ಫಲಕ ಪ್ರಸಿದ್ಧಿಯ ಮಾಧ್ಯಮದಿಂದ ಕರ್ನಾಟಕ ರಾಜ್ಯದಲ್ಲಿ ನಡೆದ ಪರಿಣಾಮಕಾರಿ ಧರ್ಮಪ್ರಸಾರ !

ಹಿಂದೂ ಜನಜಾಗೃತಿ ಸಮಿತಿಯು ವಿವಿಧ ಉಪಕ್ರಮಗಳ ಮೂಲಕ ಹಿಂದೂಗಳಲ್ಲಿ ಸ್ವಧರ್ಮದ ಕುರಿತು ಜಾಗೃತಿ ಮೂಡಿಸಲು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿದೆ. ಉದಾ. ಧರ್ಮಶಿಕ್ಷಣ ವರ್ಗ, ಸಾಧನಾ ಸತ್ಸಂಗ, ಆಂದೋಲನಗಳು, ಪ್ರವಚನಗಳು, ಗ್ರಂಥ ಪ್ರದರ್ಶನಗಳು ಇತ್ಯಾದಿ. ಇವೆಲ್ಲಾ ಉಪಕ್ರಮಗಳಲ್ಲಿ ಹಿಂದೂ ಸಮಾಜದ ಗಮನ ಸೆಳೆಯುವ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಉಪಕ್ರಮವೆಂದರೆ ‘ಫಲಕ ಪ್ರಸಿದ್ಧಿ’ !

ಶ್ರೀ. ಗುರುಪ್ರಸಾದ ಗೌಡ

ಹಿಂದೂ ಜನಜಾಗೃತಿ ಸಮಿತಿಯು ಫಲಕ ಪ್ರಸಿದ್ಧಿಯ ಉಪಕ್ರಮಗಳ ಮೂಲಕ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯವನ್ನು ಮಾಡುತ್ತಿರುವಾಗ, ಸಮಾನ ಮನಸ್ಕ ಸಂಸ್ಥೆಯಾದ ಸನಾತನ ಸಂಸ್ಥೆಯ ಗ್ರಂಥಗಳು, ನಿಯತಕಾಲಿಕೆಗಳು ಹಾಗೂ ಸಾತ್ತ್ವಿಕ ಉತ್ಪನ್ನಗಳ ಮಾಹಿತಿಯನ್ನೂ ಜನರ ವರೆಗೆ ತಲುಪಿಸುತ್ತದೆ. ಹಿಂದೂ ಧರ್ಮದ ವಿವಿಧ ಆಚಾರಗಳು, ಹಬ್ಬ-ಹರಿದಿನಗಳು, ವಿಶೇಷದಿನಗಳು ಹಾಗೂ ಧರ್ಮಶಾಸ್ತ್ರದ ಮಾಹಿತಿಯನ್ನು ಕಪ್ಪು ಹಲಗೆಯಲ್ಲಿ ಸರಳ ಮತ್ತು ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಬರೆಯಲಾಗುತ್ತದೆ. ಈ ಮಾಹಿತಿಯನ್ನು ಓದಿ ಧರ್ಮಜಾಗೃತಿ ಆಗುತ್ತಿರುವುದು ಕಂಡುಬರುತ್ತಿದೆ. ವಿವಿಧ ದೇವಸ್ಥಾನಗಳು, ಭಜನಾ ಮಂಡಳಿಗಳು, ವೃತ್ತಗಳು ಮುಂತಾದ ಸ್ಥಳಗಳಲ್ಲಿ ಹಾಕಲಾದ ಈ ಫಲಕಗಳನ್ನು ಓದಲು ಅನೇಕ ಜಿಜ್ಞಾಸುಗಳು ಬರುತ್ತಾರೆ. ಅವರಿಗೆ ಈ ಮಾಹಿತಿಯಿಂದ ಲಾಭವಾಗುತ್ತಿದೆ. ಅವರು ಆ ಮಾಹಿತಿಯನ್ನು ಕೃತಿಯಲ್ಲಿ ತರುತ್ತಿದ್ದಾರೆ ಹಾಗೂ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಫಲಕ ಪ್ರಸಿದ್ಧಿ ಮಾಡುವಾಗ ಬಂದಿರುವ ವೈಶಿಷ್ಟ್ಯಪೂರ್ಣ ಅನುಭವಗಳನ್ನು ಮುಂದೆ ನೀಡಲಾಗಿದೆ.

೧. ಜಿಜ್ಞಾಸುಗಳು ಕೇವಲ ಫಲಕ ಓದಲೆಂದೇ ದೇವಸ್ಥಾನಕ್ಕೆ ಬರುವುದು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಒಬ್ಬ ಜಿಜ್ಞಾಸು ಫಲಕದಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ, “ನಾನು ಅನೇಕ ಬಾರಿ ಕೇವಲ ಫಲಕವನ್ನು ಓದಲೆಂದೇ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು ಫಲಕದಲ್ಲಿರುವ ಎಲ್ಲಾ ಮಾಹಿತಿಯನ್ನು ಓದಿ ಅದನ್ನು ಆಚರಣೆಗೆ ತರಲು ಪ್ರಯತ್ನಿಸುತ್ತೇನೆ”, ಎಂದರು ಅವರ ಈ ಜಿಜ್ಞಾಸೆಯಿಂದಾಗಿ ಅವರು ಸಾಧನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ತಿಳಿದುಕೊಂಡರು.

೨. ಧರ್ಮಾಚರಣೆ

ಫಲಕದಲ್ಲಿ ಬರೆದಿರುವ ಧರ್ಮಾಚರಣೆಯ ಸೂಚನೆಗಳನ್ನು ಓದಿ, ಅವುಗಳನ್ನು ಆಚರಣೆಗೆ ತರಲು ಸಾಧ್ಯವಾಗುತ್ತಿದೆ ಎಂದು ಜಿಜ್ಞಾಸುಗಳು ಆನಂದದಿಂದ ಹೇಳುತ್ತಾರೆ. ಅನೇಕ ದೇವಸ್ಥಾನಗಳಲ್ಲಿ ಇದು ಅನುಭವಕ್ಕೆ ಬರುತ್ತಿದೆ.

೩. ಸೇವಾಕೇಂದ್ರಕ್ಕೆ ಅರ್ಪಣೆ ನೀಡುವುದು

ಉಡುಪಿ ಜಿಲ್ಲೆಯ ಕಾರ್ಕಳದ ಬೈಲೂರು ಮಾರಿಗುಡಿ ದೇವಸ್ಥಾನದಲ್ಲಿ ಸಾಧಕರಾದ ಶ್ರೀ. ಬಾಲಕೃಷ್ಣ ನಾಯಕ ಇವರು ಫಲಕವನ್ನು ಬರೆಯುತ್ತಾರೆ. ಅವರು ಫಲಕದಲ್ಲಿ ಮಕರ ಸಂಕ್ರಾಂತಿಯ ದಾನದ ಮಹತ್ವವನ್ನು ಬರೆದಿದ್ದರು. ಅದನ್ನು ಓದಿ ಒಬ್ಬ ಧರ್ಮಪ್ರೇಮಿ ಫಲಕದಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ, ಮಕರಸಂಕ್ರಾಂತಿಯ ನಿಮಿತ್ತ ಬೆಲ್ಲವನ್ನು ಖರೀದಿಸಿ ಸೇವಾಕೇಂದ್ರಕ್ಕೆ ಕಳುಹಿಸಿಕೊಟ್ಟರು.

೪. ಗ್ರಂಥ ಮತ್ತು ಉತ್ಪಾದನೆಗಳನ್ನು ಖರೀದಿಸುವುದು ಹಾಗೂ ‘ಸನಾತನ ಪ್ರಭಾತ’ದ ಚಂದಾದಾರರಾಗುವುದು

೪ ಅ. ಕುಶಾಲನಗರ, ಕೊಡಗು ಜಿಲ್ಲೆ

೧. ಇಲ್ಲಿ ಒಬ್ಬ ಸಾಧಕರ ದಂತ ಚಿಕಿತ್ಸಾಲಯದಲ್ಲಿ ಹಾಕಲಾಗಿದ್ದ ಫಲಕದಿಂದಾಗಿ ಇಬ್ಬರು ಧರ್ಮಪ್ರೇಮಿಗಳು ‘ಸನಾತನ ಪ್ರಭಾತ’ ನಿಯತಕಾಲಿಕೆಯ ಚಂದಾದಾರರಾದರು.

೨. ಅನೇಕ ಜನರು ಫಲಕದ ಛಾಯಾಚಿತ್ರವನ್ನು ತೆಗೆದುಕೊಂಡು ಅದರಲ್ಲಿರುವ ಮಾಹಿತಿಯನ್ನು ಪ್ರಶಂಸಿಸುತ್ತಾರೆ.

೩. ಒಂದು ಉಪಹಾರಗೃಹದಲ್ಲಿ (ಹೋಟೆಲ್‌ನಲ್ಲಿ) ಹಾಕಿದ್ದ ಫಲಕವನ್ನು ಓದಿ ಅನೇಕ ಜಿಜ್ಞಾಸುಗಳು ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಖರೀದಿಸಿದರು. ಒಬ್ಬ ಜಿಜ್ಞಾಸು ಗ್ರಂಥಗಳನ್ನು ಖರೀದಿಸಿ ಅವುಗಳನ್ನು ಶಾಲೆಗಳಲ್ಲಿ ವಿತರಿಸಿದರು.

೪ ಆ. ಕಾರವಾರ, ಉತ್ತರ ಕನ್ನಡ ಜಿಲ್ಲೆ : ಇಲ್ಲಿ ಸೀತಾ ನಾಯಕ ಹೆಸರಿನ ಜಿಜ್ಞಾಸು ಫಲಕವನ್ನು ನೋಡಿ ಸಾಧಕರನ್ನು ಸಂಪರ್ಕಿಸಿದರು. ಅವರು ಸಂಬಂಧಪಟ್ಟ ಗ್ರಂಥವನ್ನು ಖರೀದಿಸಿದರು ಮತ್ತು ಪ್ರತಿ ವಾರ ದೇವಸ್ಥಾನಕ್ಕೆ ಬಂದು ಫಲಕವನ್ನು ಓದತೊಡಗಿದರು. ಒಮ್ಮೆ ಫಲಕದಲ್ಲಿ ಅಗ್ನಿಹೋತ್ರದ ಬಗ್ಗೆ ಮಾಹಿತಿ ಬರೆಯಲಾಗಿತ್ತು. ಅದನ್ನು ಓದಿ ಅವರು ಸನಾತನದ ‘ಅಗ್ನಿಹೋತ್ರ’ ಗ್ರಂಥವನ್ನು ಖರೀದಿಸಿ ಮನೆಯಲ್ಲಿ ಅಗ್ನಿಹೋತ್ರವನ್ನು ಪ್ರಾರಂಭಿಸಿದರು. ಕೆಲವು ದಿನಗಳ ನಂತರ ಅವರು, “ಅಗ್ನಿಹೋತ್ರ ಮಾಡುವುದರಿಂದ ಮನೆಯ ವಾತಾವರಣ ಅತ್ಯಂತ ಸಕಾರಾತ್ಮಕ ವಾಗಿದೆ” ಎಂದು ತಿಳಿಸಿದರು.

೪ ಇ. ಮುರುಡೇಶ್ವರ, ಉತ್ತರ ಕನ್ನಡ ಜಿಲ್ಲೆ : ಇಲ್ಲಿ ಒಬ್ಬ ಜಿಜ್ಞಾಸು ಫಲಕವನ್ನು ಓದಿ ‘ಲವ್ ಜಿಹಾದ್’ ಮತ್ತು ‘ಅಧ್ಯಯನವನ್ನು ಹೇಗೆ ಮಾಡಬೇಕು ?’ ಎಂಬ ಗ್ರಂಥಗಳನ್ನು ಖರೀದಿಸಿದರು.

೪ ಈ. ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ : ಇಲ್ಲಿನ ಆಂಜನೇಯಸ್ವಾಮಿ ದೇವಸ್ಥಾನದ ಫಲಕವನ್ನು ನೋಡಿ ಒಬ್ಬ ಜಿಜ್ಞಾಸು ಸನಾತನದ ಆಕಾಶದೀಪ ಮತ್ತು ‘ಧರ್ಮಶಿಕ್ಷಣ ಫಲಕ’ ಗ್ರಂಥಕ್ಕಾಗಿ ಬೇಡಿಕೆ ನೀಡಿದರು.

೪ ಉ. ಸಾತ್ತ್ವಿಕ ಉತ್ಪಾದನೆಗಳನ್ನು ಖರೀದಿಸುವುದು : ಫಲಕದಲ್ಲಿ ಬರೆದಿದ್ದ ವಾಸ್ತುಶುದ್ಧಿಯ ಮಾಹಿತಿಯ ಲಾಭವನ್ನು ಪಡೆದುಕೊಂಡು ಕೆಲವು ಜಿಜ್ಞಾಸುಗಳು ಸನಾತನ ಕರ್ಪೂರ, ಊದುಬತ್ತಿ, ಗೋಮೂತ್ರ-ಅರ್ಕ ಇತ್ಯಾದಿ ಸಾಹಿತ್ಯಗಳನ್ನು ಸನಾತನದ ಪ್ರದರ್ಶನದಿಂದ ಖರೀದಿಸಿದರು ಮತ್ತು ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ಪಡೆದುಕೊಂಡರು.

೫. ಧರ್ಮಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳುವುದು

ಬಾದಾಮಿ (ಬಾಗಲಕೋಟೆ ಜಿಲ್ಲೆ)ಯಲ್ಲಿ ಫಲಕವನ್ನು ಓದಿ ಧರ್ಮಪ್ರೇಮಿಗಳು, “ಇಂತಹ ಫಲಕಗಳನ್ನು ಧಾರಾಳವಾಗಿ ಹಲವು ಸ್ಥಳಗಳಲ್ಲಿ ಹಾಕಿ” ಎಂದು ಹೇಳಿದರು. ಇದರಿಂದಾಗಿ ಮೊದಲು ೨ ಫಲಕಗಳನ್ನು ಬರೆಯುತ್ತಿದ್ದ ಧರ್ಮಪ್ರೇಮಿಗಳು ಈಗ ೬ ಫಲಕಗಳನ್ನು ಬರೆಯಲು ಪ್ರಾರಂಭಿಸಿದರು. ಫಲಕದ ವಿಷಯಗಳನ್ನು ಓದಿ ೬ ಜಿಜ್ಞಾಸುಗಳು ಧರ್ಮಶಿಕ್ಷಣ ವರ್ಗಕ್ಕೆ ಬರಲು ಆರಂಭಿಸಿದರು.

ನಿಯಮಿತವಾಗಿ ಫಲಕ ಬರೆಯುವ ಸಾಧಕರಿಗೆ ದೇವಸ್ಥಾನ ಸಮಿತಿಯಿಂದ ಸತ್ಕಾರ

೧. ಶ್ರೀ ಪ್ರವೀಣ ಬೆನ್ನೂರ, ಗದಗ

‘ಇವರು ತಮ್ಮ ಮನೆಯ ಹತ್ತಿರದ ದೇವಸ್ಥಾನದಲ್ಲಿ ನಿಯಮಿತವಾಗಿ ಫಲಕವನ್ನು ಬರೆದು ಧರ್ಮಶಾಸ್ತ್ರದ ವಿವಿಧ ವಿಷಯಗಳ ಮಾಹಿತಿಯನ್ನು ಸಮಾಜಕ್ಕೆ ತಲುಪಿಸುತ್ತಾರೆ. ಈ ಫಲಕವನ್ನು ಓದಿ ದೇವಸ್ಥಾನಕ್ಕೆ ಬರುವ ಭಕ್ತರು ಅದರಂತೆ ಆಚರಣೆಯನ್ನೂ ಮಾಡುತ್ತಾರೆ. ಈ ಸೇವೆಯಿಂದ ಪ್ರಭಾವಿತರಾಗಿ ದೇವಸ್ಥಾನ ಸಮಿತಿಯವರು ಹನುಮಾನ ಜಯಂತಿಯ ಕಾರ್ಯಕ್ರಮದಲ್ಲಿ ಶ್ರೀ. ಪ್ರವೀಣ ಬೆನ್ನೂರ ಅವರನ್ನು ಸತ್ಕರಿಸಿದರು.

೨. ಶ್ರೀ. ಆಕಾಶ ಮೇದಾರ, ನಿಡಗುಂದಿ, ಬಾಗಲಕೋಟೆ

ಇವರು ಮಾರುತಿ ದೇವಸ್ಥಾನದಲ್ಲಿ ಫಲಕವನ್ನು ಬರೆಯುತ್ತಾರೆ. ಭಕ್ತರು ಆ ದೇವಸ್ಥಾನದ ಅರ್ಚಕರಿಗೆ, “ಈ ಫಲಕದಿಂದ ನಮಗೆ ತುಂಬಾ ಉಪಯುಕ್ತ ಮಾಹಿತಿ ಸಿಗುತ್ತದೆ ಎಂದು ಹೇಳಿದರು. ಇದರಿಂದ ಆನಂದಿತರಾದ ಅರ್ಚಕರು ಶ್ರೀ. ಆಕಾಶ ಮೇದಾರ ಅವರಿಗೆ ಶಾಲು ನೀಡಿ ಸತ್ಕರಿಸಿದರು.

– ಶ್ರೀ. ಗುರುಪ್ರಸಾದ ಗೌಡ (೧೬.೩.೨೦೨೬)

೬. ದೇವಸ್ಥಾನದ ಅರ್ಚಕರೇ ಫಲಕ ಬರೆಯುವ ಸೇವೆಯನ್ನು ಸ್ವೀಕರಿಸುವುದು

ತುಮಕೂರು ಜಿಲ್ಲೆಯ ಸೋಮೇಶ್ವರ ದೇವಸ್ಥಾನದಲ್ಲಿ ಸಾಧಕರು ಫಲಕವನ್ನು ಬರೆಯುತ್ತಿದ್ದರು. ದೇವಸ್ಥಾನದ ಅರ್ಚಕರಿಗೆ ಆ ವಿಷಯಗಳು ತುಂಬಾ ಇಷ್ಟವಾದವು ಮತ್ತು ಮುಂದೆ ಅವರೇ ಸ್ವತಃ ಫಲಕ ಬರೆಯುವ ಸೇವೆಯನ್ನು ವಹಿಸಿಕೊಂಡರು. ಈ ಸೇವೆಯನ್ನು ಮಾಡುವಾಗ ಅವರಿಗೆ ಅಪಾರ ಆನಂದ ಸಿಗುತ್ತಿದೆ.

೭. ದೇವಸ್ಥಾನದ ಅರ್ಚಕರು ಫಲಕಕ್ಕೆ ಕುಂಕುಮ ಹಚ್ಚಿ ಆರತಿ ಮಾಡುವುದು

ಬೆಳಗಾವಿ ಜಿಲ್ಲೆಯ ರಾಮದುರ್ಗದ ಒಂದು ದೇವಸ್ಥಾನದ ಫಲಕವನ್ನು ನೋಡಿ ಅರ್ಚಕರು ಆ ಫಲಕಕ್ಕೆ ಕುಂಕುಮ ಹಚ್ಚಿ ಆರತಿ ಮಾಡಿದರು ಮತ್ತು ‘ಈ ಫಲಕವನ್ನು ಪ್ರತಿ ವಾರ ತಪ್ಪದೇ ಹಾಕಿ’, ಎಂದು ಹೇಳಿದರು.

ಮೇಲಿನ ಎಲ್ಲಾ ಉದಾಹರಣೆಗಳಿಂದ ಭಗವಂತನಿಗೆ ಏನೂ ಅಸಾಧ್ಯವಿಲ್ಲ ಎಂಬುದು ಅರಿವಿಗೆ ಬರುತ್ತದೆ. ಧರ್ಮಪ್ರಸಾರದ ಉದ್ದೇಶದಿಂದ ಕೇವಲ ಒಂದು ಫಲಕದ ಮಾಧ್ಯಮದ ಮೂಲಕ ಗುರುಗಳು ಜಿಜ್ಞಾಸುಗಳನ್ನು ಹುಡುಕಿ ಅವರನ್ನು ಧರ್ಮಕಾರ್ಯಕ್ಕೆ ಜೋಡಿಸುತ್ತಿದ್ದಾರೆ. ಒಂದು ಫಲಕವು ದಿನದ ೨೪ ಗಂಟೆಯೂ ಒಬ್ಬ ಪೂರ್ಣಾವಧಿ ಸಾಧಕನಂತೆ ಧರ್ಮಪ್ರಸಾರವನ್ನು ಮಾಡುತ್ತದೆ ಮತ್ತು ಅನೇಕ ಜಿಜ್ಞಾಸುಗಳನ್ನು ಧರ್ಮಾಚರಣೆಗೆ ಪ್ರೇರೇಪಿಸುತ್ತದೆ. ಗುರುಗಳು ಕಾಲಾನುಸಾರ ಈ ಅತ್ಯಂತ ಸರಳ ಮತ್ತು ಅಲ್ಪ ವೆಚ್ಚದ ಪರಿಣಾಮಕಾರಿ ಮಾಧ್ಯಮವನ್ನು ಸಾಧಕರಿಗಾಗಿ ಲಭ್ಯವಾಗುವಂತೆ ಮಾಡಿದ್ದಾರೆ. ‘ಈ ಮಾಧ್ಯಮದಿಂದ ಗರಿಷ್ಠ ಜಿಜ್ಞಾಸುಗಳಿಗೆ ಲಾಭವಾಗಲಿ ಮತ್ತು ಅವರೆಲ್ಲರೂ ಸಾಧಕರಾಗಲಿ’, ಎಂದು ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ. ಅವರ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳು !

– ಶ್ರೀ. ಗುರುಪ್ರಸಾದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೪ ವರ್ಷ), ಹುಬ್ಬಳ್ಳಿ. (೧೬.೩.೨೦೨೬)