ಅಯೋಧ್ಯೆ (ಉತ್ತರ ಪ್ರದೇಶ) – ರಾಮಜನ್ಮಭೂಮಿ ಖಟ್ಲೆಯ ತೀರ್ಪು ಬಂದು ರಾಮ ಮಂದಿರದ ಮಾರ್ಗವು ಸುಗಮವಾಗಿದೆ. ದೇವಸ್ಥಾನದ ನಿರ್ಮಾಣ ಕಾರ್ಯವೂ ಪ್ರಾರಂಭವಾಗಿದೆ. ಆದ್ದರಿಂದ ಇಂತಹ ಸಮಯದಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಬಗ್ಗೆ ಕೇಂದ್ರ ತನಿಖಾ ದಳದ (ಸಿಬಿಐ) ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಖಟ್ಲೆಯನ್ನು ತಕ್ಷಣ ಕೈಬಿಡಬೇಕೆಂದು ಬಾಬರಿ ಮಸೀದಿಯ ಪಕ್ಷಕಾರ ಇಕ್ಬಾಲ್ ಅನ್ಸಾರಿ ಒತ್ತಾಯಿಸಿದ್ದಾರೆ.
ತೀರ್ಪಿನಿಂದ ದೇಶದಲ್ಲಿ ಸೌಹಾರ್ದತೆ ಹಾಳಾಗಬಹುದು
ಅನ್ಸಾರಿಯವರು ಮಾತನಾಡುತ್ತಾ, ‘ಬಾಬರಿ ಮಸೀದಿ ಕೆಡವಿದ ಪ್ರಕರಣದ ಎಲ್ಲ ಸಾಕ್ಷಿದಾರರ ಹೇಳಿಕೆಗಳು ಪೂರ್ಣಗೊಂಡಿವೆ. ಆರೋಪಿಗಳ ಅಂತಿಮ ಹೇಳಿಕೆಯನ್ನು ಪಡೆಯುವ ದಿನಾಂಕವನ್ನೂ ನಿಗದಿಪಡಿಸಲಾಗಿದೆ. ಇದರರ್ಥ ಶೀಘ್ರದಲ್ಲೇ ತೀರ್ಪು ಬರಬಹುದು. ಈ ತೀರ್ಪಿನಿಂದ ದೇಶದಲ್ಲಿ ಕೋಮು ಸೌಹಾರ್ದತೆ ಪುನಃ ಹಾಳಾಗಬಹುದು. ಆದ್ದರಿಂದ ಸರ್ಕಾರವು ಈ ಪ್ರಕರಣವನ್ನು ಕೈಬಿಡಬೇಕು. ಹಾಗೆ ಮಾಡುವುದರಿಂದ ಜನರು ದೇವಸ್ಥಾನ ಹಾಗೂ ಮಸೀದಿ ಈ ವಿವಾದವನ್ನು ಶಾಶ್ವತವಾಗಿ ಮರೆತುಬಿಡುವರು’, ಎಂದರು.
ಮಸೀದಿಯ ಸ್ಥಳದಲ್ಲಿ ಶಾಲೆ ಮತ್ತು ಮಹಾವಿದ್ಯಾಲಯವನ್ನು ನಿರ್ಮಿಸಿ !
ಅನ್ಸಾರಿಯವರು ನ್ಯಾಯಾಲಯವು ಮಸೀದಿಗಾಗಿ ಮಂಜೂರು ಮಾಡಿದ ೫ ಎಕರೆ ಜಮೀನಿನ ಬಗ್ಗೆ ಮಾತನಾಡುತ್ತಾ ಈಗ ನೀಡಿರುವ ಪ್ರದೇಶದಲ್ಲಿ, ಈಗಾಗಲೇ ೨೨ ಮಸೀದಿಗಳಿವೆ, ಇಲ್ಲಿ ಏನು ಅಗತ್ಯವಿದೆಯೋ ಅದನ್ನು ಪೂರೈಸಬೇಕು. ಆದ್ದರಿಂದ ಅಲ್ಲಿ ಕರೋನಾ ರೋಗಿಗಳಿಗಾಗಿ ಆಸ್ಪತ್ರೆಯನ್ನು ನಿರ್ಮಿಸುವುದು ಹೆಚ್ಚು ಸೂಕ್ತವಾಗಿದೆ, ಜೊತೆಗೆ ಈ ಪರಿಸರದಲ್ಲಿ ಮಸೀದಿಯೊಂದಿಗೆ ಶಾಲೆ, ಕಾಲೇಜು, ಧರ್ಮಶಾಲೆ ನಿರ್ಮಿಸಬೇಕು ಹಾಗೂ ಜನರು ತಾರತಮ್ಯವಿಲ್ಲದೆ ಪ್ರಯೋಜನ ಪಡೆಯಬೇಕು, ಎಂದಿದ್ದಾರೆ.
ಅಡ್ವಾಣಿ, ಉಮಾ ಭಾರತಿ ಸೇರಿದಂತೆ ೪೯ ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
ಬಾಬರಿ ಮಸೀದಿಯನ್ನು ೧೯೯೨ ರ ಡಿಸೆಂಬರ್ ೬ ರಂದು ಕೆಡವಲಾಯಿತು. ಕೇಂದ್ರ ತನಿಖಾ ದಳ (ಸಿಬಿಐ)ವು ಈ ಪ್ರಕರಣದ ತನಿಖೆ ನಡೆಸಿ ೪೯ ಜನರ ವಿರುದ್ಧ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತ್ತು. ಎಲ್.ಕೆ.ಅಡ್ವಾಣಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ಮುರಳಿ ಮನೋಹರ್ ಜೋಶಿ, ಪವನ್ ಕುಮಾರ್ ಪಾಂಡೆಯ, ಬೃಜಭೂಷಣ್ ಶರಣ್ ಸಿಂಗ್, ಸತೀಶ ಪ್ರಧಾನ, ವಿನಯ ಕಟಿಯಾರ್, ಸಾಧ್ವಿ ಋತಂಬರಾ, ಡಾ. ರಾಮ ವಿಲಾಸ ವೇದಂತಿ, ಚಂಪತ್ ರಾಯ್, ನೃತ್ಯ ಗೋಪಾಲ್ ದಾಸ್, ಲಲ್ಲು ಸಿಂಗ್, ಮಹಂತ ಧರ್ಮದಾಸ ಸಾಕ್ಷಿ ಮಹಾರಾಜ, ಆರ್.ಎನ್. ಶ್ರೀವಾಸ್ತವ ಮುಂತಾದವರ ಸಮಾವೇಶವಿದೆ. ಈ ಪೈಕಿ ೩೨ ಮಂದಿ ಜೀವಂತವಾಗಿದ್ದರೆ, ೧೯ ಮಂದಿ ನಿಧನರಾಗಿದ್ದಾರೆ. ಆಗಸ್ಟ್ ೩೧ ರೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.