ನುಸುಳುಕೋರರಿಗೆ ಭಾರತೀಯ ಗುರುತಿನ ಚೀಟಿಗಳನ್ನು ಒದಗಿಸಿಕೊಟ್ಟ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು!

  • ಬಾಂಗ್ಲಾದೇಶಿ ನುಸುಳುಕೋರರಿಗೆ ಬಂಗಾಳದಲ್ಲಿ ನುಸುಳಲು ದಲ್ಲಾಳಿಗಳು ಸಹಾಯ ಮಾಡಿರುವುದು ಬಹಿರಂಗ!

  • ಅನೇಕರು ಅನೇಕ ಬಾರಿ ಮತದಾನವನ್ನೂ ಮಾಡಿದ್ದಾರೆ!

  • ವಿಶೇಷ ಆಳವಾದ ಪರಿಶೀಲನೆಯಿಂದ ನುಸುಳುಕೋರರು ಎಂಬುದು ಬಹಿರಂಗ

ಕೊಲಕಾತಾ (ಬಂಗಾಳ) – ಬಂಗಾಳದಲ್ಲಿ ಭಾಜಪ ಸರಕಾರ ಬಂದ ನಂತರ ಬಾಂಗ್ಲಾದೇಶಿ ನುಸುಳುಕೋರರನ್ನು ಹುಡುಕಿ ಅವರನ್ನು ಉಚ್ಚಾಟಿಸುವ ಆದೇಶ ನೀಡಿದ ನಂತರ, ಬಾಂಗ್ಲಾದೇಶಿಗಳು ತಾವಾಗಿಯೇ ಓಡಿಹೋಗಲಾರಂಭಿಸಿದ್ದಾರೆ. ಅವರು ಭಾರತದೊಳಗೆ ಹೇಗೆ ನುಸುಳಿದರು? ಎಂದು ಕೇಳಿದಾಗ ಅವರು ನದಿಯನ್ನು ದಾಟಿ ಭಾರತವನ್ನು ಪ್ರವೇಶಿಸಿದ್ದಾಗಿ ಹೇಳಿದ್ದಾರೆ. ಕತ್ತಲೆಯ ಲಾಭವನ್ನು ಪಡೆದು ಗಡಿ ದಾಟಲು ‘ದಲ್ಲಾಳಿ’ಗಳು ಅಥವಾ ಮಧ್ಯವರ್ತಿಗಳು ಸಹಾಯ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಭದ್ರತಾ ಪಡೆಗಳ ಗಸ್ತು ಇಲ್ಲದ ಸಮಯದಲ್ಲಿ ಕೇವಲ 10 ನಿಮಿಷಗಳಲ್ಲಿ ಭಾರತವನ್ನು ಪ್ರವೇಶಿಸಬಹುದು ಎಂದು ಒಬ್ಬ ವ್ಯಕ್ತಿ ಹೇಳಿದ್ದಾನೆ. ಹಾಗೆಯೇ ಬಂಗಾಳದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮಗೆ ಗುರುತಿನ ಚೀಟಿಗಳನ್ನು ಪಡೆಯಲು ಸಹಾಯ ಮಾಡಿದ್ದಾರೆ ಎಂದು ಕೆಲವು ವಲಸಿಗರು ಹೇಳಿಕೊಂಡಿದ್ದಾರೆ. ಇದರಿಂದಾಗಿ ಅವರು ಭಾರತೀಯ ಯೋಜನೆಗಳ ಲಾಭವನ್ನೂ ಪಡೆದಿದ್ದಾರೆ ಮತ್ತು ಮತದಾನವನ್ನೂ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಆಳವಾದ ಪರಿಶೀಲನೆಯ ನಂತರ ಅವರ ಗುರುತಿನ ಚೀಟಿಗಳು ರದ್ದಾಗಿರುವುದರಿಂದ ಮತ್ತು ಭಾಜಪ ಸರಕಾರ ಅವರನ್ನು ಓಡಿಸುವುದರಿಂದ, ಅವರು ಈಗ ತಾವಾಗಿಯೇ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ.

ದಲ್ಲಾಳಿಗಳಿಗೆ ಹಣ ನೀಡಿ ನುಸುಳುವಿಕೆ ಮಾಡಲಾಗುತ್ತದೆ!

ಮಧ್ಯವರ್ತಿಗೆ 7-8 ಸಾವಿರ ರೂಪಾಯಿಗಳನ್ನು ನೀಡಿ ರಾತ್ರಿಯ ಸಮಯದಲ್ಲಿ ಗಡಿ ಭದ್ರತಾ ಪಡೆಯ ಸೈನಿಕರ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ ಮತ್ತು ಗಸ್ತಿನಲ್ಲಿ ಸಮಯ ಸಿಕ್ಕ ತಕ್ಷಣ ಜನರನ್ನು ಗಡಿ ದಾಟಿಸಲಾಗುತ್ತದೆ ಎಂದು ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಬಡಗಿಯೊಬ್ಬ ಮಾಹಿತಿ ನೀಡಿದ್ದಾನೆ. ಗಡಿಯಲ್ಲಿ ಸೈನಿಕರನ್ನು ನಿಯೋಜಿಸಿದ್ದರೂ ದಲ್ಲಾಳಿಯೊಬ್ಬನಿಗೆ 20 ಸಾವಿರ ರೂಪಾಯಿ ನೀಡಿ ಗಡಿ ದಾಟಿರುವುದಾಗಿ ಮತ್ತೊಬ್ಬ ವಲಸಿಗ ಹೇಳಿಕೊಂಡಿದ್ದಾನೆ.

ತೃಣಮೂಲ ಕಾಂಗ್ರೆಸ್ ಸರಕಾರವು ಸರಕಾರಿ ಯೋಜನೆಗಳ ಲಾಭಗಳನ್ನು ನೀಡಿದೆ!

ಮಮತಾ ಬ್ಯಾನರ್ಜಿ ಸರಕಾರ ಅಧಿಕಾರದಲ್ಲಿದ್ದಾಗ ಕೆಲವು ವಲಸಿಗ ಮಹಿಳೆಯರು ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಮಾಡಿಸಿಕೊಂಡಿದ್ದರು. ಅಲ್ಲದೆ, ತೃಣಮೂಲದ ಜನರ ಸಹಾಯದಿಂದ 2-3 ವರ್ಷಗಳ ಕಾಲ ‘ಲಕ್ಷ್ಮಿ ಭಂಡಾರ್’ ಯೋಜನೆಯ ಲಾಭವನ್ನೂ ಪಡೆದಿರುವುದಾಗಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ನುಸುಳುಕೋರರಿಗೆ ಸಹಾಯ ಮಾಡುವ ತೃಣಮೂಲ ಕಾಂಗ್ರೆಸ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಅದರ ಮೇಲೆ ನಿಷೇಧ ಹೇರಬೇಕು!