ಮೊದಲ ಮಹಾಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದ ೩೩ ಸಾವಿರ ಭಾರತೀಯ ಸೈನಿಕರಿಗೆ ‘ಹುತಾತ್ಮ’ ಗೌರವ !

ಬ್ರಿಟನ್ ಒಂದು ಶತಮಾನದ ನಂತರ ತಪ್ಪನ್ನು ಸರಿಪಡಿಸಿಕೊಂಡಿದೆ !

ಲಂಡನ್ (ಬ್ರಿಟನ್) – ಬ್ರಿಟನ್ ೧೦೦ ವರ್ಷಗಳ ಹಿಂದಿನ ತನ್ನ ಐತಿಹಾಸಿಕ ತಪ್ಪನ್ನು ತಿದ್ದಿಕೊಂಡಿದ್ದು, ಮೊದಲ ಮಹಾಯುದ್ಧದಲ್ಲಿ ತನ್ನ ಪರವಾಗಿ ಹೋರಾಡಿದ ೩೩ ಸಾವಿರ ಭಾರತೀಯ ಸೈನಿಕರ ಬಲಿದಾನವನ್ನು ಗೌರವಿಸಿದೆ. ಈ ವೀರ ಸೈನಿಕರ ಹೆಸರುಗಳನ್ನು ಇರಾಕ್‌ನಲ್ಲಿರುವ ‘ಬಸ್ರಾ ಮೆಮೋರಿಯಲ್’ನಲ್ಲಿ ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ. ಒಂದು ಶತಮಾನದ ನಂತರವಾದರೂ; ಜಗತ್ತು ಭಾರತದ ವೀರ ಸೈನಿಕರ ಶೌರ್ಯವನ್ನು ಗುರುತಿಸಿದಂತಾಗಿದೆ.

೧. ಮೊದಲ ಮಹಾಯುದ್ಧದ ಸಮಯದಲ್ಲಿ ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಯುದ್ಧದ ಸಮಯದಲ್ಲಿ ಸೈನಿಕರ ಕೊರತೆ ಎದುರಾದಾಗ, ಬ್ರಿಟನ್ ಸಾವಿರಾರು ಭಾರತೀಯ ಯುವಕರನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಂಡು ಏಷ್ಯಾ, ಆಫ್ರಿಕಾ ಮತ್ತು ಯುರೋಪಿನ ವಿವಿಧ ರಂಗಗಳಲ್ಲಿ ಹೋರಾಡಲು ಕಳುಹಿಸಿತ್ತು.

೨. ಈ ಸೈನಿಕರು ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಅಪಾರ ಶೌರ್ಯವನ್ನು ಪ್ರದರ್ಶಿಸಿ ಶತ್ರುಗಳನ್ನು ಸೋಲಿಸಿದರು. ಈ ಭೀಕರ ಯುದ್ಧದಲ್ಲಿ ಸಾವಿರಾರು ಭಾರತೀಯ ಸೈನಿಕರು ಪ್ರಾಣಾರ್ಪಣೆ ಮಾಡಿದರು; ಆದರೆ ಬ್ರಿಟನ್ ಆ ಸಮಯದಲ್ಲಿ ಅವರ ಬಲಿದಾನಕ್ಕೆ ಅಧಿಕೃತ ಮಾನ್ಯತೆ ನೀಡಿರಲಿಲ್ಲ ಮತ್ತು ಅವರಿಗೆ ಮಹಾಯುದ್ಧದ ‘ಹುತಾತ್ಮ’ ಎಂಬ ಸ್ಥಾನಮಾನವನ್ನೂ ನೀಡಿರಲಿಲ್ಲ; ಆದರೆ ಈಗ ಬ್ರಿಟನ್ ಅವರಿಗೆ ‘ಹುತಾತ್ಮ’ ಗೌರವವನ್ನು ನೀಡಿದೆ.

೩. ಬ್ರಿಟನ್‌ನಲ್ಲಿರುವ ‘ಕಾಮನ್‌ವೆಲ್ತ್ ವಾರ್ ಗ್ರೇವ್ ಕಮಿಷನ್’ ಎಂಬ ಸಂಸ್ಥೆಯು ಎರಡೂ ಮಹಾಯುದ್ಧಗಳಲ್ಲಿ ಹುತಾತ್ಮರಾದ ಸೈನಿಕರ ನೆನಪುಗಳನ್ನು ಸಂರಕ್ಷಿಸುವ ಮತ್ತು ಅವರ ದಾಖಲೆಗಳನ್ನು ಇಡುವ ಕೆಲಸ ಮಾಡುತ್ತದೆ. ಈ ಸಂಸ್ಥೆಯು ‘ಬಸ್ರಾ ಮೆಮೋರಿಯಲ್ ಡಿಜಿಟಲ್ ರೆಕಾರ್ಡ್’ನಲ್ಲಿ ೪೬ ಸಾವಿರ ಹುತಾತ್ಮರ ಹೆಸರುಗಳನ್ನು ಸೇರಿಸಿದ್ದು, ಅವುಗಳಲ್ಲಿ ೩೩ ಸಾವಿರ ಭಾರತೀಯ ಸೈನಿಕರ ಹೆಸರುಗಳಿವೆ. ಈ ಡಿಜಿಟಲ್ ದಾಖಲೆಯಲ್ಲಿ ಸೈನಿಕರ ಹೆಸರು, ಹುದ್ದೆ ಮತ್ತು ರೆಜಿಮೆಂಟ್ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ.

೪. ಬ್ರಿಟನ್ ತನ್ನ ಹುತಾತ್ಮ ಸೈನಿಕರ ಸ್ಮರಣಾರ್ಥ ಸ್ಮಾರಕವನ್ನು ಇರಾಕ್‌ನ ಬಸ್ರಾದಲ್ಲಿ ನಿರ್ಮಿಸಿದೆ; ಆದರೆ ಪ್ರಸ್ತುತ ಇರಾಕ್ ಸ್ವತಂತ್ರ ದೇಶವಾಗಿರುವುದರಿಂದ ಅಲ್ಲಿ ಹೊಸ ಕಲ್ಲಿನ ಶಿಲಾಶಾಸನಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಸಂಸ್ಥೆಯು ಡಿಜಿಟಲ್ ಆಯ್ಕೆಯನ್ನು ಆರಿಸಿಕೊಂಡಿದೆ. ಇರಾಕ್‌ನಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಈ ಡಿಜಿಟಲ್ ವ್ಯವಸ್ಥೆಯು ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಗೌರವ ಸಿಗಲು ಇಷ್ಟು ವಿಳಂಬವೇಕೆ ?

ಇತಿಹಾಸಕಾರರ ಪ್ರಕಾರ, ಭಾರತವನ್ನು ೨೦೦ ವರ್ಷಗಳ ಕಾಲ ಗುಲಾಮರನ್ನಾಗಿ ಮಾಡಿದ್ದ ಬ್ರಿಟಿಷರು ಯುದ್ಧದಲ್ಲಿಯೂ ಭಾರತೀಯ ಸೈನಿಕರನ್ನು ದ್ವಿತೀಯ ದರ್ಜೆಯವರಂತೆ ನಡೆಸಿಕೊಂಡಿದ್ದರು. ಭಾರತೀಯ ಸೈನಿಕರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು; ಆದರೆ ಅವರಿಗೆ ಎಂದಿಗೂ ಉನ್ನತ ಅಧಿಕಾರಿಗಳಾಗುವ ಅವಕಾಶ ನೀಡುತ್ತಿರಲಿಲ್ಲ. ಈ ತಾರತಮ್ಯ ಮೊದಲ ಮಹಾಯುದ್ಧದ ನಂತರವೂ ಮುಂದುವರಿದಿತ್ತು; ಆದ್ದರಿಂದಲೇ ಅಂದು ಅವರ ಹೆಸರುಗಳನ್ನು ದಾಖಲಿಸದೆ ಕೇವಲ ಸಂಖ್ಯೆಯನ್ನು ಮಾತ್ರ ಬರೆಯಲಾಗಿತ್ತು.