ನವ ದೆಹಲಿ : ಆಡಳಿತ ಮಂಡಳಿಯ ಅನುಮೋದನೆ ಪಡೆದ ನಂತರ, ಯೋಗಋಷಿ ರಾಮದೇವಬಾಬಾ ಅವರ ಪತಂಜಲಿ ಸಂಸ್ಥೆಯ ವತಿಯಿಂದ ಕೊರೋನಾ ಮೇಲಿನ ಚಿಕಿತ್ಸೆಗಾಗಿ ಔಷಧಿಯ ವೈದ್ಯಕೀಯ ಪರೀಕ್ಷೆಯನ್ನು ಪ್ರಾರಂಭಿಸಿತು. ಪತಂಜಲಿ ಸಂಸ್ಥೆಯ ವ್ಯವಸ್ಥಾಪಕ ಸಂಚಾಲಕರಾದ ಆಚಾರ್ಯ ಬಾಲಕೃಷ್ಣ ಅವರು, ‘ಕರೋನಾಗೆ ಔಷಧಕ್ಕಾಗಿ ವೈದ್ಯಕೀಯ ಪರೀಕ್ಷೆಗೆ ಅನುಮತಿ ಪಡೆಯುವುದು ಸುಲಭವಿರಲಿಲ್ಲ. ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ಯು ನಮ್ಮ ಔಷಧದ ಬಗ್ಗೆ ಯಾವುದೇ ಆಸಕ್ತಿಯನ್ನು ತೋರಿಸಿರಲಿಲ್ಲ; ಆದ್ದರಿಂದ ನಾವು ‘ಕ್ಲಿನಿಕಲ್ ಟ್ರಯಲ್ಸ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ’ದಲ್ಲಿ ಈ ಔಷಧಿಯನ್ನು ನೋಂದಾಯಿಸಲು ನಿರ್ಧರಿಸಿದೆವು ಮತ್ತು ಜೈಪುರ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಒಂದು ಇಲಾಖೆಯಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ಪ್ರಾರಂಭಿಸಿದೆವು. ಫೆಬ್ರವರಿಯಿಂದಲೇ ಪತಂಜಲಿ ಸಮೂಹವು ಕೊರೋನಾ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೆವು. ಮಾರ್ಚ್ ತನಕ ಪತಂಜಲಿಯು ಅನೇಕರಿಗೆ ಚಿಕಿತ್ಸೆ ನೀಡಿತು; ಆದರೆ ಅದು ವೈದ್ಯಕೀಯ ಪರೀಕ್ಷಣೆಯ ಭಾಗವಾಗಿರಲಿಲ್ಲ. ನಮ್ಮ ಸಂಶೋಧನೆಯನ್ನು ಸಮಾಜದ ಮುಂದೆ ತರಲು ವೈದ್ಯಕೀಯವಾಗಿ ಪರೀಕ್ಷಿಸುವ ಅಗತ್ಯವಿತ್ತು. ಅದಕ್ಕಾಗಿಯೇ ನಾವು ಅನುಮತಿ ಪಡೆದೆವು. ನಮ್ಮ ವೈದ್ಯಕೀಯ ಪ್ರಯೋಗಾಲಯಗಳು ಇತರ ಆಯುರ್ವೇದ ಸ್ಥಾಪನೆಗಳಿಗಿಂತ ಉತ್ತಮವಾಗಿವೆ. ಪ್ರಸ್ತುತ ನಮ್ಮಲ್ಲಿ ೫೦೦ ಸಂಶೋಧಕರು ಇದ್ದು ಅವರಲ್ಲಿ ೧೦೦ ಮಂದಿ `ಪೋಸ್ಟ್ ಡಾಕ್ಟರೇಟ್’ ಸಂಶೋಧಕರು ಇದ್ದಾರೆ.’