾಕಥಿತ ಆಧುನಿಕ ಸ್ತ್ರೀವಾದಿಗಳು ವಟಸಾವಿತ್ರಿ ವ್ರತವನ್ನು ಅವಹೇಳನೆ ಮಾಡದೇ, ಶ್ರದ್ಧೆಯಿಂದ ಆ ವ್ರತವನ್ನು ಸ್ವತಃ ಆಚರಿಸಿ ಏನು ಆತ್ಮಿಕ ಸಮಾಧಾನ ಸಿಗುತ್ತದೆ ಎಂದು ನೋಡಬೇಕು.

೪. ವ್ರತದ ದೇವತೆ : ಈ ವ್ರತದ ಪ್ರಧಾನ ದೇವತೆ ಸಾವಿತ್ರಿಸಹಿತ ಬ್ರಹ್ಮದೇವ. ಸತ್ಯವಾನ, ಸಾವಿತ್ರಿ, ನಾರದ ಮತ್ತು ಯಮಧರ್ಮ ಇವರು ಉಪ (ಗೌಣ) ದೇವತೆಗಳಾಗಿದ್ದಾರೆ.

೫. ವ್ರತವನ್ನು ಆಚರಿಸುವ ಪದ್ಧತಿ

೫. ಅ. ಸಂಕಲ್ಪ : ಪ್ರಾರಂಭದಲ್ಲಿ ಸೌಭಾಗ್ಯವತಿ ಸ್ತ್ರೀಯು ‘ನನಗೆ ಮತ್ತು ನನ್ನ ಪತಿಗೆ ಆರೋಗ್ಯಸಂಪನ್ನ ದೀರ್ಘಾಯುಷ್ಯ ದೊರೆಯಲಿ, ಎಂದು ಸಂಕಲ್ಪ ಮಾಡಬೇಕು.

೫. ಆ. ಪೂಜೆ :

೫. ಆ. ೧ ವಟದ ಪೂಜೆಯನ್ನು ಮಾಡಬೇಕು : ಈ ದಿನದಂದು ಸ್ತ್ರೀಯರು ವಟಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

ಶಾಸ್ತ್ರ : ವಟವು ಶಿವಸ್ವರೂಪವಾಗಿದೆ. ವಟವೃಕ್ಷದ ಪೂಜೆ ಮಾಡುವುದೆಂದರೆ ಒಂದು ರೀತಿಯಲ್ಲಿ ವಟದ ಮಾಧ್ಯಮದಿಂದ ಶಿವಸ್ವರೂಪಿ ಪತಿಯನ್ನು ಸ್ಮರಿಸಿ, ಅವನ ಆಯುಷ್ಯ ವೃದ್ಧಿಯಾಗಿ ಅವನ ಆಯುಷ್ಯದಲ್ಲಿನ ಪ್ರತಿಯೊಂದು ಕರ್ಮಕ್ಕೆ ಜೊತೆ ಸಿಗಲಿ ಎಂಬುದಕ್ಕಾಗಿ ಈಶ್ವರನ ಪೂಜೆ ಮಾಡುವುದು. ಕರ್ಮಕ್ಕೆ ಶಿವನ ಜೊತೆಯಿದ್ದರೆ, ಶಕ್ತಿ ಮತ್ತು ಶಿವ ಇವರ ಸಂಯುಕ್ತ ಕ್ರಿಯೆಯಿಂದ ವ್ಯವಹಾರದಲ್ಲಿನ ಕರ್ಮವು ಸಾಧನೆಯೆಂದಾಗಿ ಅದರಿಂದ ಜೀವಕ್ಕೆ ಲಾಭವಾಗುತ್ತದೆ.

೫. ಆ. ೨. ವಟಕ್ಕೆ (ಹತ್ತಿಯ ನೂಲಿನ) ದಾರವನ್ನು ಸುತ್ತಬೇಕು : ಪೂಜೆಯಲ್ಲಿ ಅಭಿಷೇಕವಾದ ನಂತರ ವಟಕ್ಕೆ ದಾರವನ್ನು ಸುತ್ತಬೇಕು, ಅಂದರೆ ವಟದ ಕೊಂಬೆಯ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಹತ್ತಿಯ ದಾರದಿಂದ ಮೂರು ಸುತ್ತು ಸುತ್ತಬೇಕು.

ಶಾಸ್ತ್ರ : ವಟದ ಕಾಂಡದಲ್ಲಿರುವ ಉದ್ದ ರಂಧ್ರಗಳಲ್ಲಿರುವ ಸುಪ್ತ ಲಹರಿಗಳು ಶಿವತತ್ತ್ವವನ್ನು ಆಕರ್ಷಿಸಿ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ. ಯಾವಾಗ ಮರದ ಕಾಂಡಕ್ಕೆ ಹತ್ತಿಯ ನೂಲಿನ ದಾರವನ್ನು ಸುತ್ತಲಾಗುತ್ತದೆಯೋ, ಆಗ ಜೀವದ ಭಾವಕ್ಕನುಸಾರ ಕಾಂಡದಲ್ಲಿನ ಶಿವ ತತ್ತ್ವಕ್ಕೆ ಸಂಬಂಧಿಸಿದ ಲಹರಿಗಳು ಕಾರ್ಯನಿರತವಾಗಿ ಆಕಾರವನ್ನು ಧರಿಸುತ್ತವೆ. ಹತ್ತಿಯ ನೂಲಿನಲ್ಲಿರುವ ಪೃಥ್ವಿ ಮತ್ತು ಆಪ ತತ್ತ್ವಗಳ ಸಂಯೋಗದಿಂದ ಈ ಲಹರಿಗಳು ಜೀವಕ್ಕೆ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತವೆ.

೫. ಆ. ೩. ಪ್ರಾರ್ಥನೆಯನ್ನು ಮಾಡಬೇಕು : ಪೂಜೆಯ ಕೊನೆಯಲ್ಲಿ ‘ಅಖಂಡ ಸೌಭಾಗ್ಯ ಲಭಿಸಲಿ, ತನ್ನೊಂದಿಗೆ, ಪತಿ, ಪುತ್ರ-ಪೌತ್ರರಿಗೆ ಆಯುರಾರೋಗ್ಯ, ಐಶ್ವರ್ಯ ಇತ್ಯಾದಿ ಲಭಿಸಲಿ, ಹಾಗೆಯೇ ಧನಧಾನ್ಯ ಮತ್ತು ಕುಲದ ವೃದ್ಧಿಯಾಗಲಿ, ಎಂದು ಸಾವಿತ್ರೀ ಸಹಿತ ಬ್ರಹ್ಮದೇವನಿಗೆ ಪ್ರಾರ್ಥನೆಯನ್ನು ಮಾಡಬೇಕು.

೫. ಇ. ಉಪವಾಸ : ಸ್ತ್ರೀಯರು ಸಂಪೂರ್ಣ ದಿನ ಉಪವಾಸವನ್ನು ಮಾಡಬೇಕು. (ಅಂಧಶ್ರದ್ಧಾ ನಿರ್ಮೂಲನ ಸಮಿತಿಯು, ಅಂದರೆ ಅಂನಿಸದ ಕಾರ್ಯಕರ್ತರು ‘ವಟಪೂರ್ಣಿಮೆ ಎಂದರೆ ಕೇವಲ ‘ಸುಳ್ಳುಕತೆಯಾಗಿದೆ ಎಂದು ಅಪಪ್ರಚಾರ ಮಾಡುತ್ತಾರೆ. ಎಲ್ಲಿ ಕಣಕಣಗಳಲ್ಲಿ ದೇವತೆಗಳ ಅಸ್ತಿತ್ವವನ್ನು ಮನ್ನಿಸಿ ವೃಕ್ಷದೇವತೆಯನ್ನು ಪೂಜಿಸಲು ಕಲಿಸುವ ಮಹಾನ್ ಹಿಂದೂ ಧರ್ಮ ಮತ್ತು ಎಲ್ಲಿ ಹಿಂದೂ ಧರ್ಮವನ್ನು ಅಸತ್ಯವೆಂದು ನಿರ್ಧರಿಸುವ ಬುದ್ಧಿಜೀವಿ, ಧರ್ಮದ್ರೋಹಿ ಮತ್ತು ಸಾಮ್ಯವಾದಿಗಳು ! (ಆಧಾರ : ಸನಾತನದ ಗ್ರಂಥ ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ)