ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿನ ಬುದ್ಧೇಶ್ವರ ದೇವಸ್ಥಾನದ ಸೇವಕನೇ ಗಂಟೆಯ ಕಳ್ಳ !

ದೇವಸ್ಥಾನದ ಆಡಳಿತವು ಜಿಲ್ಲಾ ಆಡಳಿತದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ

ಆರೋಪಿ ಗೋಲು ಅಲಿಯಾಸ್ ಗೌರವ್ (ಚಿಕ್ಕ ಚಿತ್ರದಲ್ಲಿ)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿರುವ ಪ್ರಸಿದ್ಧ ಮತ್ತು ಪ್ರಾಚೀನ ಬುದ್ಧೇಶ್ವರ ದೇವಸ್ಥಾನದಿಂದ ಮೇಲಿಂದ ಮೇಲೆ  ಆಗುತ್ತಿದ್ದ ಗಂಟೆಯ ಕಳುವಿನ ರಹಸ್ಯ ಕೊನೆಗೂ ಬಯಲಾಗಿದ್ದು, ದೇವಸ್ಥಾನದ ಸೇವಕನೇ ಹಿತ್ತಾಳೆಯ ಬೆಲೆಬಾಳುವ ಗಂಟೆಯನ್ನು ಕದಿಯುವಾಗ ಸಾಕ್ಷ್ಯ  ಸಮೇತವಾಗಿ ಸಿಕ್ಕಿಬಿದ್ದಿದ್ದಾನೆ. ಈ ಘಟನೆಯಿಂದ ಭಕ್ತರಲ್ಲಿ ಆಕ್ರೋಶದ ಅಲೆ ಎದ್ದಿದೆ. ಗೋಲು ಉರ್ಫ್ ಗೌರವ ಎಂಬಾತನೇ ಈ ಸೇವಕನಾಗಿದ್ದು, ಈತನಿಗೆ ದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಶೃಂಗಾರ ಆರತಿಯ ವ್ಯವಸ್ಥೆಯ ಜವಾಬ್ದಾರಿಯಿತ್ತು. ಇದರ ದುರುಪಯೋಗ ಪಡೆದು ಆತನು ಈ ಕೃತ್ಯ ಎಸಗಿದ್ದಾನೆ. ಈ ಕುರಿತು ಸ್ಥಳೀಯ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ದೇವಸ್ಥಾನದಿಂದ ಈ ಹಿಂದೆಯೂ ಹಿತ್ತಾಳೆಯ ಹಲವಾರು ಗಂಟೆಗಳು ಕಳುವಾಗಿದ್ದವು; ಆದರೆ ಈ ಘಟನೆಗಳ ಯಾವುದೇ ಸುಳಿವು ಸಿಗುತ್ತಿರಲಿಲ್ಲ. ಗೌರವನ ಬಂಧನದ ನಂತರ ಈ ಎಲ್ಲಾ ಕಳ್ಳತನಗಳ ಹಿಂದೆ ಆತನ ಕೈವಾಡವೇ ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಲೆಕ್ಕಾಧಿಕಾರಿ ಆನಂದ ಶ್ರೀವಾಸ್ತವ ರವರು ಪಾರಾ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ. ಬುದ್ಧೇಶ್ವರ ದೇವಸ್ಥಾನದ ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ತಕ್ಷಣವೇ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಬೇಕೆಂದು ಸ್ಥಳೀಯ ನಾಗರಿಕರು ಮತ್ತು ಭಕ್ತರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಆಡಳಿತವನ್ನು ನಿಷ್ಟಾವಂತ ಭಕ್ತರ ಕೈಗೆ ಕೊಡುವುದು ಏಕೆ ಅಗತ್ಯವಾಗಿದೆ ? ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಇಂತಹವರಲ್ಲಿ ಕಿಂಚಿತ್ ಧಾರ್ಮಿಕತೆಯೂ ಇಲ್ಲದಿರುವುದರಿಂದ ಅವರು ಇಷ್ಟು ದೊಡ್ಡ ಪಾಪ ಮಾಡುವ ಧೈರ್ಯ ಮಾಡುತ್ತಾರೆ !