ಶ್ರೀರಾಮಮಂದಿರದ ದೇಣಿಗೆ ಹಣ ಕಳ್ಳತನದ ೭೦ ಘಟನೆಗಳು ಸಿಸಿಟಿವಿಯಲ್ಲಿ ಚಿತ್ರೀಕರಣ ! : Ram Mandir Donation Theft

ಆರೋಪಿಗಳು ಜೇಬು ಮತ್ತು ಶೂಗಳಲ್ಲಿ ನೋಟುಗಳ ಕಟ್ಟುಗಳನ್ನು ಬಚ್ಚಿಡುತ್ತಿರುವುದು ಪತ್ತೆ

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮಮಂದಿರದ ದೇಣಿಗೆ ಹಣ ಕಳ್ಳತನದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿಯು ಮುನ್ನೆಲೆಗೆ ಬಂದಿದೆ. ಇದರಲ್ಲಿ ಏಪ್ರಿಲ್ ೨೭ ರಿಂದ ಜೂನ್ ೫ ರವರೆಗಿನ ಕಾಲಾವಧಿಯಲ್ಲಿ ಸಿಸಿಟಿವಿ ಚಿತ್ರೀಕರಣದಲ್ಲಿ ಸುಮಾರು ೭೦ ಅನುಮಾನಾಸ್ಪದ ಘಟನೆಗಳು ಸೆರೆಯಾಗಿವೆ. ಇದರಲ್ಲಿ ಪೊಲೀಸರು ಬಂಧಿಸಿರುವ ೮ ಆರೋಪಿಗಳು ನೋಟುಗಳ ಕಟ್ಟುಗಳನ್ನು ಜೇಬು ಮತ್ತು ಶೂಗಳಲ್ಲಿ ಬಚ್ಚಿಡುತ್ತಿರುವುದು ಕಂಡುಬಂದಿದೆ. ಮೊದಲೇ ಸಿದ್ಧಪಡಿಸಲಾಗಿದ್ದ ತಪಾಸಣಾ ವ್ಯವಸ್ಥೆಯ ಲೋಪದೋಷಗಳಿಗೆ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ನ ವಿಶ್ವಸ್ತರಾದ ಡಾ. ಅನಿಲ ಮಿಶ್ರಾ ಅವರೇ ಜವಾಬ್ದಾರರಾಗಿದ್ದಾರೆ ಎಂದು ಇದರಲ್ಲಿ ಹೇಳಲಾಗಿದೆ. ಹಾಗೆಯೇ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ್ ಅವರ ವಾಹನ ಚಾಲಕ ಟಿನ್ನೂ ಯಾವುದೇ ಆದೇಶವಿಲ್ಲದೇ ಹಣ ಎಣಿಕೆ ಕೊಠಡಿಯ ಕೀಲಿಕೈಯನ್ನು ತನ್ನ ಬಳಿ ಇಟ್ಟುಕೊಳ್ಳುತ್ತಿದ್ದನು. ಅಷ್ಟೇ ಅಲ್ಲದೆ, ಅವನು ಶಿಫಾರಸು ಮಾಡಿ ತನ್ನ ಸೋದರಳಿಯ ಮನೀಶ ಯಾದವನನ್ನು ದೇಣಿಗೆ ಹಣ ಎಣಿಕೆಯ ಕೆಲಸಕ್ಕೆ ಸೇರಿಸಿದ್ದನು.

ವಿಶೇಷ ತನಿಖಾ ತಂಡದ ವರದಿಯಲ್ಲಿನ ಕೆಲವು ಅಂಶಗಳು

. ದೇಣಿಗೆ ಹಣ ಎಣಿಕೆ ಮಾಡುವ ಸಂಪೂರ್ಣ ಪ್ರಕ್ರಿಯೆಯೇ ದೋಷಪೂರಿತವಾಗಿತ್ತು. ಡಾ. ಅನಿಲ ಮಿಶ್ರಾ ಅವರು ಆರ್ಥಿಕ ವ್ಯವಹಾರ ಮತ್ತು ನಗದು ಸಂಗ್ರಹಣಾ ನಿರ್ವಹಣೆಯ ಮೇಲೆ ನಿಗಾ ಇಟ್ಟಿದ್ದರು. ಬ್ಯಾಂಕಿನೊಂದಿಗೆ ನಿರ್ಧರಿಸಲಾದ ಪ್ರಮಾಣಿತ ಕಾರ್ಯಾಚರಣಾ ವಿಧಾನ ಮತ್ತು ಒಪ್ಪಂದದ ಸೂತ್ರಗಳನ್ನು ಸಿದ್ಧಪಡಿಸುವಲ್ಲಿಯೂ ಅವರ ಪಾತ್ರ ಪ್ರಮುಖವಾಗಿತ್ತು.

. ಹಣ ಎಣಿಕೆ ಮಾಡುವ ಸಿಬ್ಬಂದಿಗಳ ತಪಾಸಣೆ ನಡೆಸಲಾಗುತ್ತಿಲ್ಲ ಎಂಬ ಮಾಹಿತಿಯನ್ನು ಅನಿಲ ಮಿಶ್ರಾ ಅವರಿಗೆ ಆಂತರಿಕ ಮಾಧ್ಯಮಗಳ ಮೂಲಕ ನೀಡಲಾಗಿತ್ತು; ಆದರೆ ಅದರ ನಂತರವೂ ಅವರು ಯಾವುದೇ ಪರಿಣಾಮಕಾರಿ ಲಿಖಿತ ಆದೇಶವನ್ನು ಹೊರಡಿಸಲಿಲ್ಲ. ಮೊದಲೇ ನಿರ್ಧರಿಸಲಾಗಿದ್ದ ತಪಾಸಣಾ ವ್ಯವಸ್ಥೆಯಲ್ಲಿಯೂ ಅನಿಲ ಮಿಶ್ರಾ ಅವರಿಂದಾಗಿಯೇ ನಿರ್ಲಕ್ಷ್ಯ ವಹಿಸಲಾಯಿತು.

. ಸಿಬ್ಬಂದಿಗಳ ಬಯೋಮೆಟ್ರಿಕ್ ಹಾಜರಾತಿ, ನಿಗದಿತ ಸಮವಸ್ತ್ರ, ವೈಯಕ್ತಿಕ ವಸ್ತುಗಳನ್ನು ಕೊಠಡಿಯೊಳಗೆ ಕೊಂಡೊಯ್ಯುವುದಕ್ಕೆ ನಿಷೇಧ, ದೇಣಿಗೆ ಪೆಟ್ಟಿಗೆಗಳು, ಅದರಿಂದ ತೆಗೆದ ಹಣ-ನೋಟುಗಳ ದಾಖಲಾತಿ, ದೈನಂದಿನ ವರದಿಯಂತಹ ವ್ಯವಸ್ಥೆಗಳನ್ನು ಜಾರಿಗೆ ತರಲು ದೃಢವಾದ ಕ್ರಮಗಳನ್ನು ಕೈಗೊಳ್ಳಲಿಲ್ಲ.