ಮೆಟ್ರೋದ ಆಕ್ವಾ ಲೈನ್ ೩ ರಲ್ಲಿ ತಾಂತ್ರಿಕ ದೋಷ; ೫೦ ನಿಮಿಷಗಳ ಕಾಲ ಸಿಲುಕಿಕೊಂಡ ಪ್ರಯಾಣಿಕರು!

ಮುಂಬಯಿ – ಮುಂಬಯಿನ ಆಕ್ವಾ ಲೈನ್ ೩ ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ೫೦ ನಿಮಿಷಗಳ ಕಾಲ ಮೆಟ್ರೋ ಒಂದೇ ಸ್ಥಳದಲ್ಲಿ ಸ್ಥಗಿತಗೊಂಡಿತ್ತು. ಮುಂಜಾನೆಯ ಸಮಯದಲ್ಲಿಯೇ ಮೆಟ್ರೋ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಉದ್ಯೋಗಸ್ಥರು ತೊಂದರೆ ಅನುಭವಿಸಿದರು. ೫೦ ನಿಮಿಷಗಳ ನಂತರ ಸಂಚಾರ ಯಥಾಸ್ಥಿತಿಗೆ ಮರಳಿತು. ಈ ಮಾರ್ಗದ ಮೆಟ್ರೋ ಸೇವೆಯು ನೇರವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ. ಇದು ಸಂಪೂರ್ಣವಾಗಿ ಭೂಗತ ಮಾರ್ಗವಾಗಿದೆ.

ಪ್ರಯಾಣಿಕರ ಅನಾನುಕೂಲತೆ!

ಒಂದೇ ಸ್ಥಳದಲ್ಲಿ ಮೆಟ್ರೋ ನಿಂತಿದ್ದರಿಂದ ಪ್ರಯಾಣಿಕರು ಭಯಭೀತರಾಗಿದ್ದರು. ಸುರಂಗ ಮಾರ್ಗದಲ್ಲಿ ಮೆಟ್ರೋ ಸಿಲುಕಿಕೊಂಡಿದ್ದರಿಂದ ಪ್ರಯಾಣಿಕರ ಮೊಬೈಲ್‌ಗೆ ‘ನೆಟ್‌ವರ್ಕ್ ಸಿಗ್ನಲ್’ ಸಿಗಲಿಲ್ಲ. ಸಂಪೂರ್ಣ ಸುರಂಗ ರೈಲ್ವೆ ಮಾರ್ಗವಾಗಿದ್ದರಿಂದ ಹೊರಗಿನದ್ದು ಏನೂ ಕಾಣಿಸುತ್ತಿರಲಿಲ್ಲ. ಇದರಿಂದಾಗಿ ಅನೇಕರು ಕಚೇರಿಗೆ ಹೋಗುವುದು ತಡವಾಯಿತು.