ದೇಶದ ಕಾನೂನಿಗಿಂತ ‘ಮುಸ್ಲಿಂ ಪರ್ಸನಲ್ ಲಾ’ ದೊಡ್ಡದಲ್ಲ ! – ಅಲಹಾಬಾದ್ ಹೈಕೋರ್ಟ್

ಪ್ರಯಾಗ್‌ರಾಜ್ (ಉತ್ತರ ಪ್ರದೇಶ) – ‘ಮುಸ್ಲಿಂ ಪರ್ಸನಲ್ ಲಾ’ ‘ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006’ ಮತ್ತು ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಕಾಯ್ದೆ, 2012’ (ಪೋಕ್ಸೋ) ನ ನಿಬಂಧನೆಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ 16 ವರ್ಷದ ಮುಸ್ಲಿಂ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹವನ್ನು ತಡೆಯಲು ಪೊಲೀಸ್ ಮತ್ತು ‘ಚೈಲ್ಡ್ ಲೈನ್’ ಸಂಸ್ಥೆಯ ಅಧಿಕಾರಿಗಳು ಹೋದಾಗ, ಅವರ ಮೇಲೆ ದಾಳಿ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಯಾವುದೇ ಪರಿಹಾರ ನೀಡಲು ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿತು.

೧. ದೇಶದ ರಾಷ್ಟ್ರೀಯ ನೀತಿ, ಸಾರ್ವಜನಿಕ ಆರೋಗ್ಯ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಆಧರಿಸಿದ ಈ ಎರಡೂ ಕಾನೂನುಗಳು ಎಲ್ಲಾ ನಾಗರಿಕರಿಗೂ, ಅವರ ಧರ್ಮ ಯಾವುದೇ ಇರಲಿ, ಸಮಾನವಾಗಿ ಅನ್ವಯಿಸುತ್ತವೆ ಎಂದು ನ್ಯಾಯಾಲಯ ಹೇಳಿತು.

೨. ಮುಸ್ಲಿಂ ಪರ್ಸನಲ್ ಲಾ ಅಂದರೆ ಶರಿಯತ್ ಪ್ರಕಾರ, ಯಾವುದೇ ಹುಡುಗಿ ಋತುಮತಿಯಾಗಿದ್ದರೆ / ಪ್ರಾಯಕ್ಕೆ (ಸಾಮಾನ್ಯವಾಗಿ 15 ವರ್ಷ ಎಂದು ಪರಿಗಣಿಸಲಾಗುತ್ತದೆ) ಬಂದಿದ್ದರೆ, ಆಕೆ ಮದುವೆಯಾಗಲು ಅರ್ಹಳು ಎಂದು ಅರ್ಜಿದಾರರ ಪರವಾಗಿ ವಾದಿಸಲಾಯಿತು. ಬಾಲ್ಯ ವಿವಾಹ ನಿಷೇಧ ಕಾಯ್ದೆಯು ಅವರ ಪರ್ಸನಲ್ ಲಾ ಅನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದರು.

೩. ಹೈಕೋರ್ಟ್ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ಶರಿಯತ್ ಕಾನೂನಿನಡಿಯಲ್ಲಿ ಮದುವೆಗಾಗಿ ಪ್ರಾಯದ ವಯಸ್ಸನ್ನು ಸಿಂಧು ಎಂದು ಪರಿಗಣಿಸುವುದು, ದೇಶದ ಬಾಲ್ಯ ವಿವಾಹ ವಿರೋಧಿ ಕಾನೂನಿನ ಮತ್ತು ಅಪ್ರಾಪ್ತರೊಂದಿಗೆ ದೈಹಿಕ ಸಂಬಂಧ ಹೊಂದುವುದನ್ನು ನಿಷೇಧಿಸುವ ಕಾನೂನಿನ ನೇರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರತಿಯೊಬ್ಬ ನಾಗರಿಕನಿಗೂ ಮದುವೆಗೆ ಕಾನೂನುಬದ್ಧ ವಯಸ್ಸನ್ನು ಬಾಲ್ಯ ವಿವಾಹ ನಿಷೇಧ ಕಾಯ್ದೆಯಲ್ಲಿ ನಿಗದಿಪಡಿಸಿರುವಂತೆಯೇ ಇರುತ್ತದೆ. ಒಂದು ವೇಳೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಮದುವೆಯಾಗಲು ಅನುಮತಿ ನೀಡಿದರೆ, ಅದು ಪೋಕ್ಸೋ ಕಾಯ್ದೆಯ ಉಲ್ಲಂಘನೆಯಾಗುವುದು ಖಚಿತ; ಏಕೆಂದರೆ ಮದುವೆ ಮತ್ತು ದೈಹಿಕ ಸಂಬಂಧವನ್ನು ಪರಸ್ಪರ ಬೇರ್ಪಡಿಸಲು ಸಾಧ್ಯವಿಲ್ಲ. ಎರಡೂ ಕಾನೂನುಗಳನ್ನು ಸಾರ್ವಜನಿಕ ಆರೋಗ್ಯ ಮತ್ತು ರಾಷ್ಟ್ರೀಯ ನೀತಿಯಡಿಯಲ್ಲಿ ರೂಪಿಸಲಾಗಿದ್ದು, ಇದರ ಹಿಂದೆ ಆಳವಾದ ವೈಜ್ಞಾನಿಕ ದೃಷ್ಟಿಕೋನವಿದೆ. ಆದ್ದರಿಂದ, ಈ ಕಾನೂನುಗಳಿಂದ ವಿನಾಯಿತಿ ಪಡೆಯುವ ಸವಲತ್ತನ್ನು ಯಾರಿಗೂ ನೀಡಲಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಸಂಪಾದಕೀಯ ನಿಲುವು

ಭಾರತದಲ್ಲಿ ವಿಭಿನ್ನ ಧರ್ಮಗಳಿಗಾಗಿ ಬೇರೆ ಬೇರೆ ಕಾನೂನುಗಳನ್ನು ತಡೆಯಲು ದೇಶದ ಎಲ್ಲಾ ಧರ್ಮದವರಿಗೂ ಸಮಾನ ಕಾನೂನು ಇರುವುದು ಅಗತ್ಯವಾಗಿದೆ. ದೇಶದಾದ್ಯಂತ ಏಕರೂಪವಾದ ನಾಗರಿಕ ಸಂಹಿತೆ ಜಾರಿಗೆ ತರಬೇಕು, ಇದಕ್ಕಾಗಿ ಸಾರ್ವಜನಿಕರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು!