ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು! – ರಾಷ್ಟ್ರೀಯ ಸ್ವಯಂಸೇವಕ ಸಂಘ

ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ; ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಲುವು !

​ಅಯೋಧ್ಯಾ (ಉತ್ತರಪ್ರದೇಶ) – ಶ್ರೀರಾಮ ಮಂದಿರದ ದೇಣಿಗೆ ಪೆಟ್ಟಿಗೆಗಳಿಂದ ನಿಧಿ ಕಳ್ಳತನವಾಗಿರುವುದು ದುರ್ದೈವದ ಸಂಗತಿಯಾಗಿದೆ. ಇದರಿಂದ ರಾಮಭಕ್ತರ ಭಾವನೆಗಳು ಮತ್ತು ಶ್ರದ್ಧೆಗೆ ಧಕ್ಕೆಯಾಗಿದೆ. ವಿಶೇಷ ತನಿಖಾ ತಂಡದ ತನಿಖೆಯಲ್ಲಿ ಯಾರು ತಪ್ಪಿತಸ್ಥರೆಂದು ಕಂಡುಬರುತ್ತಾರೋ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೊದಲ ಬಾರಿಗೆ ತನ್ನ ನಿಲುವನ್ನು ಬಹಿರಂಗಪಡಿಸಿದೆ.

​ಹಿಂದುತ್ವ ವಿರೋಧಿ ಶಕ್ತಿಗಳ ಮತ್ತು ಸಮಾಜಕ್ಕೆ ಕೆಟ್ಟ ಹೆಸರು ತರಲು ಯತ್ನಿಸುವವರ ಷಡ್ಯಂತ್ರವನ್ನು ಹತ್ತಿಕ್ಕಿ!

ಸಂಘದ ಸರ ಕಾರ್ಯವಾಹ (ಮಹಾನಿರ್ದೇಶಕ) ಶ್ರೀ. ದತ್ತಾತ್ರೇಯ ಹೊಸಬಾಳೆ ಅವರು ಮಾತನಾಡಿ, ರಾಮಭಕ್ತರ ದೀರ್ಘ ಹೋರಾಟ, ಸಮರ್ಪಣೆ ಮತ್ತು ತ್ಯಾಗದಿಂದ ಶ್ರೀರಾಮ ಮಂದಿರವನ್ನು ನಿರ್ಮಿಸಲಾಗಿದೆ. ಶ್ರೀರಾಮ ಮಂದಿರ ಇಂದು ಹಿಂದೂ ಸಮಾಜಕ್ಕೆ ಶ್ರದ್ಧೆಯ ಒಂದು ಪ್ರಮುಖ ಕೇಂದ್ರವಾಗಿದೆ. ಇಲ್ಲಿನ ದೇಣಿಗೆ ಪೆಟ್ಟಿಗೆಯ ಹಣದ ಕಳ್ಳತನದ ಘಟನೆಯಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ. ನ್ಯಾಸದ (ಟ್ರಸ್ಟ್) ವಿನಂತಿಯ ಮೇರೆಗೆ ಉತ್ತರಪ್ರದೇಶ ಸರಕಾರವು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಪ್ರಾರಂಭಿಸಿದೆ. ತನಿಖೆಯಲ್ಲಿ ಯಾರು ತಪ್ಪಿತಸ್ಥರೆಂದು ಕಂಡುಬರುತ್ತಾರೋ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ಆಡಳಿತ ಮತ್ತು ಕಾರ್ಯಕಲಾಪಗಳಲ್ಲಿನ ಎಲ್ಲಾ ಲೋಪದೋಷಗಳನ್ನು ಟ್ರಸ್ಟ್ ದೂರ ಮಾಡಲಿದೆ ಎಂಬ ಆಶಯ!

ಶ್ರೀ. ದತ್ತಾತ್ರೇಯ ಹೊಸಬಾಳೆ ಅವರು ಮುಂದುವರಿದು ಮಾತನಾಡುತ್ತಾ, ಹಿಂದೂ ಸಮಾಜ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶಯವೇನೆಂದರೆ, ಮಂದಿರ ಟ್ರಸ್ಟ್ ಈ ಗಂಭೀರ ಘಟನೆಯನ್ನು ಪರಿಗಣಿಸಿ ಆಡಳಿತ ಮತ್ತು ಕಾರ್ಯಕಲಾಪಗಳಲ್ಲಿನ ಎಲ್ಲಾ ಲೋಪದೋಷಗಳನ್ನು ಸರಿಪಡಿಸಲಿದೆ. ಈ ಮೂಲಕ ರಾಮಭಕ್ತರ ಮಂದಿರದ ಮೇಲಿರುವ ಶ್ರದ್ಧೆಯು ಅಖಂಡವಾಗಿ ಉಳಿಯಲಿದೆ. ಸದ್ಯದ ಗೊಂದಲ ಮತ್ತು ಸಂದಿಗ್ಧತೆ ಕೊನೆಗೊಳ್ಳಬೇಕು. ಈ ಕಠಿಣ ಸಮಯದಲ್ಲಿ ಸಂಯಮ ಮತ್ತು ಧೈರ್ಯ ಕಾಪಾಡಿಕೊಳ್ಳುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಲ್ಲಾ ಹಿಂದೂಗಳಿಗೆ ಕರೆ ನೀಡುತ್ತಿದೆ. ಈ ದುರ್ದೈವದ ಘಟನೆಯ ದುರುಪಯೋಗವನ್ನು ಪಡೆದುಕೊಂಡು ಹಿಂದುತ್ವ ವಿರೋಧಿ ಶಕ್ತಿಗಳು ಮತ್ತು ಸಮಾಜಕ್ಕೆ ಕೆಟ್ಟ ಹೆಸರು ತರಲು ಯತ್ನಿಸುವ ಘಟಕಗಳ ಷಡ್ಯಂತ್ರವನ್ನು ಹತ್ತಿಕ್ಕಬೇಕು ಎಂದು ಅವರು ಹೇಳಿದರು.