ಭೋಜಶಾಲೆ ಮಸೀದಿ ಅಲ್ಲ ಅದು ಹಿಂದೂಗಳ ಶ್ರೀ ವಾಗ್ಜೇವಿ ಮಂದಿರ! – ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರ ಪೀಠ

  • ಶ್ರೀರಾಮಜನ್ಮಭೂಮಿಯ ನಂತರ ಹಿಂದೂಗಳಿಗೆ ಎರಡನೇ ದೊಡ್ಡ ವಿಜಯ!

  • ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರ ಪೀಠದ ಮಹತ್ವದ ನಿರ್ಣಯ

  • ಮುಸಲ್ಮಾನರಿಗೆ ಬೇರೆ ಕಡೆ ಜಾಗ ನೀಡಲು ಸರಕಾರಕ್ಕೆ ವಿನಂತಿಸುವಂತೆ ಸಲಹೆ

  • ಬ್ರಿಟನ್ ಸಂಗ್ರಹಾಲಯದಲ್ಲಿರುವ ಶ್ರೀ ವಾಗ್ಜೇವಿಯ ಮೂರ್ತಿಯನ್ನು ಮರಳಿ ತರಲು ಕೇಂದ್ರ ಸರಕಾರಕ್ಕೆ ನಿರ್ದೇಶನ

ಇಂದೂರ (ಮಧ್ಯಪ್ರದೇಶ) – ಮಧ್ಯಪ್ರದೇಶದ ಧಾರದಲ್ಲಿರುವ ಪ್ರಸಿದ್ಧ ಭೋಜಶಾಲೆಯು ಹಿಂದೂಗಳ ಶ್ರೀ ವಾಗ್ಜೇವಿಯ ಅಂದರೆ ಶ್ರೀ ಸರಸ್ವತಿ ದೇವಿಯ ಮಂದಿರವಾಗಿದೆ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರ ಪೀಠವು ಮೇ 15 ರಂದು ತೀರ್ಪು ನೀಡಿದೆ. ಪೀಠವು, ‘ಕಾಲಾನಂತರದಲ್ಲಿ ಈ ಜಾಗದ ಮೇಲೆ ಕೆಲವು ನಿಯಮಗಳನ್ನು ಹೇರಲಾಗಿದ್ದರೂ, ಈ ಸ್ಥಳದಲ್ಲಿ ಪೂಜಾ ಸ್ಥಾನವಿರುವುದು ನಿರಂತರವಾಗಿ ಕಂಡುಬಂದಿದೆ.

ಈ ಸ್ಥಳದಲ್ಲಿ ದೊರೆತ ಐತಿಹಾಸಿಕ ಸಾಹಿತ್ಯವು ಇದು ರಾಜ ಭೋಜರಿಗೆ ಸಂಬಂಧಿಸಿದ ಸಂಸ್ಕೃತ ಶಿಕ್ಷಣದ ಒಂದು ಕೇಂದ್ರವಾಗಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ. ಇದು ಧಾರದಲ್ಲಿ ದೇವಿ ಶ್ರೀ ವಾಗ್ಜೇವಿ ಸರಸ್ವತಿಗೆ ಸಮರ್ಪಿತವಾದ ಮಂದಿರ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುತ್ತದೆ. ಆದ್ದರಿಂದ ಈ ಕ್ಷೇತ್ರದ ಧಾರ್ಮಿಕ ಸ್ವರೂಪವು ದೇವಿ ವಾಗ್ಜೇವಿ ಸರಸ್ವತಿಯ ಮಂದಿರವಿರುವ ‘ಭೋಜಶಾಲೆ’ ಎಂದು ಪರಿಗಣಿಸಲಾಗಿದೆ.’

ಮುಸಲ್ಮಾನರು ಇದನ್ನು ‘ಕಮಾಲ ಮೌಲಾ ಮಸೀದಿ’ ಎಂದು ಕರೆಯುತ್ತಿದ್ದರು. ನ್ಯಾಯಾಲಯವು ಮುಸಲ್ಮಾನ ಪರ ನ್ಯಾಯವಾದಿಗಳಿಗೆ ಮಸೀದಿಗಾಗಿ ಸರಕಾರಕ್ಕೆ ಪ್ರತ್ಯೇಕ ಭೂಮಿಯನ್ನು ಕೇಳುವಂತೆ ನಿರ್ದೇಶಿಸಿದೆ. ಹಿಂದೂಗಳ ಪರವಾಗಿ ನ್ಯಾಯವಾದಿ ವಿಷ್ಣು ಶಂಕರ ಜೈನ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ತೀರ್ಪಿನ ನಂತರ ಅವರು ‘ಧರ್ಮಕ್ಕೆ ಜಯವಾಗಲಿ ಮತ್ತು ಅಧರ್ಮವು ನಾಶವಾಗಲಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ನಮ್ಮದಾಗಿದ್ದನ್ನು ನಾವು ಮರಳಿ ಪಡೆದಿದ್ದೇವೆ ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್

ಭೋಜಶಾಲೆಯ ತೀರ್ಪು ಹಿಂದೂಗಳ ಪರವಾಗಿ ಬಂದಿರುವುದು ಬಹಳ ಮಹತ್ವದ್ದಾಗಿದೆ.

ದೀರ್ಘ ಹೋರಾಟದ ನಂತರ ಹಿಂದೂಗಳಿಗೆ ಆ ಆವರಣದಲ್ಲಿ ಪೂಜೆ ಮಾಡುವ ಹಕ್ಕು ಮರಳಿ ಸಿಕ್ಕಿದೆ. ಶ್ರೀರಾಮಮಂದಿರವನ್ನು ಬಾಬರ್ ಧ್ವಂಸ ಮಾಡಿದ ಘಟನೆ ೧೫೨೮ ನೇ ಇಸವಿಯಲ್ಲಿ ನಡೆದಿತ್ತು. ಭೋಜಶಾಲೆಯ ಪ್ರಕರಣವು ಅದಕ್ಕಿಂತಲೂ ಹಳೆಯದು, ಅಂದರೆ ೧೧ ನೇ ಶತಮಾನದ್ದಾಗಿದೆ. ಕತ್ತಿಗಿಂತ ಲೇಖನಿ ಹೆಚ್ಚು ಶಕ್ತಿಶಾಲಿಯಾಗಿದೆ ಎಂಬುದು ನ್ಯಾಯಾಲಯದ ತೀರ್ಪಿನಿಂದ ಮತ್ತೊಮ್ಮೆ ಸಾಬೀತಾಗಿದೆ, ಎಂದು ಹೇಳಿದರು.

ಈಗ ಕಾಶಿ ಮತ್ತು ಮಥುರಾ ಬಾಕಿ ಇವೆ! – ಹಿಂದೂ ಜನಜಾಗೃತಿ ಸಮಿತಿ

ಮುಂಬಯಿ – ಭೋಜಶಾಲೆಯ ಕುರಿತಾದ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು ಕೇವಲ ಒಂದು ವಾಸ್ತುವಿನ ವಿಜಯವಲ್ಲ, ಬದಲಾಗಿ ಶತಮಾನಗಳಿಂದ ತುಳಿಯಲ್ಪಟ್ಟ ಐತಿಹಾಸಿಕ ಸತ್ಯದ ಮತ್ತು ಪರಕೀಯ ಇಸ್ಲಾಮಿ ಆಕ್ರಮಣಕಾರರಿಂದ ಅತಿಕ್ರಮಿಸಲ್ಪಟ್ಟ ಮಂದಿರಗಳ ಮುಕ್ತಿ ಹೋರಾಟದ ಭವ್ಯ ವಿಜಯವಾಗಿದೆ. ಭೋಜಶಾಲೆಯ ಮುಕ್ತಿಯ ಹೋರಾಟ ಇಂದು ಯಶಸ್ವಿಯಾಗಿದ್ದರೂ, ಈ ಸಂಘರ್ಷದಲ್ಲಿ ಭೋಜಶಾಲೆ ಮುಕ್ತಿ ಆಂದೋಲನದ ಪ್ರಮುಖರಾದ ಶ್ರೀ. ನವಲಕಿಶೋರ ಶರ್ಮಾ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಪಾಲು ದೊಡ್ಡದಿದೆ. ಸಮಿತಿಯು ಈ ಐತಿಹಾಸಿಕ ನಿರ್ಧಾರವನ್ನು ಹರ್ಷದಿಂದ ಸ್ವಾಗತಿಸುತ್ತದೆ ಮತ್ತು ‘…ಈಗ ಕಾಶಿ-ಮಥುರಾ ಮುಕ್ತವಾಗುವುದು ಬಾಕಿ ಇದೆ!’ ಎಂದು ಸಂಕಲ್ಪ ಘೋಷಣೆ ಮಾಡುತ್ತಿದೆ.

ಹಿಂದೂ ಜನಜಾಗೃತಿ ಸಮಿತಿಯ ಪತ್ರಿಕಾ ಪ್ರಕಟಣೆ –

ಹಿಂದೂ ಜನಜಾಗೃತಿ ಸಮಿತಿಯ ಆಂದೋಲನ ಮತ್ತು ಹಿಂದೂ ಅಧಿವೇಶನದ ಫಲಶ್ರುತಿ!

ಧಾರ ಇಲ್ಲಿನ ಭೋಜಶಾಲೆಯ ಮುಕ್ತಿಗಾಗಿ ಹಿಂದೂ ಜನಜಾಗೃತಿ ಸಮಿತಿಯು ಕೇವಲ ರಸ್ತೆಯಲ್ಲಿ ಆಂದೋಲನಗಳನ್ನು ಮಾಡಿದ್ದಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಜನಜಾಗೃತಿಯನ್ನು ಮೂಡಿಸಿತು. ಗೋವಾದಲ್ಲಿ ನಡೆಯುವ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ (ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ) ಈ ರಾಷ್ಟ್ರೀಯ ವೇದಿಕೆಯಿಂದ ಪ್ರತಿ ವರ್ಷ ಈ ಕುರಿತು ಕಾನೂನಾತ್ಮಕ ಮತ್ತು ಕಾರ್ಯತಂತ್ರದ ನಿರ್ಣಯಗಳನ್ನು ಅಂಗೀಕರಿಸಿ ಹೋರಾಟದ ದಿಕ್ಕನ್ನು ನಿರ್ಧರಿಸಲಾಯಿತು. ದೇಶಾದ್ಯಂತದ ಹಿಂದುತ್ವನಿಷ್ಠ ಸಂಘಟನೆಗಳು ಮಧ್ಯಪ್ರದೇಶ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಈ ಕುರಿತು ಸತತವಾಗಿ ಮನವಿಗಳನ್ನು ಸಲ್ಲಿಸಿದ್ದವು. ಇಂದು ನ್ಯಾಯಾಲಯವು ನೀಡಿರುವ ಈ ಐತಿಹಾಸಿಕ ತೀರ್ಪಿನಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಮತ್ತು ಸಮಿತಿಯ ದೀರ್ಘಕಾಲದ ಆಂದೋಲನಕ್ಕೆ ನ್ಯಾಯ ಸಿಕ್ಕಿದೆ.

ಆಕ್ರಮಣಕಾರರ ಅತಿಕ್ರಮಣವನ್ನು ತೆರವುಗೊಳಿಸಿ ಕಾಶಿ-ಮಥುರೆಯ ಹೋರಾಟ ಮುಂದುವರಿಯಲಿದೆ!

ಈ ಸಂದರ್ಭದಲ್ಲಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ಮಾತನಾಡಿ,

ಭಾರತದಲ್ಲಿನ ಹಿಂದೂಗಳ ಕೇವಲ ಒಂದು ಅಥವಾ ಎರಡು ದೇವಸ್ಥಾನಗಳನ್ನು ಅತಿಕ್ರಮಿಸಲಾಗಿಲ್ಲ. ಪರಕೀಯ ಆಕ್ರಮಣಕಾರರು ಮತ್ತು ಧಾರ್ಮಿಕ ಕಟ್ಟರವಾದಿಗಳು ಹಿಂದೂಗಳ ಸಹಿಷ್ಣುತೆಯ ಲಾಭವನ್ನು ಪಡೆದುಕೊಂಡು ಸಾವಿರಾರು ಮಂದಿರಗಳ ಮೇಲೆ ಅನಧಿಕೃತವಾಗಿ ಅತಿಕ್ರಮಣ ನಡೆಸಿದ್ದಾರೆ ಮತ್ತು ಅವುಗಳ ಮೇಲೆ ತಮ್ಮ ಸುಳ್ಳು ಹಕ್ಕನ್ನು ಸ್ಥಾಪಿಸಿದ್ದಾರೆ. ಅಯೋಧ್ಯೆ ಮತ್ತು ಧಾರ (ಭೋಜಶಾಲೆ) ತೀರ್ಪುಗಳು ಅಸತ್ಯದ ಮುಖವಾಡ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ಸಾಬೀತುಪಡಿಸಿವೆ. ಈಗ ಕಾಶಿಯ ಜ್ಞಾನವ್ಯಾಪಿಯಿಂದ ಹಿಡಿದು ಮಥುರೆಯ ಶ್ರೀಕೃಷ್ಣ ಜನ್ಮಭೂಮಿಯವರೆಗೆ ಅತಿಕ್ರಮಣಕ್ಕೊಳಗಾದ ಎಲ್ಲಾ ಕ್ಷೇತ್ರಗಳು ಮುಕ್ತಗೊಳ್ಳಬೇಕು ಎಂದು ಹೇಳಿದರು.

ನಾವು ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ! – ಮುಸಲ್ಮಾನ ಪಕ್ಷ

ತೀರ್ಪಿನ ನಂತರ ಮುಸಲ್ಮಾನ ಪಕ್ಷದ ನ್ಯಾಯವಾದಿ ಅರ್ಶದ್ ವಾರ್ಸಿ ಮಾತನಾಡಿ, ಈ ತೀರ್ಪಿನಿಂದ ನಮಗೆ ತೃಪ್ತಿಯಿಲ್ಲ. ಇದರ ವಿರುದ್ಧ ನಾವು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತೇವೆ. ತೀರ್ಪಿನ ಸಂಪೂರ್ಣ ಪ್ರತಿಯನ್ನು ನಾವು ಕಾಯುತ್ತಿದ್ದೇವೆ. ನ್ಯಾಯಾಲಯವು ಪುರಾತತ್ವ ಇಲಾಖೆಯ (ಎಎಸ್‌ಐ) ತಥ್ಯಗಳನ್ನು ಆಧರಿಸಿ ಈ ತೀರ್ಪು ನೀಡಿದೆ ಎಂದು ಅವರು ತಿಳಿಸಿದರು.

‘ಬಾಬರಿ ಪ್ರಕರಣದ ತೀರ್ಪಿಗೆ ಸಾಮ್ಯತೆ ಇದೆ, ಸರ್ವೋಚ್ಚ ನ್ಯಾಯಾಲಯವು ಆದೇಶವನ್ನು ರದ್ದುಗೊಳಿಸುತ್ತದೆ!’ – ಅಸಾದುದ್ದೀನ್ ಓವೈಸಿ

ಸರ್ವೋಚ್ಚ ನ್ಯಾಯಾಲಯವು ಇದರಲ್ಲಿ ಸುಧಾರಣೆ ತರುತ್ತದೆ ಮತ್ತು ಈ ಆದೇಶವನ್ನು ರದ್ದುಗೊಳಿಸುತ್ತದೆ ಎಂದು ನಾವು ಆಶಿಸುತ್ತೇವೆ. ಬಾಬರಿ ಪ್ರಕರಣದ ತೀರ್ಪಿನೊಂದಿಗೆ ಇದು ಸ್ಪಷ್ಟ ಸಾಮ್ಯತೆಯನ್ನು ಹೊಂದಿದೆ ಎಂದು ಎ.ಐ.ಎಂ.ಐ.ಎಂ. ಸಂಸದ ಅಸಾದುದ್ದೀನ್ ಓವೈಸಿ ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. (ಸರ್ವೋಚ್ಚ ನ್ಯಾಯಾಲಯವು ಶ್ರೀರಾಮಜನ್ಮಭೂಮಿ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ತೀರ್ಪು ನೀಡಿರುವುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಮುಸಲ್ಮಾನರು ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದರೂ, ಪುರಾತತ್ವ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯವು ಹಿಂದೂಗಳ ಪರವಾಗಿಯೇ ತೀರ್ಪು ನೀಡಲಿದೆ ಎಂಬುದು ಸ್ಪಷ್ಟವಾಗಿದೆ! – ಸಂಪಾದಕರು)

ನ್ಯಾಯಾಲಯ ಮಂಡಿಸಿದ ಅಂಶಗಳು

ಮಂದಿರದ ವ್ಯವಸ್ಥಾಪನೆಯನ್ನು ಹೇಗೆ ಮಾಡಬೇಕು? ಎಂಬುದನ್ನು ಕೇಂದ್ರ ಸರಕಾರ ನಿರ್ಧರಿಸಲಿ!

ಇದು ಐತಿಹಾಸಿಕ ಮತ್ತು ಸಂರಕ್ಷಿತ ಸ್ಥಳವಾಗಿದ್ದು ಸರಸ್ವತಿ ದೇವಿಗೆ ಸಮರ್ಪಿತವಾದ ಮಂದಿರವಾಗಿದೆ. ಭೋಜಶಾಲೆ ಮಂದಿರದ ವ್ಯವಸ್ಥಾಪನೆಯನ್ನು ಹೇಗೆ ಮಾಡಬೇಕು ಎಂಬುದನ್ನು ಕೇಂದ್ರ ಸರಕಾರ ಮತ್ತು ಪುರಾತತ್ವ ಇಲಾಖೆಯು ನಿರ್ಧರಿಸಬೇಕು. 1958 ರ ಕಾಯಿದೆಯ ಪ್ರಕಾರ ಈ ಆಸ್ತಿಯ ಸಂಪೂರ್ಣ ನಿರ್ವಹಣೆಯು ಪುರಾತತ್ವ ಇಲಾಖೆಯ ಕೈಯಲ್ಲಿರುತ್ತದೆ.

ನಮಾಜ್ ಮಾಡುವ ಹಕ್ಕು ರದ್ದು

ನ್ಯಾಯಾಲಯವು ಪುರಾತತ್ವ ಇಲಾಖೆಯ 2003 ರ ಆದೇಶವನ್ನೂ ರದ್ದುಗೊಳಿಸಿತು. ಈ ನಿಯಮದ ಕಾರಣದಿಂದ ಹಿಂದೂಗಳಿಗೆ ಭೋಜಶಾಲೆಯಲ್ಲಿ ಪೂಜೆ ಮಾಡುವ ಹಕ್ಕನ್ನು ನಿರಾಕರಿಸಲಾಗಿತ್ತು. ಹಾಗೆಯೇ ಮುಸಲ್ಮಾನರಿಗೆ ಪ್ರಾರ್ಥನೆ ಸಲ್ಲಿಸಲು ಹಕ್ಕು ನೀಡಿದ್ದ ಆದೇಶವನ್ನೂ ನ್ಯಾಯಾಲಯವು ರದ್ದುಪಡಿಸಿದೆ.

ಧಾರ ಇಲ್ಲಿ ಬಿಗಿ ಬಂದೋಬಸ್ತ್!

ತೀರ್ಪಿನ ಹಿನ್ನೆಲೆಯಲ್ಲಿ ಇಂದೋರ ಮತ್ತು ಧಾರ ಜಿಲ್ಲಾ ಆಡಳಿತವು ಇಲ್ಲಿ ದೊಡ್ಡ ಮಟ್ಟದ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ತೀರ್ಪಿನ ದಿನ ಶುಕ್ರವಾರವಾಗಿದ್ದರಿಂದ ಭೋಜಶಾಲೆಯಲ್ಲಿ ಮಧ್ಯಾಹ್ನ ಮುಸಲ್ಮಾನರು ಎಂದಿನಂತೆ ನಮಾಜ್‌ ಗೆ ಬಂದಿದ್ದರು. ಈ ಸಮಯದಲ್ಲಿ ಆಡಳಿತವು ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿತು. ಧಾರ ನಗರದ ಭದ್ರತೆಯನ್ನು 12 ಸ್ತರಗಳಲ್ಲಿ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಮೀಸಲು ಪೊಲೀಸ್ ಪಡೆ ಮತ್ತು ಕ್ಷಿಪ್ರ ಕಾರ್ಯಪಡೆಯನ್ನು ಕಟ್ಟೆಚ್ಚರದಲ್ಲಿಡಲಾಗಿದೆ.

ಹಿಂದೂಗಳಿಗೆ ಮಂಗಳವಾರ ಪೂಜೆ ಮಾಡಲು ಅನುಮತಿ ಇತ್ತು

2003 ರಿಂದ ಇಲ್ಲಿ ಪ್ರತಿ ಮಂಗಳವಾರ ಮತ್ತು ವಸಂತ ಪಂಚಮಿಯಂದು ಹಿಂದೂಗಳಿಗೆ ಪೂಜೆ ಮಾಡಲು, ಹಾಗೂ ಶುಕ್ರವಾರ ಮುಸಲ್ಮಾನರಿಗೆ ನಮಾಜ್ ಮಾಡಲು ಅನುಮತಿ ನೀಡಲಾಗಿತ್ತು. ಇತರ ದಿನಗಳಲ್ಲಿ ಈ ಆವರಣವು ಪ್ರವಾಸಿಗರಿಗಾಗಿ ತೆರೆದಿರುತ್ತದೆ. 2013 ಮತ್ತು 2016 ರಲ್ಲಿ ವಸಂತ ಪಂಚಮಿ ಮತ್ತು ಶುಕ್ರವಾರ ಒಂದೇ ದಿನ ಬಂದಿದ್ದರಿಂದ ಇಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ನ್ಯಾಯಾಲಯದಲ್ಲಿ ನಡೆದ ವಾದ-ವಿವಾದಗಳು

1. ಹಿಂದೂಗಳ ಪರವಾಗಿ ಭೋಜಶಾಲೆಯ ಮೇಲೆ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ 1991’ (ಪೂಜಾ ಸ್ಥಳಗಳ ಕಾಯಿದೆ) ಅನ್ವಯಿಸುವುದಿಲ್ಲ ಎಂದು ಹೇಳಲಾಗಿತ್ತು. ಇದು ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟ ಸ್ಮಾರಕವಾಗಿದೆ. 1951 ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳ ಅಧಿನಿಯಮದ ಪಟ್ಟಿಯಲ್ಲಿ ಭೋಜಶಾಲೆಯ ಹೆಸರು ದಾಖಲಾಗಿದೆ. 2024 ರಲ್ಲಿ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಅವರ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಭೋಜಶಾಲೆ ಪ್ರಕರಣಕ್ಕೆ ಅನ್ವಯಿಸಲು ಸಾಧ್ಯವಿಲ್ಲ.

2. ಏಪ್ರಿಲ್ 7, 2003 ರಂದು ಭಾರತೀಯ ಪುರಾತತ್ವ ಇಲಾಖೆಯು ಹೊರಡಿಸಿದ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಯಿತು. ಭೋಜಶಾಲೆಯ ಧಾರ್ಮಿಕ ಸ್ವರೂಪವನ್ನು ನಿರ್ಧರಿಸಿ ಅದನ್ನು ಸಂಪೂರ್ಣವಾಗಿ ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯಕ್ಕೆ ವಿನಂತಿಸಲಾಯಿತು. ಇದರಿಂದ ವರ್ಷಪೂರ್ತಿ ಸರಸ್ವತಿ ದೇವಿಯ ಪೂಜೆ ಮತ್ತು ಹವನವನ್ನು ನಿರಂತರವಾಗಿ ನಡೆಸಲು ಸಾಧ್ಯವಾಗುತ್ತದೆ.

3. ಮುಸಲ್ಮಾನ್ ಪಕ್ಷದ ನ್ಯಾಯವಾದಿ ಶೋಭಾ ಮೆನನ್ ಅವರು ನ್ಯಾಯಾಲಯದಲ್ಲಿ ಮಾತನಾಡುತ್ತಾ, ಭೋಜಶಾಲೆಯು ಮಂದಿರವೇ, ಮಸೀದಿಯೇ ಅಥವಾ ಜೈನಶಾಲೆಯೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿವಾದಿತ ಸ್ಥಳದ ಧಾರ್ಮಿಕ ಸ್ವರೂಪವನ್ನು ನಿರ್ಧರಿಸುವ ಹಕ್ಕು ಸಿವಿಲ್ ನ್ಯಾಯಾಲಯಕ್ಕಿದೆ ಎಂದು ಹೇಳಿದರು. ಉಚ್ಚ ನ್ಯಾಯಾಲಯವು ಕಲಂ 226 ರ ಅಡಿಯಲ್ಲಿ ರಿಟ್ ಅಧಿಕಾರ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುತ್ತಿದೆ.

4. ಜೈನ ಸಮಾಜದವರು, ಶ್ರೀ ವಾಗ್ಜೇವಿ ಎಂದು ಹೇಳಲಾಗುತ್ತಿರುವ ಪ್ರತಿಮೆಯು ಜೈನ ಸಮಾಜದ ಆರಾಧ್ಯ ದೇವಿ ಅಂಬಿಕೆಯದ್ದಾಗಿದೆ ಎಂದು ಹೇಳಿದರು. ಸಿಹೋರ್‌ ನಲ್ಲಿರುವ ದೇವಿ ಅಂಬಿಕೆಯ ಮಂದಿರದಲ್ಲಿ ಭೋಜಶಾಲೆಯಲ್ಲಿ ದೊರೆತ ಮೂರ್ತಿಯಂತೆಯೇ ಮೂರ್ತಿ ಇದೆ. ಆದ್ದರಿಂದ ಇದನ್ನು ಜೈನ ತೀರ್ಥಕ್ಷೇತ್ರವೆಂದು ಘೋಷಿಸಬೇಕು ಎಂದರು.

ನ್ಯಾಯಾಂಗ ಹೋರಾಟದ ಹಂತಗಳು

2022 ವರ್ಷದಲ್ಲಿ ರಂಜನಾ ಅಗ್ನಿಹೋತ್ರಿ ಮತ್ತು ಇತರರು ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಭೋಜಶಾಲೆಯ ಧಾರ್ಮಿಕ ಸ್ವರೂಪ ನಿರ್ಧರಿಸಲು ಮತ್ತು ಹಿಂದೂ ಸಮಾಜಕ್ಕೆ ಸಂಪೂರ್ಣ ಹಕ್ಕು ನೀಡಲು ಒತ್ತಾಯಿಸಿದರು. ಅರ್ಜಿಯಲ್ಲಿ ನಿರಂತರ ಪೂಜೆ ಮಾಡುವ ಹಕ್ಕು, ಪರಿಸರದಲ್ಲಿ ನಮಾಜ ಮಾಡಲು ನಿಷೇಧ, ಟ್ರಸ್ಟ್ ಸ್ಥಾಪನೆ ಮತ್ತು ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಶ್ರೀ ವಾಗ್ಜೇವಿಯ ಮೂರ್ತಿಯನ್ನು ಮರಳಿ ತರುವಂತಹ ಬೇಡಿಕೆಗಳಿದ್ದವು.

ನ್ಯಾಯಾಲಯದ ಆದೇಶದ ನಂತರ ಪುರಾತತ್ವ ಇಲಾಖೆಯಿಂದ ಸಮೀಕ್ಷೆ

2024 ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಭೋಜಶಾಲೆ ಆವರಣದ 98 ದಿನಗಳ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿತ್ತು. ತದನಂತರ 23 ಜನವರಿ 2026 ರಂದು ವಸಂತ ಪಂಚಮಿಯ ದಿನದಂದು ಸರ್ವೋಚ್ಚ ನ್ಯಾಯಾಲಯವು ದಿನಪೂರ್ತಿ ಪೂಜೆ-ಅರ್ಚನೆ ಮಾಡಲು ಅನುಮತಿ ನೀಡಿತು. ಉಚ್ಚ ನ್ಯಾಯಾಲಯದಲ್ಲಿ ಏಪ್ರಿಲ್ 6 ರಿಂದ ನಿಯಮಿತ ವಿಚಾರಣೆ ಪ್ರಾರಂಭವಾಯಿತು, ಇದು ಮೇ 12 ರವರೆಗೆ ನಡೆಯಿತು.

ಹಿಂದೂ ಪಕ್ಷದಿಂದ ಮಾಡಿದ ವಾದ

ಹಿಂದೂ ಪಕ್ಷದ ಪರವಾಗಿ ನ್ಯಾಯವಾದಿಗಳು ಭೋಜಶಾಲೆಯು ಶ್ರೀ ಸರಸ್ವತಿ ಮಾತೆಯ ಮಂದಿರ ಮತ್ತು ಪ್ರಾಚೀನ ವಿದ್ಯಾ ಕೇಂದ್ರವಾಗಿದೆ ಎಂದು ಹೇಳುತ್ತಾ ಐತಿಹಾಸಿಕ ದಾಖಲೆಗಳು, ಪುರಾತತ್ವ ಇಲಾಖೆಯ ಸಮೀಕ್ಷೆ, ಶಿಲಾಶಾಸನಗಳು, ವಾಸ್ತುಶಿಲ್ಪದ ಅವಶೇಷಗಳು ಮತ್ತು ವಸಂತ ಪಂಚಮಿಯಂದು ಪೂಜೆ ಮಾಡುವ ಪರಂಪರೆಯ ಪುರಾವೆಗಳನ್ನು ನೀಡಿದರು. ನ್ಯಾಯವಾದಿ ಮನೀಶ್ ಗುಪ್ತಾ ಅವರು ಪರಮಾರ ರಾಜ ಭೋಜ ಅವರ ‘ಸಮರಾಂಗಣ ಸೂತ್ರಧಾರ’ ಗ್ರಂಥವನ್ನು ಉಲ್ಲೇಖಿಸಿ, ಭೋಜಶಾಲೆಯ ರಚನೆಯು ಅದರಲ್ಲಿ ವಿವರಿಸಲಾದ ಮಂದಿರ ನಿರ್ಮಾಣದ ಮಾನದಂಡಗಳಿಗೆ ಹೊಂದಿಕೆಯಾಗುತ್ತದೆ’, ಎಂದು ಹೇಳಿದರು.

ಸಮೀಕ್ಷಾ ವರದಿಯ ಬಗ್ಗೆ ಮುಸಲ್ಮಾನ್ ಪಕ್ಷದವರು ಪ್ರಶ್ನೆ ಮಾಡಿತ್ತು ಈ ಆವರಣವು ದೀರ್ಘಕಾಲದಿಂದ ಕಮಾಲ್ ಮೌಲಾ ಮಸೀದಿಯಾಗಿ ಬಳಕೆಯಲ್ಲಿದೆ ಮತ್ತು ಧಾರ್ಮಿಕ ಸ್ವರೂಪವನ್ನು ನಿರ್ಧರಿಸುವ ಅಧಿಕಾರವು ಸಿವಿಲ್ ನ್ಯಾಯಾಲಯಕ್ಕಿದೆ ಎಂದು ಮುಸಲ್ಮಾನ್ ಪಕ್ಷವು ನ್ಯಾಯಾಲಯದಲ್ಲಿ ವಾದಿಸಿತು. ನ್ಯಾಯವಾದಿ ಮತ್ತು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ಪುರಾತತ್ವ ಇಲಾಖೆಯ ಸಮೀಕ್ಷಾ ವರದಿಯ ಬಗ್ಗೆ ಪ್ರಶ್ನೆ ಎತ್ತುತ್ತಾ, ಸಮೀಕ್ಷೆಯ ಸಮಯದಲ್ಲಿ ಒದಗಿಸಲಾದ ಛಾಯಾಚಿತ್ರಗಳು ಮತ್ತು ವಿಡಿಯೋಗ್ರಫಿ ಸ್ಪಷ್ಟವಾಗಿರಲಿಲ್ಲ ಎಂದು ಹೇಳಿದರು. ಅಯೋಧ್ಯೆ ಪ್ರಕರಣಕ್ಕೆ ವ್ಯತಿರಿಕ್ತವಾಗಿ ಭೋಜಶಾಲೆಯಲ್ಲಿ ಯಾವುದೇ ಸ್ಥಾಪಿತ ಮೂರ್ತಿ ಅಸ್ತಿತ್ವದಲ್ಲಿಲ್ಲ ಎಂದೂ ಅವರು ವಾದಿಸಿದರು.

ಭೋಜಶಾಲೆಯ ಇತಿಹಾಸ

ಈ ವಾಸ್ತುವಿನ ಮೂಲವು 11 ನೇ ಶತಮಾನದಲ್ಲಿ ಪರಮಾರ ವಂಶದ ಶ್ರೇಷ್ಠ ರಾಜ ಸಮ್ರಾಟ್ ಭೋಜ (1000-1055) ಅವರ ಆಳ್ವಿಕೆಯಲ್ಲಿದೆ. ರಾಜ ಭೋಜರು ವಿದ್ಯೆಯ ದೊಡ್ಡ ಆಶ್ರಯದಾತರಾಗಿದ್ದರು. ಅವರು ಧಾರದಲ್ಲಿ ಒಂದು ಭವ್ಯ ಮಹಾವಿದ್ಯಾಲಯ (ಸಂಸ್ಕೃತ ವಿದ್ಯಾಲಯ) ಮತ್ತು ಸರಸ್ವತಿ ಮಂದಿರವನ್ನು ಸ್ಥಾಪಿಸಿದ್ದರು, ಇಲ್ಲಿಗೆ ದೂರದೂರದಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದರು. 14 ನೇ ಶತಮಾನದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ತದನಂತರದ ಮಾಲವಾದ ಮುಸಲ್ಮಾನ್ ಸುಲ್ತಾನರು ಈ ಪ್ರದೇಶವನ್ನು ವಶಪಡಿಸಿಕೊಂಡರು. 1401 ರಲ್ಲಿ ದಿಲಾವರ್ ಖಾನ್ ಗೌರಿ ಮತ್ತು ನಂತರ 1514 ರಲ್ಲಿ ಮಹಮೂದ್ ಶಾ ಖಿಲ್ಜಿ ಇಲ್ಲಿನ ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಸಿದರು ಮತ್ತು ಮಂದಿರದ ಸ್ತಂಭಗಳನ್ನು ಹಾಗೂ ಸಾಮಗ್ರಿಗಳನ್ನು ಬಳಸಿ ರಚನೆಯನ್ನು ಬದಲಾಯಿಸಿದರು.