ಬಲೂಚಿಸ್ತಾನ: ಪೊಲೀಸ್ ಠಾಣೆಯ ಮೇಲೆ ದಾಳಿ; 9 ಪೊಲೀಸರ ಸಾವು, 5 ಮಂದಿ ನಾಪತ್ತೆ

ಪಾಕಿಸ್ತಾನದ ಪ್ರತಿದಾಳಿಯಲ್ಲಿ 15 ಉಗ್ರರು ಹತರಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳ ಮಾಹಿತಿ

ಕ್ವೆಟ್ಟಾ (ಬಲೂಚಿಸ್ತಾನ) – ಬಲೂಚಿಸ್ತಾನ ಪ್ರಾಂತ್ಯದ ಪೊಲೀಸ್ ಚೌಕಿಯೊಂದರ ಮೇಲೆ ನಡೆದ ದಾಳಿಯಲ್ಲಿ 9 ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 5 ಮಂದಿ ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಜಿಯಾರತ್ ಜಿಲ್ಲೆಯ ಮಾಂಗಿ ಡ್ಯಾಮ್ (ಅಣೆಕಟ್ಟು) ಪ್ರದೇಶದಲ್ಲಿರುವ ಪೊಲೀಸ್ ಠಾಣೆಯ ಮೇಲೆ ಈ ದಾಳಿ ನಡೆದಿದೆ. ಈ ದಾಳಿಯ ನಂತರ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ ಭಯೋತ್ಪಾದಕ ಸಂಘಟನೆಯ 15 ಉಗ್ರರನ್ನು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಲೂಚಿಸ್ತಾನದ ಶಾಂತಿಯನ್ನು ಹಾಳು ಮಾಡಲು ನಾವು ಯಾರಿಗೂ ಬಿಡುವುದಿಲ್ಲ. ಶಾಂತಿಯ ಶತ್ರುಗಳನ್ನು ಸಂಪೂರ್ಣವಾಗಿ ನಾಶಮಾಡುವವರೆಗೆ ಅವರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು.