38 ಉಗ್ರರಿಗೆ ಗಲ್ಲುಶಿಕ್ಷೆ, 11 ಮಂದಿಗೆ ಜೀವಾವಧಿ ಶಿಕ್ಷೆ ಕಾಯಂ : Gujarat High Court Verdict

೨೦೦೮ ರ ಕರ್ಣಾವತಿಯಲ್ಲಿನ ಬಾಂಬ್‌ ಸ್ಫೋಟದ ಪ್ರಕರಣ

ಕರ್ಣಾವತಿ (ಗುಜರಾತ) – ಇಲ್ಲಿ ೨೬ ಜುಲೈ ೨೦೦೮ ರಂದು ಸರಣಿಯಾಗಿ ನಡೆದ ೨೨ ಬಾಂಬ್‌ ಸ್ಫೋಟಗಳ ಪ್ರಕರಣದಲ್ಲಿ ವಿಶೇಷ ಕಿರಿಯ ನ್ಯಾಯಾಲಯವು ೪ ವರ್ಷಗಳ ಹಿಂದೆ ನೀಡಿದ್ದ ತೀರ್ಪನ್ನು ಗುಜರಾತ ಉಚ್ಚ ನ್ಯಾಯಾಲಯವು ಕಾಯಂಗೊಳಿಸಿದೆ. ನ್ಯಾಯಾಲಯವು ೪೯ ಅಪರಾಧಿಗಳ ಪೈಕಿ ೩೮ ಅಪರಾಧಿಗಳ ಗಲ್ಲುಶಿಕ್ಷೆಯನ್ನು ಮತ್ತು ಉಳಿದ ೧೧ ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಕಾಯಂ ಆಗಿ ಉಳಿಸಿದೆ. ನ್ಯಾಯಮೂರ್ತಿ ಎ.ವೈ. ಕೋಗಜೆ ಮತ್ತು ನ್ಯಾಯಮೂರ್ತಿ ಸಮೀರ ದವೆ ಯವರ ವಿಭಾಗೀಯ ಪೀಠವು,  ೨೦೨೨ ರ ಕಿರಿಯ ನ್ಯಾಯಾಲಯದ ತೀರ್ಪಿನ ನಂತರ ದಾಖಲಾದ ಮೇಲ್ಮನವಿಗಳ ಕುರಿತು ಈ ನಿರ್ಣಯವನ್ನು ಪ್ರಕಟಿಸಿದೆ. ಗಲ್ಲುಶಿಕ್ಷೆಗೆ ಒಳಗಾದವರಲ್ಲಿ ಕನಿಷ್ಠ ೧೩ ಜನರು ಗುಜರಾತನವರು, ೮ ಜನರು ಉತ್ತರ ಪ್ರದೇಶದವರು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ತಲಾ ೫ ಜನರು, ಕೇರಳ ಮತ್ತು ಕರ್ನಾಟಕದ ತಲಾ ಇಬ್ಬರು ಹಾಗೂ ಭಾಗ್ಯನಗರದ (ಹೈದರಾಬಾದ) ಒಬ್ಬ ವ್ಯಕ್ತಿ ಶಾಮೀಲಾಗಿದ್ದಾನೆ.

​ಕರ್ಣಾವತಿ ಸರಕಾರಿ ನಾಗರಿಕ ಆಸ್ಪತ್ರೆ, ಎಲ್.ಜಿ. ಆಸ್ಪತ್ರೆ, ಬಸ್ಸುಗಳು, ಸೈಕಲ್‌ ಗಳು ಮತ್ತು ಕಾರುಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ೨೨ ಬಾಂಬ್‌ ಸ್ಫೋಟಗಳು ಸಂಭವಿಸಿದ್ದವು. ಇದರಲ್ಲಿ ೫೬ ಜನರು ಸಾವನ್ನಪ್ಪಿದ್ದರೆ ೨೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಒಟ್ಟು ೨೪ ಬಾಂಬ್‌ ಗಳ ಪೈಕಿ ಕಲೋಲ್ ಮತ್ತು ನರೋಡಾದಲ್ಲಿ ತಲಾ ಒಂದು ಬಾಂಬ್ ಸ್ಫೋಟಗೊಂಡಿರಲಿಲ್ಲ.

​೨೦೦೨ ರಲ್ಲಿ ನಡೆದ ಗೋಧ್ರಾ ಗಲಭೆಯ ನಂತರ ಪ್ರತಿಕಾರ ತೀರಿಸಿಕೊಳ್ಳಲು ಮತ್ತು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಚುನಾಯಿತರಾದ ಸರಕಾರವನ್ನು ಉರುಳಿಸಲು ಅಪರಾಧಿಗಳು ಈ ಪಿತೂರಿ ನಡೆಸಿದ್ದರು ಎಂದು ಸರಕಾರಿ ಅಭಿಯೋಜಕರು ಹೇಳಿದ್ದರು.

ಸಂಪಾದಕೀಯ ನಿಲುವು

  • ದೇಶದಲ್ಲಿ ಬಾಂಬ್‌ ಸ್ಫೋಟ ನಡೆಸಿದ ಉಗ್ರಗಾಮಿಗಳಿಗೆ ೧೮ ವರ್ಷಗಳ ನಂತರವೂ ಪ್ರತ್ಯಕ್ಷ ಶಿಕ್ಷೆಯಾಗದಿರುವುದು ಲಜ್ಜಾಸ್ಪದವಾಗಿದೆ ! ತಡವಾಗಿ ಸಿಗುವ ನ್ಯಾಯವು ಅನ್ಯಾಯವೇ ಆಗಿದೆ !
  • ಈಗ ಈ ಉಗ್ರಗಾಮಿಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಲಿದ್ದಾರೆ ಮತ್ತು ಅಲ್ಲಿ ಹಲವು ವರ್ಷಗಳ ಕಾಲ ಮೊಕದ್ದಮೆ ನಡೆಯಲಿದೆ. ಆನಂತರ ಶಿಕ್ಷೆಯಾದರೆ, ಅವರು ದಯಾ ಅರ್ಜಿಯನ್ನು ಸಲ್ಲಿಸಲಿದ್ದಾರೆ ಮತ್ತು ಅದರಲ್ಲಿ ಪುನಃ ಹಲವು ವರ್ಷಗಳು ಕಳೆಯಲಿವೆ. ಅಲ್ಲಿಯವರೆಗೆ ಅವರು ಜೀವಂತವಾಗಿ ಇರುವರೇ?