ಜನರ ಸುರಕ್ಷತೆಗಾಗಿ ಅಪಾಯಕಾರಿ ನಾಯಿಗಳಿಗೆ ಇಂಜೆಕ್ಷನ್ ನೀಡಿ ಕೊಲ್ಲಿರಿ! : Supreme Court

  • ಬೀದಿನಾಯಿಗಳ ಸಮಸ್ಯೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ಅಂತಿಮ ಆದೇಶ

  • ಆದೇಶ ಪಾಲಿಸದ ಅಧಿಕಾರಿಯ ವಿರುದ್ಧ ಮೊಕದ್ದಮೆ ಹೂಡುವಂತೆಯೂ ಆದೇಶ

ನವ ದೆಹಲಿ – ಅಪಾಯಕಾರಿ ಮತ್ತು ಕಾಯಿಲೆಯಿಂದ ಬಳಲುತ್ತಿರುವ ನಾಯಿಗಳಿಗೆ ಇಂಜೆಕ್ಷನ್ ನೀಡಿ ಕೊಲ್ಲಬಹುದು. ಜನರ ಜೀವ ರಕ್ಷಣೆ ಅತ್ಯಂತ ಪ್ರಮುಖವಾಗಿದೆ. ಯಾವ ಅಧಿಕಾರಿ ಈ ನಿರ್ದೇಶನವನ್ನು ಪಾಲಿಸುವುದಿಲ್ಲವೋ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬೇಕು ಎಂದು ಬೀದಿನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ. ನವೆಂಬರ್ 2025 ರಲ್ಲಿ ಸರ್ವೋಚ್ಚ ನ್ಯಾಯಾಲಯವು ಶಾಲೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸಲು ನಿರ್ದೇಶನಗಳನ್ನು ಜಾರಿಗೊಳಿಸಿತ್ತು. ನಾಯಿಗಳನ್ನು ಆಶ್ರಯತಾಣಗಳಲ್ಲಿ ಇರಿಸಬೇಕು ಮತ್ತು ಅವುಗಳನ್ನು ಮತ್ತೆ ಮರಳಿ ಬಿಡಬಾರದು ಎಂದು ಹೇಳಿತ್ತು. ರಸ್ತೆಗಳಲ್ಲಿ ನಾಯಿಗಳಿಗೆ ಆಹಾರ ನೀಡುವುದನ್ನೂ ನಿಷೇಧಿಸಲಾಗಿತ್ತು. ಇದರ ನಂತರ ಶ್ವಾನಪ್ರೇಮಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ನಿರ್ದೇಶನಗಳನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದವು.

ನ್ಯಾಯಾಲಯವು ತೀರ್ಪು ನೀಡುವಾಗ, ಕೇವಲ ರಾಜಸ್ಥಾನದ ಶ್ರೀಗಂಗಾನಗರ ನಗರವೊಂದರಲ್ಲೇ ಒಂದು ತಿಂಗಳಲ್ಲಿ ನಾಯಿ ಕಚ್ಚಿದ 1 ಸಾವಿರದ 84 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದೆ. ಸಣ್ಣ ಮಕ್ಕಳಿಗೆ ತೀವ್ರ ಗಾಯಗಳಾಗಿವೆ, ಮುಖದ ಮೇಲೆ ಆಳವಾದ ಗಾಯಗಳಾಗಿವೆ. ತಮಿಳುನಾಡಿನಲ್ಲಿ ವರ್ಷದ ಮೊದಲ 4 ತಿಂಗಳಲ್ಲೇ ನಾಯಿ ಕಚ್ಚಿದ ಸುಮಾರು 2 ಲಕ್ಷ ಪ್ರಕರಣಗಳು ದಾಖಲಾಗಿವೆ, ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು

1. ರಾಜ್ಯ ಸರಕಾರಗಳು ಪ್ರಾಣಿ ಕಲ್ಯಾಣ ಮಂಡಳಿಯ ನಿಯಮಗಳನ್ನು ಮತ್ತಷ್ಟು ಬಲಪಡಿಸಬೇಕು ಮತ್ತು ಅವುಗಳನ್ನು ಸೂಕ್ತವಾಗಿ ಅನುಷ್ಠಾನಗೊಳಿಸಬೇಕು.

2. ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ 1 ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ‘ಅನಿಮಲ್ ಬರ್ತ್ ಕಂಟ್ರೋಲ್ ಸೆಂಟರ್’ ಸ್ಥಾಪಿಸಬೇಕು. ಜನಸಂಖ್ಯೆ ಹೆಚ್ಚಿರುವ ಕಡೆ ಅಗತ್ಯಕ್ಕೆ ಅನುಗುಣವಾಗಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

3. ನ್ಯಾಯಾಲಯದ ಆದೇಶಗಳು ಮತ್ತು ಪ್ರಾಣಿ ಕಲ್ಯಾಣ ನಿಯಮಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು.

4. ಸಾರ್ವಜನಿಕರ ಸುರಕ್ಷತೆಯನ್ನು ಪರಿಗಣಿಸಿ ಇತರ ಸಾರ್ವಜನಿಕ ಸ್ಥಳಗಳಿಗೂ ಈ ನಿಯಮಗಳನ್ನು ಅನ್ವಯಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಅದನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಬೇಕು.

5. ಆಂಟಿ-ರೇಬೀಸ್ (ರೇಬೀಸ್ ನಿರೋಧಕ) ಔಷಧಿಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು.

6. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀದಿನಾಯಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಉದಾಹರಣೆಗೆ ಹಳೆಯ ಸಾರಿಗೆ ವಾಹನಗಳನ್ನು ಬಳಸಿ ಅವುಗಳನ್ನು ತೆರವುಗೊಳಿಸುವುದು. ಇದಕ್ಕಾಗಿ ಉಸ್ತುವಾರಿ ಮತ್ತು ಸಮನ್ವಯ ವ್ಯವಸ್ಥೆಯನ್ನು ಸಿದ್ಧಪಡಿಸಬೇಕು.

7. ರೇಬೀಸ್ ಸೋಂಕಿಗೆ ಒಳಗಾದ ಅಥವಾ ಅತ್ಯಂತ ಅಪಾಯಕಾರಿ ನಾಯಿಗಳ ವಿಷಯದಲ್ಲಿ ಕಾನೂನಿನ ಪ್ರಕಾರ ಅಗತ್ಯವಿದ್ದಲ್ಲಿ ದಯಾಮರಣದಂತಹ ಕ್ರಮಗಳನ್ನು ತೆಗೆದುಕೊಳ್ಳಬಹುದು, ಇದರಿಂದ ಜನರ ಪ್ರಾಣ ಸುರಕ್ಷಿತವಾಗಿರುತ್ತದೆ.

8. ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವ ಮಹಾನಗರ ಪಾಲಿಕೆಗಳು ಮತ್ತು ಸರಕಾರಿ ಅಧಿಕಾರಿಗಳಿಗೆ ಕಾನೂನು ರಕ್ಷಣೆ ನೀಡಬೇಕು. ಸಾಮಾನ್ಯವಾಗಿ ಅವರ ವಿರುದ್ಧ ಅಪರಾಧ ಪ್ರಕರಣಗಳನ್ನು ದಾಖಲಿಸಬಾರದು ಅಥವಾ ಕಠಿಣ ಕ್ರಮ ಕೈಗೊಳ್ಳಬಾರದು.

ನ್ಯಾಯಾಂಗ ಪ್ರಕ್ರಿಯೆಯ ಘಟನಾವಳಿಗಳು

ಈ ಪ್ರಕರಣವು ಜುಲೈ 28, 2025 ರಂದು ಪ್ರಾರಂಭವಾಗಿತ್ತು. ಸರ್ವೋಚ್ಚ ನ್ಯಾಯಾಲಯವು ದೇಶದಲ್ಲಿ ಬೀದಿನಾಯಿಗಳ ದಾಳಿ ಮತ್ತು ಅದರಿಂದಾಗುವ ಸಾವುಗಳ ಬಗ್ಗೆ ಸ್ವಯಂಪ್ರೇರಿತವಾಗಿ ಗಮನಹರಿಸಿತ್ತು. ಆಗಸ್ಟ್ 11, 2025 ರಂದು ನ್ಯಾಯಾಲಯವು ದೆಹಲಿ-ಎನ್.ಸಿ.ಆರ್.ನಿಂದ (ರಾಷ್ಟ್ರೀಯ ರಾಜಧಾನಿ ವಲಯ) 8 ವಾರಗಳ ಒಳಗಾಗಿ ಎಲ್ಲಾ ಬೀದಿನಾಯಿಗಳನ್ನು ಹಿಡಿದು ಆಶ್ರಯತಾಣಗಳಿಗೆ ಕಳುಹಿಸುವಂತೆ ಆದೇಶಿಸಿತ್ತು.

ಇದಕ್ಕೆ ವಿರೋಧ ವ್ಯಕ್ತವಾದ ನಂತರ, ಆಗಸ್ಟ್ 22, 2025 ರಂದು ನ್ಯಾಯಾಲಯವು ಆದೇಶದಲ್ಲಿ ಬದಲಾವಣೆ ಮಾಡಿ, ರೇಬೀಸ್ ಇಲ್ಲದ ಮತ್ತು ಆಕ್ರಮಣಕಾರಿಯಲ್ಲದ ನಾಯಿಗಳಿಗೆ ನಸಬಂದಿ (ಸಂತಾನಹರಣ ಚಿಕಿತ್ಸೆ) ಮತ್ತು ಲಸಿಕೆ ನೀಡಿದ ನಂತರ, ಅವುಗಳನ್ನು ಎಲ್ಲಿಂದ ಹಿಡಿಯಲಾಗಿದ್ದವೋ ಅದೇ ಪ್ರದೇಶದಲ್ಲಿ ಮರಳಿ ಬಿಡಬಹುದು ಎಂದು ಹೇಳಿತ್ತು.

ನಂತರ ಈ ಪ್ರಕರಣದ ವ್ಯಾಪ್ತಿಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಯಿತು. ನವೆಂಬರ್ 7, 2025 ರಂದು ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ರಾಜ್ಯಗಳು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೆದ್ದಾರಿಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳ ಸುತ್ತಮುತ್ತಲಿನ ಬೀದಿ ಪ್ರಾಣಿಗಳನ್ನು ತೆರವುಗೊಳಿಸಲು ಸೂಚಿಸಿತ್ತು.