ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್

ಜಂತರ್‌ಮಂತರ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಮೇಲಿನ ಪೊಲೀಸ್ ಲಾಠಿಚಾರ್ಜ್ ಪ್ರಕರಣ - ಸುಪ್ರೀಂ ಕೋರ್ಟ್ ನ ನಿರೀಕ್ಷಣೆ

ನವದೆಹಲಿ – ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದೆ. ಕೇವಲ ಯಾವುದೋ ಪ್ರತಿಭಟನೆ ಅಥವಾ ಧರಣಿ ನಡೆಯುತ್ತಿದೆ ಎಂಬ ಒಂದೇ ಕಾರಣಕ್ಕೆ ಪೊಲೀಸರು ನಡೆಸುವ ಲಾಠಿಚಾರ್ಜ್ ಅನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಭಟನೆ ಅಥವಾ ಧರಣಿಯ ಸಮಯದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ಅಥವಾ ದೌರ್ಜನ್ಯಗಳು ನಡೆದಿದ್ದರೆ, ಅವುಗಳ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು. ಈ ಸಮಸ್ಯೆಯು ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿರದೆ ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ ಎಂದು ಜಂತರ್‌ಮಂತರ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ನಂತರದ ಲಾಠಿಚಾರ್ಜ್ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ದೇಶಾದ್ಯಂತ ಪ್ರತಿಭಟನೆಗಳನ್ನು ನಿಭಾಯಿಸಲು ಏಕರೂಪದ ರಾಷ್ಟ್ರೀಯ ಮಾರ್ಗಸೂಚಿ (ನಿಯಮಾವಳಿ) ಇರುವುದು ಅತ್ಯಂತ ಅಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಕುರಿತು ನಾಳೆ ವಿಚಾರಣೆ ನಡೆಯಲಿದೆ.

೧. ಒಂದೆಡೆ ಪೊಲೀಸರ ಲಾಠಿಚಾರ್ಜ್ ಅನ್ನು ಪ್ರಶ್ನಿಸುತ್ತಲೇ, ಇನ್ನೊಂದೆಡೆ ಪ್ರತಿಭಟನೆಗಳ ವೇಳೆ ಪೊಲೀಸರ ಮೇಲೆ ನಡೆಯುವ ದಾಳಿಗಳ ಕುರಿತಾಗಿಯೂ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿತು. ಈ ಸಮಯದಲ್ಲಿ ವಕೀಲರೊಬ್ಬರು ಕ್ಷುಬ್ಧ ಗುಂಪಿನಿಂದ ಪೊಲೀಸರ ಮೇಲೆ ನಡೆದ ದಾಳಿಗಳು ಮತ್ತು ಅವರ ಕುಟುಂಬಸ್ಥರಿಗೆ ಬಂದ ಬೆದರಿಕೆಗಳನ್ನು ಉಲ್ಲೇಖಿಸಿದರು.

೨. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಪೊಲೀಸ್ ಸಿಬ್ಬಂದಿಗೆ ಆಗುವ ಗಾಯಗಳು ಮತ್ತು ಅವರ ಮೇಲಿನ ದಾಳಿಗಳೂ ಅಷ್ಟೇ ಕಳವಳಕಾರಿ ವಿಷಯಗಳಾಗಿವೆ. ಇಂತಹ ಸಂದರ್ಭಗಳಲ್ಲಿ ಆಡಳಿತವು ಪೊಲೀಸರಿಗೆ ಸೂಕ್ತ ರಕ್ಷಣೆ ನೀಡಲಿಲ್ಲವೇಕೆ? ಎಂದು ನಾವು ಸರಕಾರವನ್ನು ಪ್ರಶ್ನಿಸಬಹುದು. ಪೊಲೀಸರಾಗಲಿ ಅಥವಾ ಸಾಮಾನ್ಯ ನಾಗರಿಕರಾಗಲಿ, ಪ್ರತಿಯೊಬ್ಬರ ಜೀವವೂ ಅಷ್ಟೇ ಮುಖ್ಯವಾಗಿದೆ. ಪ್ರತಿಭಟನೆಗಳನ್ನು ನಿಭಾಯಿಸುವಾಗ ಪೊಲೀಸ್ ಮತ್ತು ಆಡಳಿತದ ನಡುವೆ ಸಮನ್ವಯ ಹಾಗೂ ಶಿಸ್ತು ಇರುವುದು ಅತ್ಯಗತ್ಯ. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸ್ವಯಂ ಶಿಸ್ತು ಅತ್ಯಂತ ಪ್ರಮುಖವಾದದ್ದು” ಎಂದು ಹೇಳಿತು.

೩. ನ್ಯಾಯಾಲಯವು, “ಯಾರಾದರೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಯಸಿದರೆ, ಅದಕ್ಕಾಗಿ ಸೂಕ್ತ ಸ್ಥಳ ಮತ್ತು ಸ್ಪಷ್ಟ ನಿಯಮಾವಳಿಗಳನ್ನು ನಿಗದಿಪಡಿಸಬೇಕು. ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವ ಅಥವಾ ಹಿಂಸಾಚಾರ ನಡೆಸುವ ಅಸಾಮಾಜಿಕ ಶಕ್ತಿಗಳ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲೇಬೇಕು. ಇಡೀ ದೇಶದಲ್ಲಿ ಪ್ರತಿಭಟನೆಗಳನ್ನು ನಿಭಾಯಿಸಲು ಒಂದೇ ನಿಯಮಾವಳಿ ಇರಬೇಕು, ಇದರಿಂದ ಯಾವುದೇ ರಾಜ್ಯದಲ್ಲೂ ಅಧಿಕಾರ ದುರುಪಯೋಗವಾಗುವುದಿಲ್ಲ” ಎಂದು ತಿಳಿಸಿತು.

ಸಂಪಾದಕೀಯ ನಿಲುವು

ಶಾಂತಿಯುತವಾಗಿ ನಡೆಯುವ ಪ್ರತಿಭಟನೆ ಹಿಂಸಾತ್ಮಕವಾದಾಗ, ಅದನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡುವುದನ್ನು ಬಿಟ್ಟು ಬೇರೆ ದಾರಿಯಿರುವುದಿಲ್ಲ ಎಂದೇ ಹೆಚ್ಚಿನ ಸಂದರ್ಭಗಳಲ್ಲಿ ಕಂಡುಬರುತ್ತದೆ!