ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ

  • ದೇವರು ತಮಗಾಗಿ ಕಾಯುತ್ತಿದ್ದಾನೆ ಎಂದು ಸಚಿವರು-ಶಾಸಕರು ಭಾವಿಸಬಾರದು!

  • ಸನಾತನ ಧರ್ಮದ ಬೋಧನೆಯನ್ನು ನೀಡುತ್ತಾ ‘ದೇವರ ಎದುರು ಎಲ್ಲರೂ ಸಮಾನರು’ ಎಂದೂ ಸ್ಪಷ್ಟಪಡಿಸಿದ ನ್ಯಾಯಾಲಯ

(ವಿಐಪಿ ಎಂದರೆ ಅತಿ ಗಣ್ಯ ವ್ಯಕ್ತಿ)

ನವದೆಹಲಿ – ಸಚಿವರು ಮತ್ತು ಶಾಸಕರು ತಾವು ಕಾನೂನಿಗಿಂತ ಮಿಗಿಲಾದವರು ಅಥವಾ ದೇವರು ತಮಗಾಗಿ ಕಾಯುತ್ತಾ ಕುಳಿತಿದ್ದಾನೆ ಎಂದು ಭಾವಿಸಬಾರದು ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ (ಅತಿ ಗಣ್ಯ ವ್ಯಕ್ತಿಗಳಿಗೆ ದೇವದರ್ಶನ ನೀಡುವ) ಪದ್ಧತಿಯ ಕುರಿತು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೇಶಾದ್ಯಂತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರತಿದಿನ ಸಾವಿರಾರು ಭಕ್ತರು ದರ್ಶನ ಪಡೆಯುತ್ತಾರೆ. ಅದು ತಿರುಪತಿ ಬಾಲಾಜಿ ದೇವಸ್ಥಾನ ಇರಲಿ, ಮಹಾರಾಷ್ಟ್ರದ ಮಹಾಲಕ್ಷ್ಮಿ ಅಥವಾ ತುಳಜಾಭವಾನಿ ದೇವಿಯ ದೇವಸ್ಥಾನ ಇರಲಿ ಅಥವಾ ಅಯೋಧ್ಯೆಯ ಶ್ರೀರಾಮಮಂದಿರ ಅಥವಾ ಕಾಶಿ ವಿಶ್ವನಾಥನ ದೇವಸ್ಥಾನವೇ ಇರಲಿ. ಆದಾಗ್ಯೂ, ಇಂತಹ ಬಹುತೇಕ ದೇವಸ್ಥಾನಗಳಲ್ಲಿ ‘ವಿಐಪಿ ದರ್ಶನ’ದ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇದರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು ಮೇಲಿನ ಗಂಭೀರ ಪ್ರಶ್ನೆಯನ್ನು ಎತ್ತಿದೆ.

ಅರ್ಜಿದಾರರ ವಾದವನ್ನು ಅರ್ಥಮಾಡಿಕೊಳ್ಳಿ!

ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿ ಪಿ. ಚೊಕ್ಕಲಿಂಗಮ್ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ದೇವಸ್ಥಾನಗಳಲ್ಲಿನ ವಿಶೇಷ ಟಿಕೆಟ್, ‘ಬ್ರೇಕ್ ದರ್ಶನ’ ಮತ್ತು ‘ವಿಐಪಿ ದರ್ಶನ’ಗಳಂತಹ ವ್ಯವಸ್ಥೆಗಳು ಆರ್ಥಿಕ ಆಧಾರದ ಮೇಲೆ ಸಾಮಾನ್ಯ ಮನುಷ್ಯ ಮತ್ತು ‘ವಿಐಪಿ’ ವ್ಯಕ್ತಿಗಳ ನಡುವೆ ತಾರತಮ್ಯವನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳುತ್ತಾರೆ. ದೇವರ ದೃಷ್ಟಿಯಲ್ಲಿ ಅಂತಹ ಯಾವುದೇ ತಾರತಮ್ಯವಿಲ್ಲ. ಸನಾತನ ಪರಂಪರೆಯಲ್ಲಿ ಶ್ರೀಮಂತ ಮತ್ತು ಬಡವರ ನಡುವೆ ಯಾವುದೇ ರೀತಿಯ ತಾರತಮ್ಯವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಆದ್ದರಿಂದ, ಹಣದ ಆಧಾರದ ಮೇಲೆ ದೇವರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡುವುದು ಸಂವಿಧಾನ ಮತ್ತು ಧಾರ್ಮಿಕ ಮೌಲ್ಯಗಳೆರಡಕ್ಕೂ ವಿರುದ್ಧವಾಗಿದೆ. ಈ ವ್ಯವಸ್ಥೆಯನ್ನು ನಿಲ್ಲಿಸಬೇಕು.

ಚರ್ಚ್ ಮತ್ತು ಮಸೀದಿಗಳಲ್ಲಿ ಇಂತಹ ವಿಶೇಷ ವ್ಯವಸ್ಥೆ ಕಂಡುಬರುವುದಿಲ್ಲ! – ಮದ್ರಾಸ್ ಉಚ್ಚ ನ್ಯಾಯಾಲಯದ ಪ್ರಮುಖ ಅವಲೋಕನ

ಮದ್ರಾಸ್ ಉಚ್ಚ ನ್ಯಾಯಾಲಯದ ರಜೆಯಕಾಲದ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರು ಈ ಅರ್ಜಿಯ ವಿಚಾರಣೆ ನಡೆಸಿದರು. ಅವರು,

1. ದೇವರ ಎದುರು ಎಲ್ಲರೂ ಸಮಾನರು, ಸನಾತನ ಧರ್ಮವು ನಮಗೆ ಇದನ್ನೇ ಕಲಿಸುತ್ತದೆ.

2. ಪೂಜೆ ಮತ್ತು ಶ್ರದ್ಧೆಯ ಆಧಾರವೇ ಸಮಾನತೆಯಾಗಿರುವಾಗ, ‘ವಿಐಪಿ ದರ್ಶನ’ದಂತಹ ವ್ಯವಸ್ಥೆಯ ಅಗತ್ಯವೇನಿದೆ?

3. ಚರ್ಚ್ ಮತ್ತು ಮಸೀದಿಗಳಲ್ಲಿ ಇಂತಹ ವಿಶೇಷ ವ್ಯವಸ್ಥೆ ಕಂಡುಬರುವುದಿಲ್ಲ. ಹಾಗಾದರೆ ದೇವಸ್ಥಾನಗಳಲ್ಲಿನ ಇಂತಹ ವ್ಯವಸ್ಥೆಯನ್ನು ಹೇಗೆ ತಾನೇ ಸಮರ್ಥಿಸಿಕೊಳ್ಳಲು ಸಾಧ್ಯ?

ಸಂವಿಧಾನದ 14ನೇ ವಿಧಿ ಎಲ್ಲಾ ನಾಗರಿಕರಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ!

ಅರ್ಜಿದಾರರು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆಯ ಹಕ್ಕನ್ನು ನೀಡುವ ಭಾರತೀಯ ಸಂವಿಧಾನದ 14ನೇ ವಿಧಿಯನ್ನು ಉಲ್ಲೇಖಿಸಿ, ದೇಶದ ಕಾನೂನು ಪ್ರತಿಯೊಬ್ಬ ವ್ಯಕ್ತಿಗೂ ಸಮಾನವಾಗಿದೆ ಎಂದು ಹೇಳಿದರು. ಕಾನೂನಿಗಿಂತ ಮಿಗಿಲಾದವರು ಯಾರೂ ಇಲ್ಲ, ಅವರು ಶ್ರೀಮಂತರಾಗಿರಲಿ, ಬಡವರಾಗಿರಲಿ, ಸಾಮಾನ್ಯ ನಾಗರಿಕರಾಗಿರಲಿ ಅಥವಾ ಸರಕಾರಿ ಅಧಿಕಾರಿಯಾಗಿರಲಿ. ಎಲ್ಲಾ ನಾಗರಿಕರು ಕಾನೂನಿನ ದೃಷ್ಟಿಯಲ್ಲಿ ಸಮಾನರಾಗಿರುವಾಗ, ಧಾರ್ಮಿಕ ಸ್ಥಳಗಳಲ್ಲೂ ಸಮಾನ ಅವಕಾಶ ಸಿಗಬೇಕು.

ದೇವಸ್ಥಾನ ಆಡಳಿತ ಮಂಡಳಿಯ ನಿಲುವು!

ದೇವಸ್ಥಾನದ ಆಡಳಿತ ಮಂಡಳಿಯು ಈ ಬಗ್ಗೆ ಪ್ರತಿಕ್ರಿಯಿಸಿ, ವಿಶೇಷ ದರ್ಶನಕ್ಕಾಗಿ ಮಾರಾಟ ಮಾಡಲಾಗುವ ಟಿಕೆಟ್‌ಗಳಿಂದ ಬರುವ ಆದಾಯವು ದೇವಸ್ಥಾನದ ಆದಾಯದ ಬಹುದೊಡ್ಡ ಭಾಗವಾಗಿದೆ. ಇದರಿಂದ ದೇವಸ್ಥಾನದ ನಿರ್ವಹಣೆ ಮತ್ತು ದೈನಂದಿನ ಚಟುವಟಿಕೆಗಳನ್ನು ನಡೆಸಲು ಸಹಾಯವಾಗುತ್ತದೆ ಎಂದು ಹೇಳಿದೆ. ಉಚ್ಚ ನ್ಯಾಯಾಲಯವು ಮಾತ್ರ ಆದಾಯ ನಷ್ಟದ ವಾದವನ್ನು ತಳ್ಳಿಹಾಕುತ್ತಾ, ಕೇವಲ ಆದಾಯದ ಆಧಾರದ ಮೇಲೆ ತಾರತಮ್ಯದ ವ್ಯವಸ್ಥೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದೆ.