ಪ್ರಖರ ಹಿಂದುತ್ವನಿಷ್ಠ ಮುಖಂಡ ಗೌತಮ್ ಖಟ್ಟರ್ ಅವರಿಗೆ ಮಾರಿಷಸ್ ಪ್ರವಾಸ ಮಾಡಲು ಅನುಮತಿ !

  • ಫ್ರಾನ್ಸಿಸ್ ಕ್ಸೇವಿಯರ್ ಅವರನ್ನು ಕಥಿತವಾಗಿ ಅವಮಾನಿಸಿದ ಪ್ರಕರಣ

  • ಏಪ್ರಿಲ್‌ನಲ್ಲಿ ಗೋವಾ ರಾಜ್ಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವಮಾನ ಮಾಡಿದ ಆರೋಪದ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ

ವಾಸ್ಕೋ (ಗೋವಾ) – ಇಲ್ಲಿನ ಪ್ರಥಮ ದರ್ಜೆ ನ್ಯಾಯಾಧೀಶರು ಒಂದು ಮಹತ್ವದ ಆದೇಶದಲ್ಲಿ ಪ್ರಖರ ಹಿಂದುತ್ವನಿಷ್ಠ ಮುಖಂಡ ಗೌತಮ್ ಖಟ್ಟರ್ ಅವರಿಗೆ ಮಾರಿಷಸ್‌ನ ಅಂತರರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಉಪನ್ಯಾಸಕರಾಗಿ ಭಾಗವಹಿಸಲು ಅನುಮತಿ ನೀಡಿದ್ದಾರೆ. ಜೂನ್ 18 ರಿಂದ 21 ರವರೆಗಿನ ಅವಧಿಗೆ ಕೋರಲಾಗಿದ್ದ ಅನುಮತಿಗೆ ಸಮ್ಮತಿಸಿದ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿದೆ. ಖಟ್ಟರ್ ವಿರುದ್ಧ ಫ್ರಾನ್ಸಿಸ್ ಕ್ಸೇವಿಯರ್ ಅವರನ್ನು ಅವಮಾನಿಸಿದ ಪ್ರಕರಣದಲ್ಲಿ ಅಪರಾಧ ತನಿಖೆ ನಡೆಯುತ್ತಿದೆ. ಈ ಕುರಿತು ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ, ‘ಕೇವಲ ಆರೋಪಿಯಾಗಿದ್ದಾರೆ ಎಂದಮಾತ್ರಕ್ಕೆ ಯಾರದೇ ವಿದೇಶ ಪ್ರವಾಸವನ್ನು ತಡೆಯಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು ಖಟ್ಟರ್ ಅವರಿಗೆ ಸಮಾಧಾನ ನೀಡಿದೆ. ಈ ಪ್ರಕರಣದಲ್ಲಿ ಖಟ್ಟರ್ ಪರವಾಗಿ ವಕೀಲ ನಾಗೇಶ್ ಜೋಶಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ಏನಿದು ಪ್ರಕರಣ?

ಏಪ್ರಿಲ್ 18 ರಂದು ವಾಸ್ಕೋದ ತಿಲಕ್ ಮೈದಾನ, ಖರೆವಾಡೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಉಪಸ್ಥಿತರಿದ್ದ ಗೌತಮ್ ಖಟ್ಟರ್ ಅವರು ಕಥಿತವಾಗಿ ಫ್ರಾನ್ಸಿಸ್ ಕ್ಸೇವಿಯರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಇದರ ಮೇರೆಗೆ ಏಪ್ರಿಲ್ 19 ರಂದು ವಾಸ್ಕೋ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 44/2026 ರ ಅಡಿಯಲ್ಲಿ ‘ಭಾರತೀಯ ನ್ಯಾಯ ಸಂಹಿತ 2023’ ರ ಸೆಕ್ಷನ್ 299 ಮತ್ತು 196 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಮುಂದಿನ ತನಿಖೆಯನ್ನು ನಂತರ ಅಪರಾಧ ತನಿಖಾ ಶಾಖೆಗೆ ಒಪ್ಪಿಸಲಾಯಿತು. ಈ ಅಪರಾಧದಲ್ಲಿ ಬಂಧನಕ್ಕೊಳಗಾದ ನಂತರ ಖಟ್ಟರ್ ಅವರಿಗೆ ಕೆಲವೇ ದಿನಗಳಲ್ಲಿ ಜಾಮೀನು ಸಿಕ್ಕಿತ್ತು. ಆದರೆ ಜಾಮೀನಿನ ಷರತ್ತಿನ ರೂಪದಲ್ಲಿ ನ್ಯಾಯಾಲಯದ ಲಿಖಿತ ಅನುಮತಿಯಿಲ್ಲದೆ ಭಾರತದಿಂದ ಹೊರಗೆ ಹೋಗದಂತೆ ಅವರಿಗೆ ನಿಷೇಧ ಹೇರಲಾಗಿತ್ತು.

ವಕೀಲ ನಾಗೇಶ್ ಜೋಶಿ ಅವರ ವಾದ!

ಖಟ್ಟರ್ ಅವರ ವಕೀಲ ನಾಗೇಶ್ ಜೋಶಿ ಅವರು ನ್ಯಾಯಾಲಯದ ಮುಂದೆ ವಾದ ಮಂಡಿಸುತ್ತಾ, ಗೌತಮ್ ಖಟ್ಟರ್ ಅವರಿಗೆ ಮಾರಿಷಸ್‌ನಲ್ಲಿ ಜೂನ್ 20 ರಂದು ಆಯೋಜಿಸಲಾದ ‘ಎರಡನೇ ಅಂತರರಾಷ್ಟ್ರೀಯ ಭಾರತ-ಮಾರಿಷಸ್ ಸನಾತನ ಸಾಂಸ್ಕೃತಿಕ ಸಮ್ಮೇಳನ 2026’ ರಲ್ಲಿ ‘ಅತಿಥಿ ಉಪನ್ಯಾಸಕ’ರಾಗಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಈ ಆಹ್ವಾನವು ಆಧ್ಯಾತ್ಮಿಕ ಗುರುಗಳಾದ ಪ.ಪೂ. ಶ್ರೀ ಶ್ರೀ 1008 ಡಾ. ಸಚಿಂದ್ರನಾಥ್ ಜಿ ಮಹಾರಾಜ್ ಅವರಿಂದ ಬಂದಿದೆ. ಈ ಪ್ರವಾಸವು ಸಂಪೂರ್ಣವಾಗಿ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಸ್ವರೂಪದ್ದಾಗಿದ್ದು, ಇದು ನಡೆಯುತ್ತಿರುವ ಕ್ರಿಮಿನಲ್ ಪ್ರಕರಣದ ಅರ್ಹತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಅವರಿಗೆ ಪ್ರವಾಸಕ್ಕೆ ಅನುಮತಿ ನೀಡಬೇಕು ಎಂದು ವಾದಿಸಿದರು. ಸರಕಾರಿ ವಕೀಲರು ಮತ್ತು ತನಿಖಾಧಿಕಾರಿಗಳು ಈ ಪ್ರವಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ನ್ಯಾಯಾಲಯದ ನಿರ್ಧಾರ ಮತ್ತು ಷರತ್ತುಗಳು

ಉಭಯ ಪಕ್ಷಗಳ ವಾದವನ್ನು ಆಲಿಸಿದ ನಂತರ ನ್ಯಾಯಾಧೀಶರಾದ ಪೂರ್ವ ವಿ. ನಾಯಕ ಅವರು, ಸರಕಾರಿ ಪಕ್ಷದ ಆತಂಕವನ್ನು ಸೂಕ್ತ ಷರತ್ತುಗಳನ್ನು ವಿಧಿಸುವ ಮೂಲಕ ದೂರ ಮಾಡಬಹುದು ಎಂದು ಹೇಳಿದರು. ನ್ಯಾಯಾಲಯವು ತನ್ನ ಆದೇಶದಲ್ಲಿ ಅರ್ಜಿದಾರರಿಗೆ ಕೇವಲ ಜೂನ್ 18 ರಿಂದ 21 ರವರೆಗಿನ ಅವಧಿಯಲ್ಲಿ ಭಾರತದಿಂದ ಮಾರಿಷಸ್ ಮತ್ತು ವಾಪಸ್ ಬರುವ ಪ್ರವಾಸಕ್ಕೆ ಮಾತ್ರ ಅನುಮತಿ ಇರುತ್ತದೆ ಎಂದು ಸ್ಪಷ್ಟಪಡಿಸಿದೆ. ಭಾರತದಿಂದ ಹೊರಡುವ ಮುನ್ನ ಅರ್ಜಿದಾರರು ತಮ್ಮ ವಿಮಾನ ಟಿಕೆಟ್‌ಗಳ ಪ್ರತಿ ಮತ್ತು ಸಂಪೂರ್ಣ ಪ್ರವಾಸದ ವಿವರಗಳನ್ನು ನ್ಯಾಯಾಲಯ ಮತ್ತು ತನಿಖಾಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ. ಮಾರಿಷಸ್‌ನಿಂದ ಭಾರತಕ್ಕೆ ಮರಳಿದ ನಂತರ ಅರ್ಜಿದಾರರು ತಕ್ಷಣವೇ ತನಿಖಾಧಿಕಾರಿಯ ಮುಂದೆಹಾಜರಾಗಬೇಕಾಗುತ್ತದೆ. ಈ ಅನುಮತಿಯನ್ನು ದುರುಪಯೋಗಪಡಿಸಿಕೊಂಡು ಬೇರೆ ಯಾವುದೇ ದೇಶಕ್ಕೆ ಪ್ರವಾಸ ಮಾಡುವಂತಿಲ್ಲ.