ಕೊಲ್ಲಾಪುರಿ ಚಪ್ಪಲಿ ತಯಾರಿಸುವ ಸಾಂಪ್ರದಾಯಿಕ ಕುಶಲಕರ್ಮಿಗಳಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮ! – ದೇವೇಂದ್ರ ಫಡ್ನವೀಸ್, ಮುಖ್ಯಮಂತ್ರಿ, ಮಹಾರಾಷ್ಟ್ರ

೩೦೦ ಕುಶಲಕರ್ಮಿಗಳ ಪೈಕಿ ೩೦ ಜನರಿಗೆ ಇಟಲಿಯ ‘ಪ್ರಾಡಾ’ (Prada) ಅಕಾಡೆಮಿಯಲ್ಲಿ ಸುಧಾರಿತ ತರಬೇತಿಯ ಅವಕಾಶ!

ಮುಂಬಯಿ – ಮಹಾರಾಷ್ಟ್ರದ ಕುಶಲಕರ್ಮಿಗಳ ಸೃಜನಶೀಲತೆಯಿಂದ ಜನ್ಮತಾಳಿದ ಕೊಲ್ಲಾಪುರಿ ಚಪ್ಪಲಿ ಇಂದು ಜಾಗತಿಕ ಮಟ್ಟದ ಐಷಾರಾಮಿ (Luxury) ಉತ್ಪನ್ನವಾಗಿದೆ. ‘ಮೇಡ್ ಇನ್ ಇಂಡಿಯಾ’ದ ಸಾಮರ್ಥ್ಯವನ್ನು ಮಹಾರಾಷ್ಟ್ರವು ಜಗತ್ತಿನ ಮುಂದೆ ಪರಿಣಾಮಕಾರಿಯಾಗಿ ಪ್ರದರ್ಶಿಸಿದೆ. ಇದರ ಭಾಗವಾಗಿ, ಕೊಲ್ಲಾಪುರಿ ಚಪ್ಪಲಿ ತಯಾರಿಸುವ ಸಾಂಪ್ರದಾಯಿಕ ಕುಶಲಕರ್ಮಿಗಳಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಅವರು,

೧. ಭಾರತೀಯ ಸಾಂಪ್ರದಾಯಿಕ ಚರ್ಮಕಲೆಯಾದ ಕೊಲ್ಲಾಪುರಿ ಚಪ್ಪಲಿಗಳ ಪರಂಪರೆಯನ್ನು ಜಗತ್ತಿನಾದ್ಯಂತ ತಲುಪಿಸಲು, ವಿಶ್ವದರ್ಜೆಯ ‘ಪ್ರಾಡಾ’ (ಇಟಲಿಯ ಬಟ್ಟೆ ಮತ್ತು ಫ್ಯಾಷನ್‌ಗೆ ಸಂಬಂಧಿಸಿದ ಪ್ರಸಿದ್ಧ ಸಂಸ್ಥೆ) ಮತ್ತು ‘ಲಿಡ್‌ಕಾಮ್’ (ಚರ್ಮೋದ್ಯಮ ಅಭಿವೃದ್ಧಿಪಡಿಸುವ ಮಹಾರಾಷ್ಟ್ರ ಸರಕಾರದ ಸಂಸ್ಥೆ) ನಡುವೆ ಇತ್ತೀಚೆಗೆ ಸಾಮೂಹಿಕ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ, ಕುಶಲಕರ್ಮಿಗಳ ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡಲು ‘ಪ್ರಾಡಾ’ ಮುಂದಿನ ೩ ವರ್ಷಗಳ ಕಾಲ ಮಹಾರಾಷ್ಟ್ರ ಮತ್ತು ಕರ್ನಾಟಕದ ೩೦೦ ಕೊಲ್ಲಾಪುರಿ ಕುಶಲಕರ್ಮಿಗಳ ತರಬೇತಿ ಕಾರ್ಯಕ್ರಮಕ್ಕಾಗಿ ಸಂಪೂರ್ಣ ಧನಸಹಾಯವನ್ನು ನೀಡಲಿದೆ. ಅವರಲ್ಲಿ ಅತ್ಯುತ್ತಮ ೩೦ ಕುಶಲಕರ್ಮಿಗಳಿಗೆ ಇಟಲಿಯ ‘ಪ್ರಾಡಾ’ ಅಕಾಡೆಮಿಯಲ್ಲಿ ಸುಧಾರಿತ ತರಬೇತಿ ಪಡೆಯುವ ಅವಕಾಶ ಸಿಗಲಿದೆ.

೨. ಸಾಂಪ್ರದಾಯಿಕ ಕಲೆಯನ್ನು ಉಳಿಸಿಕೊಂಡು ಬಂದಿರುವ ಕುಶಲಕರ್ಮಿಗಳ ಪೀಳಿಗೆಯನ್ನು ಗೌರವಿಸಲು ಮತ್ತು ಅವರ ಕೌಶಲ್ಯಕ್ಕೆ ಜಾಗತಿಕ ಮಟ್ಟದಲ್ಲಿ ಸರಿಯಾದ ಮಾನ್ಯತೆ ನೀಡಲು ಈ ಪಾಲುದಾರಿಕೆಯು ಅತ್ಯಂತ ಮಹತ್ವದ್ದಾಗಿದೆ.