ರಾಜ್ಯದಾದ್ಯಂತ ಚುರುಕಾದ ಮುಂಗಾರು: ನದಿಗಳ ಮಟ್ಟ ಏರಿಕೆ

ಬೆಂಗಳುರು – ರಾಜ್ಯದ ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಚುರುಕಾಗಿದೆ. ಕೃಷ್ಣಾ ನದಿಗೆ 77 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವ್ಯಾಪ್ತಿಯಲ್ಲಿ ಎಂಟು ಸೇತುವೆಗಳು ಮುಳುಗಡೆಯಾಗಿವೆ. ಹಿಡಕಲ್ ಮತ್ತು ನವಿಲುತೀರ್ಥ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ

ಶಿವಮೊಗ್ಗದ ಆಗುಂಬೆಯಲ್ಲಿ ಅತಿ ಹೆಚ್ಚು 9.8 ಸೆಂ.ಮೀ ಮಳೆ ದಾಖಲಾಗಿದೆ. ತುಂಗಾ ಜಲಾಶಯ ಭರ್ತಿಯಾಗಿರುವುದರಿಂದ ನೀರನ್ನು ನದಿಗೆ ಬಿಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಪ್ರವಾಸಿ ತಾಣಗಳಲ್ಲಿ ನೀರಿಗೆ ಇಳಿಯುವುದನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನಲ್ಲಿಯೂ ಧಾರಾಕಾರ ಮಳೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲವು ಕಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಹಾವೇರಿಯಲ್ಲಿ ಮೋಡ ಬಿತ್ತನೆ

ಹಾವೇರಿ ಜಿಲ್ಲೆಯಲ್ಲಿ ಸಂಸದರು ಮತ್ತು ಶಾಸಕರ ಸಹಕಾರದೊಂದಿಗೆ ಮೋಡ ಬಿತ್ತನೆ ಪ್ರಕ್ರಿಯೆ ಆರಂಭವಾಗಿದೆ. ಸೋಮವಾರ ವಿಶೇಷ ವಿಮಾನದ ಮೂಲಕ ಒಂದು ಗಂಟೆ ಹದಿನೆಂಟು ನಿಮಿಷಗಳ ಕಾಲ ಹಾವೇರಿಯ ವಿವಿಧ ತಾಲ್ಲೂಕುಗಳ ಮೇಲೆ ಮೋಡ ಬಿತ್ತನೆ ಮಾಡಲಾಗಿದೆ.

ಮಳೆಯಿಂದಾದ ಹಾನಿ ಮತ್ತು ಅವಘಡಗಳು

ತೀರ್ಥಹಳ್ಳಿಯಲ್ಲಿ ಪಂಪ್‌ಸೆಟ್ ಪರಿಶೀಲಿಸಲು ಹೋದ ರೈತ ರಾಮಪ್ಪ ಅವರು ಮಾಲತಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಉಡುಪಿಯ ಶಾಲೆಯೊಂದರ ಚಾವಣಿಯ ಹಂಚು ಬಿದ್ದು ವಿದ್ಯಾರ್ಥಿನಿಯೊಬ್ಬಳಿಗೆ ಗಾಯವಾಗಿದೆ. ಚಿಕ್ಕಮಗಳೂರಿನಲ್ಲಿ ಹೆದ್ದಾರಿಯ ಬಳಿ ಭೂಕುಸಿತ ಸಂಭವಿಸಿ ರಸ್ತೆ ಸಂಪರ್ಕಕ್ಕೆ ಅಡ್ಡಿಯಾಗಿತ್ತು.